

ನವದೆಹಲಿ: ತನ್ನ ನೀಲಿ ಬಣ್ಣದ ಕಣ್ಣುಗಳಿಂದ ಇಡೀ ಇಂಟರ್ನೆಟ್‍ನಲ್ಲಿ ಸಂಚಲನವನ್ನೇ ಸೃಷ್ಟಿಸಿದ್ದ ಪಾಕಿಸ್ತಾನದ ಚಾಯ್‍ವಾಲಾ ಈಗ ಏನು ಮಾಡುತ್ತಿರಬಹುದು? 2016 ರಲ್ಲಿ ಛಾಯಾಗ್ರಾಹಕ ಜಿಯಾ ಅಲಿ ತೆಗೆದ ಫೋಟೊದಿಂದಾಗಿ ಪಾಕಿಸ್ತಾನದ ಚಾಯ್‍ವಾಲಾ ಅರ್ಷದ್ ಖಾನ್ ಅವರ ನೀಲಿ ಕಣ್ಣುಗಳ ನೋಟದ ಕಡೆಗೆ ಆಕರ್ಷಿತರಾಗಿದ್ದರು. ಆ ಒಂದು _ಫೋಟೊ, ಅರ್ಷದ್ ಅವರ ಜೀವನವನ್ನು ಗಮನಾರ್ಹವಾಗಿ ಬದಲಾಯಿಸಿದೆ.
2020 ರಲ್ಲಿ, ಅರ್ಷದ್ ಇಸ್ಲಾಮಾಬಾದ್ನಲ್ಲಿ ತಮ್ಮದೇ ಆದ ಚಹಾ ಕೆಫೆಯನ್ನು ಪ್ರಾರಂಭಿಸುವ ಮೂಲಕ ವ್ಯಾಪಾರ ಜಗತ್ತಿಗೆ ಕಾಲಿಟ್ಟರು. ಅವರ ಜನಪ್ರಿಯತೆ ಬೆಳೆದಂತೆ, ಅವರು ತಮ್ಮ ವ್ಯವಹಾರವನ್ನು ವಿಸ್ತರಿಸಿದ್ದಾರೆ. ಈಗ ಅವರು ಹೆಮ್ಮೆಯಿಂದ ಲಾಹೋರ್ ನಗರದಲ್ಲಿ ಮೂರು ಚಾಯ್ ಕೆಫೆಗಳನ್ನು ಹೊಂದಿದ್ದು ಮುರ್‍ರಿ ನಗರದಲ್ಲೂ ಒಂದು ಕೆಫೆಯನ್ನು ಹೊಂದಿದ್ದಾರೆ. ಅಲ್ಲಿಗೆ ನಿಲ್ಲದ ಅರ್ಷದ್ ಇತ್ತೀಚೆಗೆ ಪೂರ್ವ ಲಂಡನ್‍ನ ಇಲ್ಫೋರ್ಡ್ ಲೇನ್‍ಲ್ಲಿ ಮತ್ತೊಂದು ಕೆಫೆಯನ್ನು ತೆರೆದಿದ್ದಾರೆ.
ತಮ್ಮ ಹೊಸ ಸಾಹಸದ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದ ಅರ್ಷದ್, "ಲಂಡನ್ನಲ್ಲಿರುವ ನನ್ನ ಪ್ರೀತಿಯ ಅಭಿಮಾನಿಗಳಿಗೆ ಚಹಾವನ್ನು ನೀಡಲು ನಾನು ರೋಮಾಂಚನಗೊಂಡಿದ್ದೇನೆ. ಲಂಡನ್‍ನಲ್ಲಿ ಚಹಾ ಕೆಫೆ ತೆರಯಬೇಕು ಎನ್ನುವ ಬೇಡಿಕೆ ಅಗಾಧವಾಗಿತ‍್ತು. ಮತ್ತು ಇಲ್ಫೋರ್ಡ್ ಲೇನ್ನಲ್ಲಿರುವ ನಮ್ಮ ಮೊದಲ ಅಂತರಾಷ್ಟ್ರೀಯ ಚಾಯ್ ಅಂಗಡಿ ಅಪಾರ ಜನರನ್ನು ಸೆಳೆದಿದೆ. ದುರಾನಿ ಸಹೋದರರೊಂದಿಗೆ ಸೇರಿಕೊಂಡು ಇಲ್ಫೋರ್ಡ್ ಲೇನ್ ಆಯ್ಕೆ ಮಾಡಿದ್ದೇವೆ, ಏಕೆಂದರೆ ಇಲ್ಲಿ ಗಣನೀಯವಾಗಿ ಪಾಕಿಸ್ತಾನಿ ಮತ್ತು ಭಾರತೀಯ ಸಮುದಾಯದವರೇ ಇದ್ದು, ದೇಸಿ ಜನರಿಗೆ ಚಹ ಮೇಲೆ ಸ್ವಲ್ಪ ಪ್ರೀತಿ ಹೆಚ್ಚೇ ಇರುತ್ತದೆ. ನಾನು ವೈಯಕ್ತಿಕವಾಗಿ ಶೀಘ್ರದಲ್ಲೇ ಲಂಡನ್‍ಗೆ ಭೇಟಿ ನೀಡಲಿದ್ದೇನೆ.
ಅರ್ಷದ್‍ರ ವೈರಲ್ ಖ್ಯಾತಿಯ ನಂತರ, ಹಲವಾರು ಮಾಡೆಲಿಂಗ್ ಮತ್ತು ನಟನಾ ಅವಕಾಶಗಳನ್ನು ನೀಡಲಾಯಿತು. ಆದಾಗ್ಯೂ, 2020ರಲ್ಲಿ, ಅವರು ತಮ್ಮ ಹಿಂದಿನ ಉದ್ದಿಮೆಗೆ ಮರಳಲು ನಿರ್ಧರಿಸಿ ಇಸ್ಲಾಮಾಬಾದ್ನಲ್ಲಿ ತಮ್ಮ ಮೊದಲ ಕೆಫೆಯನ್ನು ತೆರೆದರು, ಅದಕ್ಕೆ 'ಕೆಫೆ ಚಾಯ್ವಾಲಾ ರೂಫ್ಟಾಪ್' ಎಂದು ಹೆಸರಿಡಲಾಗಿದೆ. (ಏಜೆನ್ಸೀಸ್)