ಭಾರತದ ವಿದೇಶ ವಿನಿಮಯ ಮೀಸಲು 1.73 ಶತಕೋಟಿಯಿಂದ 487 ಶತಕೋಟಿ ಡಾಲರ್​ಗೆ ಏರಿಕೆ

forex reserves
Published on

ನವದೆಹಲಿ: ಕರೊನಾ ಸಂಕಷ್ಟ ಕಾಲದಲ್ಲಿ ಜಗತ್ತು ಇದ್ದರೂ ಭಾರತದ ವಿದೇಶ ವಿನಿಮಯ ಮೀಸಲು ನಿಧಿಯ ಮೌಲ್ಯ ಮೇ 15ಕ್ಕೆ ಕೊನೆಗೊಂಡ ವಾರದಲ್ಲಿ 1.73 ಶತಕೋಟಿ ಡಾಲರ್​ನಿಂದ 487.04 ಶತಕೋಟಿ ಡಾಲರ್​ಗೆ ತಲುಪಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಪ್ರಕಟಿಸಿರುವ ಇತ್ತೀಚಿನ ಡೇಟಾದಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಈ ಮೌಲ್ಯವು ದೇಶದ 12 ತಿಂಗಳ ಆಮದಿನ ಮೌಲ್ಯಕ್ಕೆ ಸಮವಾಗಿರುತ್ತದೆ.

ಆರ್​ಬಿಐ ದತ್ತಾಂಶ ಪ್ರಕಾರ, ಏಪ್ರಿಲ್​ 1ರಿಂದ ಮೇ 15ರ ನಡುವಿನ ಅವಧಿಯಲ್ಲಿ ವಿದೇಶ ವಿನಿಯಮ ಮೀಸಲು ನಿಧಿ ಮೌಲ್ಯ 9.2 ಶತಕೋಟಿ ಡಾಲರ್ ಹೆಚ್ಚಾಗಿದೆ. ಮೇ 8ರಂದು ಕೊನೆಗೊಂಡ ವಾರಾಂತ್ಯದಲ್ಲಿ ಮೀಸಲು ನಿಧಿ 4.23 ಶತಕೋಟಿ ಡಾಲರ್ ಹೆಚ್ಚಾಗಿ ಒಟ್ಟು ಮೌಲ್ಯ 485.31 ಶತಕೋಟಿ ಡಾಲರ್ ತಲುಪಿತ್ತು. ಮಾರ್ಚ್ 6ರಂದು ಇದು 5.69 ಶತಕೋಟಿ ಡಾಲರ್ ಹೆಚ್ಚಾಗಿ 487.23 ಶತಕೋಟಿ ಡಾಲರ್ ತಲುಪಿತ್ತು.

ಫಾರಿನ್ ಕರೆನ್ಸಿ ಅಸೆಟ್​ನಲ್ಲಿ ಹೆಚ್ಚಳವಾದ ಕಾರಣ ಮೇ 15ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಮೀಸಲು ನಿಧಿ ಹೆಚ್ಚಳಕ್ಕೆ ಕಾರಣವಾಗಿತ್ತು. ಈ ಅವಧಿಯಲ್ಲಿ ಫಾರಿನ್ ಕರೆನ್ಸಿ ಅಸೆಟ್ ಮೌಲ್ಯ 1.12 ಶತಕೋಟಿ ಡಾಲರ್ ಹೆಚ್ಚಾಗಿದ್ದು 448.67 ಶತಕೋಟಿ ಡಾಲರ್ ಆಗಿತ್ತು. ಇದೇ ಅವಧಿಯಲ್ಲಿ ಚಿನ್ನದ ಮೀಸಲು 616 ದಶಲಕ್ಷ ಡಾಲರ್​ ಏರಿಕೆಯಾಗಿ 32.91 ಶತಕೋಟಿ ಡಾಲರ್ ತಲುಪಿದೆ. ಇದೇ ಅವಧಿಯಲ್ಲಿ ಇಂಟರ್​ನ್ಯಾಷನಲ್ ಮಾನಿಟರಿ ಫಂಡ್​(ಐಎಂಎಫ್​) ನಿಂದ ವಿಶೇಷ ನಗದೀಕರಣದ ಹಕ್ಕು 2 ದಶಲಕ್ಷ ಡಾಲರ್ ಏರಿಕೆಯಾಗಿದ್ದು 1.42 ಶತಕೋಟಿ ಡಾಲರ್ ತಲುಪಿದೆ. ಇದೇ ವೇಳೆ ಐಎಂಎಫ್​ನಲ್ಲಿ ದೇಶದ ಮೀಸಲು ನಿಧಿ ಸ್ಥಾನ 13 ದಶಲಕ್ಷ ಡಾಲರ್ ಇಳಿಕೆಯಾಗಿ 4.04 ಶತಕೋಟಿ ಡಾಲರ್​ಗೆ ಕುಸಿದಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net