

ಬೆಂಗಳೂರು: ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನವೇ ತಾವು ಚುನಾವಣಾಪೂರ್ವದಲ್ಲಿ ನೀಡಿದ್ದ ಐದೂ ಗ್ಯಾರಂಟಿಗಳ ಕುರಿತಂತೆ ಆದೇಶ ಹೊರಡಿಸಿದ ಸಿದ್ದರಾಮಯ್ಯ, ಇಂದು ಮತ್ತೊಂದು ಭರವಸೆಯನ್ನು ಘೋಷಣೆ ಮಾಡಿದ್ದಾರೆ. ಅರ್ಥಾತ್, ಇಂದಿರಾ ಕ್ಯಾಂಟೀನ್ ಮತ್ತೆ ಆರಂಭಿಸುವುದಾಗಿ ಅವರು ಭರವಸೆ ನೀಡಿದ್ದಾರೆ.
ನಗರ-ಪಟ್ಟಣಗಳಲ್ಲಿರುವ ಮತ್ತು ಕಾರ್ಯನಿಮಿತ್ತ ನಗರಗಳಿಗೆ ಬರುವ ಬಡವರ ಹಸಿವು ತಣಿಸುವ ಸದುದ್ದೇಶದಿಂದ ನಮ್ಮ ಸರ್ಕಾರ ಪ್ರಾರಂಭಿಸಿದ್ದ ಇಂದಿರಾ ಕ್ಯಾಂಟೀನ್ಗಳನ್ನು ಬಿಜೆಪಿ ಸರ್ಕಾರ ನಿರ್ಲಕ್ಷಿಸಿದ ಕಾರಣದಿಂದಾಗಿ ಕೆಲವು ಮುಚ್ಚಿವೆ, ಹಲವು ಮುಚ್ಚುವ ಸ್ಥಿತಿಯಲ್ಲಿವೆ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
"ಗರೀಬಿ ಹಠಾವೋ" ಘೋಷಣೆ ಮೂಲಕ ಬಡತನ ನಿರ್ಮೂಲನಾ ಕಾರ್ಯವನ್ನು ಕಾಳಜಿಯಿಂದ ಮಾಡಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹೆಸರಿನ ಇಂದಿರಾ ಕ್ಯಾಂಟೀನ್ಗಳನ್ನು ಮುಚ್ಚಲು ನಾವು ಅವಕಾಶ ನೀಡುವುದಿಲ್ಲ. ಅಗತ್ಯ ಸಂಪನ್ಮೂಲ ಒದಗಿಸಿ ಅವುಗಳನ್ನು ಪುನಶ್ಚೇತನಗೊಳಿಸುವುದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದ ಸಿದ್ದರಾಮಯ್ಯ, ಅತಿ ಶೀಘ್ರದಲ್ಲೇ ಇಂದಿರಾ ಕ್ಯಾಂಟೀನ್ಗಳು ಸ್ವಸ್ಥ ಮತ್ತು ರುಚಿಕರ ಊಟ-ತಿಂಡಿಗಳೊಂದಿಗೆ ಜನರ ಸೇವೆ ಶುರು ಮಾಡಲಿವೆ ಎಂದೂ ಹೇಳಿದ್ದಾರೆ.