ಬಗೆಹರಿಯದ ಸಿಎಂ ಆಯ್ಕೆ: ಡಿ.ಕೆ.ಶಿವಕುಮಾರ್ ಮುಂದಿನ ನಡೆ?

D K Shivakumar KPCC
Published on

ಬೆಂಗಳೂರು: ಬಹುಮತ ಗಳಿಸಿದ್ದರೂ ಸಿಎಂ ಆಯ್ಕೆ ವಿಚಾರದಲ್ಲಿ ತಳಮಳಕ್ಕೆ ಒಳಗಾಗಿರುವ ಕಾಂಗ್ರೆಸ್ ಹೈಕಮಾಂಡ್​ಗೆ ಪ್ರಬಲ ಆಕಾಂಕ್ಷಿ ಡಿ.ಕೆ.ಶಿವಕುಮಾರ್ ಕ್ಷಣಕ್ಕೊಮ್ಮೆ ತಳೆಯುತ್ತಿರುವ ನಿಲುವು ಸವಾಲಾಗಿ ಪರಿಣಮಿಸಿದೆ. ಈ ಮಧ್ಯೆ ಡಿ.ಕೆ.ಶಿವಕುಮಾರ್ ಮುಂದಿನ ನಡೆ ಏನು ಎಂಬ ಕುತೂಹಲವೂ ಕೆರಳಿದೆ.

ಸಿಎಂ ಆಯ್ಕೆ ತೀರ್ಮಾನ ವಿಚಾರ ಹೈಕಮಾಂಡ್ ಅಂಗಳದಲ್ಲಿದ್ದು, ಆಕಾಂಕ್ಷಿಗಳಲ್ಲಿ ಒಬ್ಬರಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಈಗಾಗಲೇ ದೆಹಲಿಯಲ್ಲಿದ್ದಾರೆ. ಆದರೆ ದೆಹಲಿಗೆ ಬರ ಹೇಳಿದರೂ ಇಲ್ಲೇ ಉಳಿದಿರುವ ಇನ್ನೊಬ್ಬ ಆಕಾಂಕ್ಷಿ ಡಿ.ಕೆ.ಶಿವಕುಮಾರ್​ ಹೈಕಮಾಂಡ್​ಗೆ ತಮ್ಮ ಅಸಮಾಧಾನದ ಸಂದೇಶವನ್ನು ಪರೋಕ್ಷವಾಗಿ ರವಾನಿಸಿದ್ದಾರೆ.

ಇಂದು ದೆಹಲಿಗೆ ತೆರಳುವುದಾಗಿ ಮಧ್ಯಾಹ್ನ ಹೇಳಿದ್ದ ಡಿ.ಕೆ.ಶಿವಕುಮಾರ್ ಬಳಿಕ ಇದ್ದಕ್ಕಿದ್ದಂತೆ ಅನಾರೋಗ್ಯದ ನೆಪ ಹೇಳಿ ದೆಹಲಿಗೆ ತೆರಳದೆ ಬೆಂಗಳೂರಿನಲ್ಲೇ ಉಳಿದಿದ್ದಾರೆ. ಈ ನಡುವೆ ಸಹೋದರ ಡಿ.ಕೆ.ಸುರೇಶ್ ಅವರನ್ನು ದೆಹಲಿಗೆ ಕಳಿಸಿರುವ ಡಿ.ಕೆ.ಶಿವಕುಮಾರ್ ಇಲ್ಲೇ ಇದ್ದು ಮುಂದಿನ ತಂತ್ರ ಹೆಣೆಯುತ್ತಿದ್ದಾರೆ.

ಇದೀಗ ಇತ್ತೀಚಿನ ಬೆಳವಣಿಗೆ ಪ್ರಕಾರ ಡಿ.ಕೆ.ಶಿವಕುಮಾರ್ ಮುಂದಿನ ನಡೆ ಬಹಿರಂಗಗೊಂಡಿದೆ. ಅರ್ಥಾತ್, ಅವರು ನಾಳೆಯೇ ದೆಹಲಿಗೆ ತೆರಳಲಿದ್ದಾರೆ. ಇಂದು ಸಂಜೆ ದೆಹಲಿಗೆ ಹೋಗಬೇಕು ಅಂದುಕೊಂಡಿದ್ದೆ, ಆದರೆ ಆರೋಗ್ಯ ಸರಿ ಇರದ್ದರಿಂದ ಹೋಗಲು ಆಗಿಲ್ಲ. ಈಗ ಸುಧಾರಣೆ ಆಗಿದೆ, ನಾಳೆ ಬೆಳಗ್ಗೆಯೇ ದೆಹಲಿಗೆ ಹೋಗುತ್ತೇನೆ. ನಾಳೆ ಸೋನಿಯಾ ಗಾಂಧಿ ಶಿಮ್ಲಾದಿಂದ ಬರುತ್ತಾರೆ, ಅವರು ಬರಲಿ ಎಂದೇ ಕಾಯುತ್ತಿದ್ದೆ, ನಾಳೆ ನಾನೂ ದೆಹಲಿಯಲ್ಲಿರುವೆ ಎಂದು ಡಿಕೆಶಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net