ಅಚ್ಚರಿ ಮೂಡಿಸಿದ ಖಲಿಸ್ತಾನ್ ಜಿಂದಾಬಾದ್ ಭಿತ್ತಿಪತ್ರ; ದೇಶದ್ರೋಹಿ ಕೃತ್ಯಕ್ಕೆ ಕುಮ್ಮಕ್ಕು ಯಾರದು?

Khalisthan JPG
Published on

ಅಮೃತಸರ: ಖಲಿಸ್ತಾನ್ ಜಿಂದಾಬಾದ್ ಎಂದು ಬರೆದಿರುವ ಭಿತ್ತಿಪತ್ರಗಳು ಸಿರ್ಸಾ ಜಿಲ್ಲೆಯ ಕಲಾನ್​​ವಾಲಿಯ ಕೆಲವು ಧಾರ್ಮಿಕ ಸ್ಥಳಗಳು ಸೇರಿ ವಿವಿಧೆಡೆ ಗೋಡೆಗಳ ಮೇಲೆ ಕಾಣಿಸಿಕೊಂಡಿದ್ದು, ಅಚ್ಚರಿ ಮೂಡಿಸಿವೆ. ಈ ಭಿತ್ತಿಪತ್ರಗಳನ್ನು ನೋಡಿ ಅಚ್ಚರಿಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಅವನ್ನು ಕಿತ್ತು ಹಾಕಿದರು.

ಈ ಕೃತ್ಯವನ್ನು ಯಾವುದೇ ಸಂಘಟನೆ ಹೊರತಾಗಿ ಕೆಲವು ಕಿಡಿಗೇಡಿಗಳು ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ, ಘಟನೆಯ ಬಗ್ಗೆ ಕೆಲವು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ಆ ಪೋಸ್ಟರ್ ಹಾಕಿದ ವ್ಯಕ್ತಿಗಳನ್ನು ಗುರುತಿಸಲು ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ ಎಂದು ಕಲಾನ್​​ವಾಲಿ ಪೊಲೀಸ್ ಠಾಣಾಧಿಕಾರಿ ರಾಜಾರಾಮ್ ಹೇಳಿದ್ದಾರೆ.

ಈ ಕುರಿತು ಪೊಲೀಸರು ಅಲ್ಲಿಯ ನಿವಾಸಿಗಳನ್ನು ವಿಚಾರಿಸಿದ್ದಾರೆ. ಆದರೆ ಭಿತ್ತಿಪತ್ರಗಳನ್ನು ಯಾರು ಅಂಟಿಸಿದ್ದಾರೆ ಎಂಬುದು ಗೊತ್ತಿಲ್ಲ ಎಂದು ನಿವಾಸಿಗಳು ತಿಳಿಸಿದ್ದಾರೆ. ಬೆಳಿಗ್ಗೆ ಖಲಿಸ್ತಾನ್ ಜಿಂದಾಬಾದ್ ಎಂದು ಬರೆದಿರುವ ಪೋಸ್ಟರ್‌ಗಳನ್ನು ಕೆಲವು ಗೋಡೆಗಳ ಮೇಲೆ ಅಂಟಿಸಿರುವುದನ್ನು ಅಲ್ಲಿಯ ನಿವಾಸಿಗಳು ನೋಡಿದ್ದಾರೆ.

ರೈಲು ನಿಲ್ದಾಣದ ಬಳಿ ಇರುವ ಗುರುದ್ವಾರ ಸಿಂಗ್ ಸಭಾ, ತಖ್ತ್​​ಮಲ್ ರಸ್ತೆಯಲ್ಲಿರುವ ಗುರುದ್ವಾರ ರಾಮ್ ತೀರ್ಥ. ಶ್ರೀ ದುರ್ಗಾ ದೇವಸ್ಥಾನ, ಖುಹ್​​ ವಾಲಾ ಬಜಾರ್‌ನ ಶ್ರೀ ಬಾಲಾಜಿ ದೇವಸ್ಥಾನ ಮತ್ತು ರಾಮ್ ಬಾಗ್‌ನಲ್ಲಿರುವ ನಂದ ಬಾಬಾ ಸಂಸ್ಥೆಯ ಗೋಡೆಗಳ ಮೇಲೆ ಈ ಭಿತ್ತಿಪತ್ರಗಳು ಕಂಡುಬಂದಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net