

ಜೆರುಸಲೇಮ್: ಇಸ್ರೇಲ್ನಲ್ಲಿ ಹಮಾಸ್ ಉಗ್ರರು ನಡೆಸಿದ್ದ ದಾಳಿಗೆ ಸಂಬಂಧಿಸಿದಂತೆ ತಮ್ಮ ದೇಶದ ಗುಪ್ತಚರ ಸಂಸ್ಥೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಪ್ರಧಾನಿ, ಬಳಿಕ ಎಚ್ಚೆತ್ತುಕೊಂಡು ಕ್ಷಮೆಯಾಚಿಸಿದ್ದಾರೆ.
ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಗುಪ್ತಚರ ಸಂಸ್ಥೆ ವಿರುದ್ಧ ಪೋಸ್ಟ್ ಮಾಡುವ ಮೂಲಕ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಆ ಬಳಿಕ ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ಕ್ಷಮೆಯನ್ನೂ ಕೋರಿದ್ದಾರೆ.
ಹಮಾಸ್ ಯುದ್ಧ ಉದ್ದೇಶದ ಕುರಿತು ರಕ್ಷಣಾ ಗುಪ್ತಚರ ಸಂಸ್ಥೆಯ ಮುಖ್ಯಸ್ಥರು ಅಥವಾ ಗುಪ್ತಚರ ಏಜೆನ್ಸಿ ಶಿನ್ ಬೆಟ್ ಮುಖ್ಯಸ್ಥರು ಪ್ರಧಾನಿಗೆ ಯಾವುದೇ ಸಮಯ ಅಥವಾ ಹಂತದಲ್ಲಿ ಎಚ್ಚರಿಕೆಯನ್ನು ನೀಡಿಲ್ಲ ಎಂಬುದಾಗಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು.
ಶನಿವಾರ ರಾತ್ರಿ 11ರ ಸುಮಾರಿಗೆ ಅವರು ಎಕ್ಸ್ನಲ್ಲಿ ಮಾಡಿದ್ದ ಈ ಪೋಸ್ಟ್ ರಾಜಕೀಯವಾಗಿ ಕೋಲಾಹಲ ಸೃಷ್ಟಿಸಿತ್ತು. ಹಮಾಸ್‌ಗೆ ಸಂಬಂಧಿಸಿದ ಗುಪ್ತಚರ ಮತ್ತು ಕಾರ್ಯಾಚರಣೆಯ ವೈಫಲ್ಯಗಳ ಜವಾಬ್ದಾರಿಯನ್ನು ತೆಗೆದುಕೊಳ್ಳದಿದ್ದಕ್ಕಾಗಿ ನೆತನ್ಯಾಹು ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿತ್ತು.
ಇದನ್ನೂ ಓದಿ: ರಾತ್ರಿ ಮಲಗುವ ಮುನ್ನ ಇವುಗಳನ್ನು ಮಾಡಬೇಡಿ: ಯಾತಕ್ಕಾಗಿ?
ನಂತರ ಆ ಎಕ್ಸ್ ಪೋಸ್ಟ್ ಡಿಲೀಟ್ ಮಾಡಿದ್ದ ಬೆಂಜಮಿನ್ ನೆತನ್ಯಾಹು ತಮ್ಮ ಹೇಳಿಕೆಗೆ ತಪ್ಪು ಎಂದಿದ್ದಲ್ಲದೆ ಕ್ಷಮೆಯನ್ನೂ ಯಾಚಿಸಿದ್ದಾರೆ. ತಪ್ಪಾಗಿದೆ, ನಾನು ಹಾಗೆ ಹೇಳಬಾರದಿತ್ತು, ಅದಕ್ಕಾಗಿ ಕ್ಷಮೆ ಯಾಚಿಸುತ್ತೇನೆ. ರಕ್ಷಣಾ ಸಂಸ್ಥೆಯ ಎಲ್ಲ ವಿಭಾಗಗಳ ಮುಖ್ಯಸ್ಥರಿಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದೇನೆ ಎಂದೂ ಸಮಜಾಯಿಷಿ ನೀಡಿದ್ದಾರೆ.