More

    ಪಿಎಸ್‌ಐ ನೇಮಕಾತಿ ವಯೋಮಿತಿ ಹೆಚ್ಚಳಕ್ಕೆ ಸಚಿವ ಸಂಪುಟ ಅಸ್ತು

    ಬೆಂಗಳೂರು: ಪೊಲೀಸ್ ಸಬ್ ಇನ್​​ಸ್ಪೆಕ್ಟರ್ ನೇಮಕಾತಿಯಲ್ಲಿ ವಯೋಮಿತಿ ಹೆಚ್ಚಿಸಲು ಗುರುವಾರ ಇಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
    ಸಾಮಾನ್ಯ ವರ್ಗಕ್ಕೆ 28 ವರ್ಷದಿಂದ 30 ವರ್ಷಕ್ಕೆ ಹೆಚ್ಚಿಸಲಾಗಿದ್ದು, ಪರಿಶಿಷ್ಟ ಜಾತಿ-ಪಂಗಡಕ್ಕೆ 30 ವರ್ಷದಿಂದ 32 ವರ್ಷಕ್ಕೆ ಏರಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಕರ್ನಾಟಕ ರಾಜ್ಯ ಪೊಲೀಸ್ ಲಿಪಿಕ ಸಿಬ್ಬಂದಿಗಳನ್ನು ಒಳಗೊಂಡ ನೇಮಕಾತಿ ತಿದ್ದುಪಡಿ ನಿಯಮಗಳು 2021ಕ್ಕೆ ಅನುಮೋದನೆ ನೀಡಲಾಯಿತು ಎಂದು ಸಂಪುಟ ಸಭೆಯ ನಂತರ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಪಿಎಸ್‌ಐಗಳ ನೇಮಕಾತಿಗೆ ಗರಿಷ್ಠ ವಯೋಮಿತಿಯನ್ನು ಎರಡು ವರ್ಷ ಹೆಚ್ಚಿಸುವಂತೆ ಇತ್ತಿಚೆಗೆ ಈ ಕುರಿತು ರಚಿಸಲಾಗಿದ್ದ ಉನ್ನತಮಟ್ಟದ ಸಮಿತಿ ನಿರ್ಧಾರ ಕೈಗೊಂಡು ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಅದಕ್ಕೆ ಸಂಪುಟದ ಅನುಮೋದನೆ ಪಡೆಯುವುದೊಂದೇ ಬಾಕಿ ಇತ್ತು. ರಾಜ್ಯ ಪೊಲೀಸ್ ಇಲಾಖೆ ಇತ್ತೀಚೆಗೆ ಹೊರಡಿಸಿರುವ ಅಧಿಸೂಚನೆಯ 556 ಸಿವಿಲ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿಗೂ ಈ ವಯೋಮಿತಿ ಹೆಚ್ಚಳ ಅನ್ವಯವಾಗುತ್ತದೆಯೇ ಎಂಬುದನ್ನು ಸಚಿವರು ಸ್ಪಷ್ಟಪಡಿಸಿಲ್ಲ.

    ಇದನ್ನೂ ಓದಿ: 556 ಸಿವಿಲ್ ಪಿಎಸ್​ಐ ಹುದ್ದೆ ಭರ್ತಿಗೆ ಮುಂದಾದ ರಾಜ್ಯ ಸರ್ಕಾರ

    ಇಂದಿನ ಸಂಪುಟ ಸಭೆಯ ಇತರ ನಿರ್ಣಯಗಳು ಇಂತಿವೆ.

    * ಜೂನ್‌ 23ಕ್ಕೆ ವಿಧಾನ ಪರಿಷತ್‌ನ ಐದು ಸ್ಥಾನಗಳು ಖಾಲಿ ಆಗುತ್ತವೆ. ಅವುಗಳಿಗೆ ಯಾರನ್ನು ನಾಮ ನಿರ್ದೇಶನ ಮಾಡಬೇಕು ಎಂಬ ಕುರಿತು ನಿರ್ಧಾರ ಕೈಗೊಳ್ಳುವುದನ್ನು ಸಿಎಂ ವಿವೇಚನೆಗೆ ಬಿಡಲಾಗಿದೆ.

