

ಚಂಡೀಗಢ: ಪ್ರೀತಿಯಿಂದ ಸಾಕಬೇಕಿದ್ದ ಅಪ್ಪನೇ ತನ್ನ ಅಪ್ರಾಪ್ತ ಮಗಳ ಮೇಲೆ ಏಳು ವರ್ಷಗಳ ಕಾಲ ಅತ್ಯಾಚಾರ ನಡೆಸಿರುವ ಆಘಾತಕಾರಿ ಘಟನೆ ಹರಿಯಾಣದಲ್ಲಿ ನಡೆದಿದೆ. ಅತ್ಯಾಚಾರಕ್ಕೆ ಒಳಗಾದ ಮಗಳೇ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ತನ್ನ ಮೇಲಾದ ದೌರ್ಜನ್ಯದ ಕಥೆಯನ್ನು ಬಿಚ್ಚಿಟ್ಟಿದ್ದಾಳೆ.
ಹಿಸಾರ್ ಗ್ರಾಮದಲ್ಲಿ ಇಂತಹ ಘಟನೆ ನಡೆದಿದೆ. 17 ವರ್ಷದ ಬಾಲಕಿ ಹಿಸಾರ್ನ ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ವಿಚಾರವಾಗಿ ದೂರು ನೀಡಿದ್ದಾಳೆ. ನನ್ನ ಅಪ್ಪ ಏಳು ವರ್ಷಗಳಿಂದ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ. ನಾನು ಹಲವು ಬಾರಿ ಗರ್ಭವತಿ ಆಗಿದ್ದೆ. ಆಗೆಲ್ಲ ಬಲವಂತವಾಗಿ ಎಳೆದೊಯ್ದು ಗರ್ಭಪಾತ ಮಾಡಿಸಿದ್ದಾನೆ. ಆತನ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಕೊಲೆ ಮಾಡುವುದಾಗಿ ಬೆದರಿಸುತ್ತಾನೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾಳೆ. ನಾನು ಮಾತ್ರವಲ್ಲ, ನನ್ನ 11 ವರ್ಷದ ತಂಗಿಗೂ ಆತ ಲೈಂಗಿಕ ಕಿರುಕುಳ ನೀಡುತ್ತಾನೆ ಎಂದು ಬಾಲಕಿ ಹೇಳಿದ್ದಾಳೆ.
ಇದೀಗ ಬಾಲಕಿಯ ತಂದೆಯ ಮೇಲೆ ಐಪಿಸಿ ಸಿಕ್ಷನ್ 376 (2) (ಪುನರಾವರ್ತಿತ ಅತ್ಯಾಚಾರ), 376 (2) ಎಫ್ (ರಕ್ಷಕರಿಂದ ಅತ್ಯಾಚಾರ), 313 (ಮಹಿಳೆಯ ಒಪ್ಪಿಗೆಯಿಲ್ಲದೆ ಗರ್ಭಪಾತಕ್ಕೆ ಕಾರಣವಾಗುತ್ತದೆ), 506 (ಕ್ರಿಮಿನಲ್ ಬೆದರಿಕೆ), 323 (ಸ್ವಯಂಪ್ರೇರಣೆಯಿಂದ ನೋವನ್ನುಂಟುಮಾಡುವುದು), 354-ಎ (1) (ಲೈಂಗಿಕ ಮಾತುಗಳು) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಷ್ಟೇ ಅಲ್ಲದೆ ಪೊಕ್ಸೊ ಕಾಯ್ದೆಯಡಿಯಲ್ಲೂ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)