ನಿನ್ನೆ ರಾತ್ರಿ ಮನೆಯಲ್ಲಿ ಮಲಗಿದ್ದಳು, ಇವತ್ತು ಬೆಳಗ್ಗೆ ಮನೆ ಪಕ್ಕದಲ್ಲೇ ಶವವಾಗಿದ್ದಳು!

Lady Body
Published on

ರಾಜಸ್ಥಾನ: ನಿನ್ನೆ ಎಂದರೆ ಭಾನುವಾರ ರಾತ್ರಿ ಮನೆಯಲ್ಲೇ ಮಲಗಿದ್ದ ಹದಿನಾರು ವರ್ಷದ ಹುಡುಗಿ ಇಂದು ಬೆಳಗ್ಗೆ ಮನೆಗೆ ಹತ್ತಿರದಲ್ಲೇ ಶವವಾಗಿ ಪತ್ತೆಯಾಗಿದ್ದಾಳೆ. ರಾತ್ರಿ ಬೆಳಗಾಗುವುದರೊಳಗೆ ಹೆಣವಾಗಿದ್ದ ಈಕೆಯ ಗಂಟಲನ್ನು ಸೀಳಲಾಗಿದ್ದು, ಬರ್ಬರವಾಗಿ ಕೊಲೆ ಮಾಡಲಾಗಿದೆ.

ಶವ ಪತ್ತೆಯಾಗಿರುವ ಸ್ಥಳ ಹಾಗೂ ಅದು ಕಂಡು ಬಂದಿರುವ ಪರಿಸ್ಥಿತಿಯನ್ನು ಗಮನಿಸಿರುವ ಪೊಲೀಸರು, ಆರೋಪಿಗಳು ಯುವತಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರಬಹುದು ಎಂದು ಅಂದಾಜಿಸಿದ್ದು, ಸ್ಥಳೀಯ ಇಬ್ಬರು ಯುವಕರ ಮೇಲೆ ಅನುಮಾನ ಇರುವುದಾಗಿ ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ರಾಜಸ್ಥಾನದ ಬರ್ಮರ್ ಎಂಬಲ್ಲಿನ ಸುವಾಲಾ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ. ಹದಿನಾರು ವರ್ಷದ ಹುಡುಗಿಯ ಶವ ಗಂಟಲು ಸೀಳಿದ ಸ್ಥಿತಿಯಲ್ಲಿ ಮನೆ ಸಮೀಪದ ಬಯಲಿನಲ್ಲಿ ಕಂಡುಬಂದಿದೆ. ಪೊಲೀಸರು ಹೆಚ್ಚಿನ ತನಿಖೆಗಾಗಿ ಶವವನ್ನು ಮರಣೋತ್ತರ ಪರೀಕ್ಷೆಗೆ ಒಪ್ಪಿಸಿದ್ದಾರೆ. ವರದಿ ಬಂದ ಬಳಿಕ ಮುಂದಿನ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ.

ಯುವತಿ ಭಾನುವಾರ ರಾತ್ರಿ ಮನೆಯಲ್ಲೇ ಮಲಗಿದ್ದಳು. ಬೆಳಗ್ಗೆ ಎದ್ದು ನೋಡಿದಾಗ ಆಕೆ ಕಾಣಿಸುತ್ತಿರಲಿಲ್ಲ. ಗಾಬರಿಗೊಂಡು ಸುತ್ತಮುತ್ತ ಹುಡುಕಾಡಿದಾಗ ಆಕೆಯ ಶವ ಮನೆಯ ಹಿಂದಿನ ಪ್ರದೇಶದಲ್ಲಿ ಕಂಡುಬಂದಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net