More

    ಭತ್ತಕ್ಕೆ ದುಂಡಾಣು ರೋಗ: ಹೂವಿನಹಡಗಲಿ ತಾಲೂಕಿನ ಗದ್ದೆಗಳಿಗೆ ಕೃಷಿ ಅಧಿಕಾರಿಗಳು ಭೇಟಿ, ಪರಿಶೀಲನೆ

    ಹೂವಿನಹಡಗಲಿ: ಭತ್ತಕ್ಕೆ ದುಂಡಾಣು ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೋಮವಾರ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೃಷಿ ಇಲಾಖೆ ಅಧಿಕಾರಿಗಳು ತಾಲೂಕಿನ ಕೋಟ್ನಿಕಲ್, ನವಲಿ, ಕಾಗನೂರು ಗ್ರಾಮಗಳ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

    ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಂದಾಳು ಡಾ.ಸಿ.ಎಂ.ಕಾಲಿಬಾವಿ ಮಾತನಾಡಿ, ಸೆಪ್ಟೆಂಬರ್‌ನಲ್ಲಿ ಮೋಡಕವಿದ ವಾತಾವರಣ ಹಾಗೂ ಹೆಚ್ಚಿನ ಮಳೆಯಾಗಿದ್ದರಿಂದ ಭತ್ತಕ್ಕೆ ಕೀಟ ಬಾಧೆ ಕಂಡುಬಂದಿದೆ. ಸಸ್ಯ ಶರೀರ ಕ್ರಿಯೆಯ ನ್ಯೂನತೆಯಿಂದ ಹೆಚ್ಚಿನ ರೀತಿಯಲ್ಲಿ ಎಲೆ ಹಳದಿ ಹಾಗೂ ಕೆಂಪಾಗುವಿಕೆಯ ಜತೆಗೆ ದುಂಡಾಣು ಅಂಗಮಾರಿ ರೋಗದ ಬಾಧೆ ಹೆಚ್ಚಾಗಿದೆ ಎಂದು ಹೇಳಿದರು.

    ರೈತರು ಭತ್ತದ ಗದ್ದೆಯನ್ನು ತಿಂಗಳಿಗೊಮ್ಮೆ ಒಣಗಿಸುವುದು ಹಾಗೂ ನೀರು ಕಟ್ಟುವುದರಿಂದ ಕೀಟ ಮತ್ತು ರೋಗ ಬಾಧೆ ತಡೆಗಟ್ಟಬಹುದು. ರೈತರು ಭತ್ತದ ಹೂ ಹಾಗೂ ಕಾಳು ಕಟ್ಟುವ ಸಂದರ್ಭದಲ್ಲಿ ಮಾತ್ರ ನೀರನ್ನು ತಪ್ಪದೆ ಕೊಡಬೇಕಾಗುತ್ತದೆ. ಬೇರುಗಳಲ್ಲಿ ಗಾಳಿಯಾಡುವಿಕೆಯಿಂದ ಭತ್ತ ಸದೃಢವಾಗಿ ಬೆಳೆಯಲು ಹಾಗೂ ಪೋಷಕಾಂಶಗಳ ಹೀರುವಿಕೆ ಸಾಮರ್ಥ್ಯ ಹೆಚ್ಚಿಸಬಹುದು ಎಂದರು.

    ರೋಗ ಹತೋಟಿಗೆ ತರಲು ತಾಮ್ರದ ಆಕ್ಸಿಕ್ಲೋರೈಡ್ (ಸಿಇಒ) 2.5 ಗ್ರಾಂ. ಪ್ರತಿ ಲೀಟರ್ ನೀರಿನ ಜತೆಗೆ ಬ್ಯಾಕ್ಟೀರಿಯಾ ನಾಶಕ (ಸ್ಟ್ರೆಪ್ರೋಸೈಕ್ಲಿನ್ ಸಲ್ಫೇಟ್) 0.5 ಗ್ರಾಂ ಪ್ರತಿ ಲೀ. ನೀರು ಹಾಗೂ ಸಮೃದ್ಧಿ ಅಥವಾ ಲಘು ಪೋಷಕಾಂಶಗಳನ್ನು ಸೇರಿಸಿ ಸಿಂಪರಣೆ ಮಾಡಬೇಕು ಎಂದು ಸಲಹೆ ನೀಡಿದರು. ಕೃಷಿ ಅಧಿಕಾರಿ ನೀಲಾನಾಯ್ಕ, ರಾಜಶೇಖರ್, ಶಂಕರ್, ಕೀಟ ತಜ್ಞ ಹನುಮಂತಪ್ಪ ಶ್ರೀಹರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts