

ಬೆಂಗಳೂರು: ಬಿ.ಶ್ರೀರಾಮುಲು ಕೈಯಿಂದ ಆರೋಗ್ಯ ಖಾತೆಯನ್ನಷ್ಟೇ ಹಿಂಪಡೆದು, ಅದಕ್ಕೆ ಬದಲಾಗಿ ಸಮಾಜ ಕಲ್ಯಾಣ ಖಾತೆ ಕೊಡಲಾಗುತ್ತದೆ ಎನ್ನಲಾಗಿತ್ತು. ಇದೀಗ ಶ್ರೀರಾಮುಲು ಬಳಿಯಿದ್ದ ಆರೋಗ್ಯ ಖಾತೆ ಜತೆಗೆ ಹಿಂದುಳಿದ ವರ್ಗಗಳ ಇಲಾಖೆಯನ್ನು ಹಿಂಪಡೆಯುವ ಮೂಲಕ ಉಪ ಮುಖ್ಯಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದ ಶ್ರೀರಾಮುಲುಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಬಿಗ್ ಶಾಕ್ ನೀಡಿದ್ದಾರೆ.
ಯಡಿಯೂರಪ್ಪ ಅವರು ಇಬ್ಬರ ಖಾತೆಯನ್ನು ದಿಢೀರ್ ಬದಲಾವಣೆ ಮಾಡಿದ್ದಾರೆ. ಸಚಿವ ಸಂಪುಟ ಪುನರ್ ವಿಸ್ತರಣೆಗೂ ಮುನ್ನವೇ ಬಿ.ಶ್ರೀರಾಮುಲು ಬಳಿಯಿದ್ದ ಆರೋಗ್ಯ ಖಾತೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ಗೆ ಕೊಡುವ ಸುದ್ದಿ ತಿಳಿಯುತ್ತಿದ್ದಂತೆಯೇ ಉತ್ತರ ಕರ್ನಾಟಕದ ಹಲವು ಶಾಸಕರು ಸೇರಿದಂತೆ ಸ್ವತಃ ಶ್ರೀರಾಮುಲು ಕೂಡ ಅಸಮಾಧಾನ ಹೊರಹಾಕಿದ್ದರು. ಇದೀಗ ಖಾತೆ ಬದಲಾಣೆ ಮಾಡಿರುವ ಅಧಿಕೃತ ಆದೇಶ ಹೊರಬಿದ್ದಿದ್ದು, ಶ್ರೀರಾಮುಲು ಬಳಿಯಿದ್ದ ಆರೋಗ್ಯ ಖಾತೆ ಜತೆಗೆ ಹಿಂದುಳಿದ ವರ್ಗಗಳ ಖಾತೆಯನ್ನೂ ವಾಪಸ್ ಪಡೆಯುವ ಮೂಲಕ ಸಿಎಂ ಶಾಕ್ ಕೊಟ್ಟಿದ್ದಾರೆ.
ಡಿಸಿಎಂ ಗೋವಿಂದ ಕಾರಜೋಳಗೆ ಲೋಕೋಪಯೋಗಿ ಖಾತೆಯನ್ನು ಉಳಿಸಲಾಗಿದೆ. ಖಾತೆ ಮರು ಹಂಚಿಕೆಗೆ ರಾಜ್ಯಪಾಲರಿಂದ ಅಧಿಕೃತ ಅಂಕಿತ ಬಿದ್ದಿದೆ.