    * ತೀರಾ ಹಳೆಯದಾಗಿರುವ ನೂರು ವಿಧೇಯಕ/ಕಾನೂನುಗಳನ್ನು ನಿರಸನಗೊಳಿಸುವುದಕ್ಕೆ ಅನುಮೋದನೆ ನೀಡಲಾಗಿದೆ.

    * ಐದು ಜಿಲ್ಲೆಗಳಲ್ಲಿ ಔಷಧ ಗೋದಾಮು ತೆರೆಯಲು ಅನುಮತಿ ನೀಡಲಾಗಿದ್ದು, ಅದಕ್ಕಾಗಿ 18.08 ಕೋಟಿ ರೂ. ಮಂಜೂರು ಮಾಡಲಾಗಿದೆ.

    * ಇತ್ತೀಚೆಗೆ ನಿಧನರಾದ ಖ್ಯಾತ ಕವಿ ನಿಸಾರ್ ಅಹಮದ್ ಅವರ ಹೆಸರಿನಲ್ಲಿ ನಂದಿ ಗ್ರಾಮದಲ್ಲಿ ಶಿಕ್ಷಣ ಸಂಸ್ಥೆ ತೆರೆಯಲು 2 ಎಕರೆ ಜಮೀನು ಮಂಜೂರು ಮಾಡಲು ಅನುಮತಿ ನೀಡಲಾಗಿದೆ.

    ಇದನ್ನೂ ಓದಿ:  ಅಕ್ರಮ ಮನೆಗಳ ಸಕ್ರಮ: ರಾಜ್ಯ ಸಚಿವ ಸಂಪುಟ ಅಸ್ತು

    * ಕರೊನಾ ಹಿನ್ನೆಲೆಯಲ್ಲಿ ಘೋಷಿಸಲಾಗಿರುವ ಪರಿಹಾರ ಧನಕ್ಕೆ ಸಂಬಂಧಿಸಿದಂತೆ ಕ್ಷೌರಿಕರು, ಆಟೋ ಟ್ಯಾಕ್ಸಿ ಚಾಲಕರಿಗೆ ವಿಧಿಸಲಾಗಿರುವ ಷರತ್ತುಗಳನ್ನು ಸಡಿಲಿಸಲು ಅನುಮೋದನೆ ನೀಡಲಾಯಿತು.

    * ಮೆಕ್ಕೆಜೋಳ ಬೆಳೆಗೆ ಸಂಬಂಧಿಸಿದಂತೆ ಹಿಂಗಾರು ಜತೆಗೆ ಮುಂಗಾರು ಬೆಳೆ ಬೆಳೆದವರನ್ನೂ ಐದು ಸಾವಿರ ರೂ. ಪರಿಹಾರ ವಿತರಣೆಗೆ ಪರಿಗಣಿಸಲು ತೀರ್ಮಾನಿಸಲಾಯಿತು.

    * ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ರಾಜಸ್ಥಾನ, ಮಧ್ಯಪ್ರದೇಶ ಈ ಐದು ರಾಜ್ಯಗಳಿಂದ ವಿಮಾನಯಾನಕ್ಕೆ ಅವಕಾಶ ನಿರಾಕರಣೆಗೆ ಹಾಗೂ ಗುಜರಾತ್, ತಮಿಳುನಾಡು, ಮಧ್ಯಪ್ರದೇಶದಿಂದ ರಸ್ತೆ ಮೂಲಕ ಆಗಮಿಸುವುದಕ್ಕೂ ನಿರ್ಬಂಧ ಹೇರಿಕೆಯನ್ನು ಇನ್ನು ಕೆಲವು ದಿನ ಮುಂದುವರಿಸಲು ನಿರ್ಧರಿಸಲಾಯಿತು.

    ವಿದ್ಯಾರ್ಥಿಗಳ ಸುರಕ್ಷತೆಗಾಗಿ ಎಐ ಆಧಾರಿತ ಎಲ್ಎಸ್​​ಎಟಿ ಆನ್​​​ಲೈನ್ ಪರೀಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts