More

    ಇದು ಉಗ್ರರು ಬಳಸುತ್ತಿದ್ದ ಆ್ಯಪ್​ ಅಂತೆ; ರಹಸ್ಯ ಬಿಚ್ಚಿಟ್ಟವರಲ್ಲೊಬ್ಬ ಬೆಂಗಳೂರಿನ ‘ಡಾ.ಬ್ರೇವ್’

    ನವದೆಹಲಿ: ವಾಟ್ಸ್​ಆ್ಯಪ್​ ಪ್ರೈವೆಸಿ ಪಾಲಿಸಿ ಬದಲಾಗುತ್ತಿದ್ದಂತೆ ವಾಟ್ಸ್​ಆ್ಯಪ್​ ಬದಲಿಗೆ ಉತ್ತಮ ಆಯ್ಕೆ ಎಂದು ಹಲವರು ಟೆಲಿಗ್ರಾಮ್​, ಸಿಗ್ನಲ್​ ಆ್ಯಪ್​ಗಳತ್ತ ಮುಖ ಮಾಡಿದ್ದಾರೆ. ಆದರೆ ಪ್ರೈವೆಸಿ ವಿಷಯದಲ್ಲಿ ಇವುಗಳಿಗಿಂತಲೂ ಬೆಟರ್ ಆ್ಯಪ್​ ಇನ್ನೊಂದಿದೆ ಹಾಗೂ ಉಗ್ರರು ತಮ್ಮ ರಹಸ್ಯ ಕಾರ್ಯಾಚರಣೆಗೂ ಅದೇ ಆ್ಯಪ್​ ಬಳಸುತ್ತಿದ್ದಾರೆ ಎಂಬ ವಿಷಯವೊಂದು ಈಗ ಬಹಿರಂಗಗೊಂಡಿದೆ. ಅದರಲ್ಲೂ ಇಂಥದ್ದೊಂದು ರಹಸ್ಯ ಹೊರಬೀಳುವಲ್ಲಿ ಪ್ರಮುಖ ಕಾರಣಗಳ ಪೈಕಿ ಬೆಂಗಳೂರಿನ ಡಾ. ಬ್ರೇವ್ ಕೂಡ ಒಬ್ಬ.

    ಉಗ್ರರು ತಮ್ಮ ರಹಸ್ಯ ಕಾರ್ಯಾಚರಣೆಗೆ ಈ ಆ್ಯಪ್​ ಬಳಸುತ್ತಿದ್ದರು ಎಂಬ ಅಂಶವನ್ನು ನ್ಯಾಷನಲ್ ಇನ್​ವೆಸ್ಟಿಗೇಷನ್ ಏಜೆನ್ಸಿ (ಎನ್​ಐಎ) ನಡೆಸಿದ ತನಿಖೆಯಲ್ಲಿ ಬಹಿರಂಗಗೊಂಡಿದೆ. ಅಂದರೆ ಈಗ ವಾಟ್ಸ್​ಆ್ಯಪ್​ಗಿಂತ ಹೆಚ್ಚಿನ ವೈಯಕ್ತಿಕ ಭದ್ರತೆ ಇರುವ ಟೆಲಿಗ್ರಾಮ್​ ಹಾಗೂ ಸಿಗ್ನಲ್​ ಬೆಸ್ಟ್ ಎನ್ನಲಾಗುತ್ತಿದ್ದರೂ ಉಗ್ರರು ಬಳಸುತ್ತಿರುವ ಆ್ಯಪ್​ ಅದಕ್ಕಿಂತಲೂ ಹೆಚ್ಚು ಪ್ರೈವೆಸಿ ಹೊಂದಿದೆ ಎಂಬ ಅಂಶ ಈ ತನಿಖೆಯಲ್ಲಿ ಕಂಡು ಬಂದಿದೆ.

    ಇಸ್ಲಾಮಿಕ್​ ಸ್ಟೇಟ್​ ಇರಾಕ್​ ಆ್ಯಂಡ್ ಸಿರಿಯ ಖೋರಸಾನ್​ ಪ್ರೊವಿನ್ಸ್ (ಐಎಸ್​ಐಎಸ್​-ಕೆಪಿ) ಎಂಬ ಉಗ್ರ ಸಂಘಟನೆಗೆ ಸೇರಿದ್ದ ಆರೋಪಿಗಳಾದ ಜಹಾನ್​ಜೈಬ್​ ಸಮಿ ವಾನಿ, ಆತನ ಪತ್ನಿ ಹೀನಾ ಬಶೀರ್ ಬೇಗ್​ ಮತ್ತು ಬೆಂಗಳೂರು ಮೂಲದ ವೈದ್ಯ, ಉಗ್ರರ ವಲಯದಲ್ಲಿ ‘ಡಾ.ಬ್ರೇವ್’ ಎಂದೇ ಕರೆಯಲಾಗುತ್ತಿರುವ ಅಬ್ದೂರ್ ರಹಮಾನ್ ಹೆಚ್ಚಿನ ಭದ್ರತೆ ಇರುವ ಅರ್ಥಾತ್ ಪ್ರೈವೆಸಿ ಇರುವ ‘ಥ್ರೀಮಾ’ ಎಂಬ ಮೆಸೇಜಿಂಗ್ ಆ್ಯಪ್ ಬಳಸುತ್ತಿದ್ದರು ಎಂಬುದು ಎನ್​ಐಎ ಅಧಿಕಾರಿಗಳಿಗೆ ತಿಳಿದು ಬಂದಿದೆ. ಈ ಪೈಕಿ ಜಹಾನ್​ಜೈಬ್​ ಮತ್ತು ಆತನ ಪತ್ನಿ 2020ರ ಮಾರ್ಚ್​ನಲ್ಲಿ ಮತ್ತು ಅಬ್ದುರ್ ರಹಮಾನ್​ ಕಳೆದ ಆಗಸ್ಟ್​ನಲ್ಲಿ ಬಂಧಿತರಾಗಿದ್ದರು.

    ಆರೋಪಿಗಳ ವಿಚಾರಣೆ ವೇಳೆ ಅಂದರೆ ಜ.12ರಂದು ನೀಡಲಾದ ಹೇಳಿಕೆ ಸಂದರ್ಭದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಅಬ್ದುಲ್ ರಹಮಾನ್ ಬಂಧನವಾಗುವ ಇತ್ತೀಚಿನ ವರೆಗೂ ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಇರುವ ಐಸಿಸ್​ ಉಗ್ರರ ಜತೆ ಹಾಗೂ ಜಹಾನ್​ಜೈಬ್​ನೊಂದಿಗೂ ಥ್ರೀಮಾ ಮೂಲಕವೇ ಸಂಪರ್ಕದಲ್ಲಿದ್ದ ಎಂಬುದು ಗೊತ್ತಾಗಿದೆ.

    ಉಗ್ರರು ಥ್ರೀಮಾ ಮೊಬೈಲ್​ಫೋನ್​ ಆ್ಯಪ್ ಜತೆಗೆ ಅದರ ಡೆಸ್ಕ್​ಟಾಪ್​ ವರ್ಷನ್ ಕೂಡ ಬಳಸುತ್ತಿದ್ದರು. ಏಕೆಂದರೆ ಈ ಆ್ಯಪ್​ ಯಾವುದೇ ಡಿಜಿಟಲ್ ಜಾಡು ಉಳಿಸದ್ದರಿಂದ ಅದರಿಂದ ಹೊರಟ ಸಂದೇಶ/ಕರೆಯ ಮೂಲ ಪತ್ತೆ ಕಷ್ಟ ಎಂಬ ಕಾರಣಕ್ಕೇ ಉಗ್ರರು ಇದನ್ನು ಬಳಸುತ್ತಿದ್ದರು ಎನ್ನಲಾಗಿದೆ. ಅದರಲ್ಲೂ ಇತರ ಮೆಸೇಜಿಂಗ್ ಆ್ಯಪ್​ಗಳ ಥರ ಥ್ರೀಮಾ ಬಳಕೆದಾರರು ಖಾತೆ ತೆರೆಯಲು ಇ-ಮೇಲ್ ಐಡಿ ಅಥವಾ ಫೋನ್​ ನಂಬರ್ ಕೊಡಬೇಕಾಗಿರದ್ದರಿಂದ ಅನಾಮಧೇಯ ಬಳಕೆಗೆ ಇದು ಹೆಚ್ಚು ಉಪಯೋಗಿಸಲಾಗುತ್ತಿದೆ ಎನ್ನಲಾಗುತ್ತಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts