

ಬೀಜಿಂಗ್: ವಿರಳ ಬೆಳವಣಿಗೆಯೊಂದರಲ್ಲಿ ಜಗತ್ತಿನ ಪ್ರಬಲ ಆರ್ಥಿಕ ಶಕ್ತಿಯಾಗಿರುವ ಚೀನಾ 2020ರ ಆರ್ಥಿಕ ಬೆಳವಣಿಗೆಯ ರೇಸ್ನಿಂದ ಹಿಂದೆ ಸರಿದಿದೆ. ಅಷ್ಟೇ ಅಲ್ಲ, 2020ನೇ ಸಾಲಿನ ಹಣಕಾಸು ವರ್ಷದಲ್ಲಿ ಯಾವುದೇ ಜಿಡಿಪಿ ಗುರಿಯನ್ನು ಇಟ್ಟುಕೊಳ್ಳುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.
ಚೀನಾದ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ನಲ್ಲಿ ಈ ವಿಚಾರ ಪ್ರಸ್ತಾಪಿಸಿರುವ ಪ್ರಧಾನಿ ಲಿ ಕೆಕಿಯಾಂಗ್, 1990ರಿಂದ ಈಚೆಗೆ ಇದೇ ಮೊದಲ ಸಲ ದೇಶ ಜಿಡಿಪಿ ಗುರಿಯನ್ನು ಕೈಬಿಟ್ಟಿದೆ. ಇದರ ಬದಲು ದೇಶದಲ್ಲಿ ಉದ್ಯೋಗ ಸ್ಥಿರತೆ ಮತ್ತು ಪ್ರಜೆಗಳ ಬದುಕಿನ ಗುಣಮಟ್ಟ ಖಾತ್ರಿಗೊಳಿಸುವ ಕಡೆಗೆ ಹೆಚ್ಚಿನ ಗಮನಹರಿಸಲಾಗುತ್ತದೆ. ಈ ವರ್ಷ ಚೀನಾದ ವಿತ್ತೀಯ ಕೊರತೆ ಜಿಡಿಪಿಯ ಶೇಕಡ 3.6ಕ್ಕೂ ಹೆಚ್ಚಿರಲಿದೆ. ಕಳೆದ ವರ್ಷ ವಿತ್ತೀಯ ಕೊರತೆ ಒಂದು ಲಕ್ಷ ಕೋಟಿ ಯುವಾನ್ಗೂ ಅಧಿಕ ಇತ್ತು. ಸದ್ಯದ ವಿರಳ ಸಂಕಷ್ಟ ಕಾಲದಲ್ಲಿ ಕರೊನಾ ವೈರಸ್ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಇನ್ನೂ ಒಂದು ಲಕ್ಷ ಕೋಟಿ ಯುವಾನ್ ಮೌಲ್ಯದ ಸರ್ಕಾರಿ ಬಾಂಡ್ಗಳನ್ನು ಬಿಡುಗಡೆ ಮಾಡಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಶಾಲೆಗಳ ಆರಂಭ ಅಧ್ಯಯನಕ್ಕೆ ಸಮಿತಿ
ಉದ್ಯೋಗ ಖಾತರಿ, ಜೀವನದ ಮೂಲ ಅಗತ್ಯಗಳನ್ನು ಪೂರೈಸುವುದಕ್ಕೆ ಮತ್ತು ಮಾರುಕಟ್ಟೆಯ ಹಿತ ಕಾಪಾಡುವುದಕ್ಕೆ ಸ್ಥಳೀಯ ಸರ್ಕಾರಗಳಿಗೆ ಚೀನಾದ ಕೇಂದ್ರ ಸರ್ಕಾರ 2 ಲಕ್ಷ ಕೋಟಿ ಯುವಾನ್ ಅನ್ನು ವರ್ಗಾಯಿಸಲು ತೀರ್ಮಾನಿಸಿದೆ. ಅಲ್ಲದೆ ಹಣದ ವೆಚ್ಚದ ಮೇಲೆ ನಿಗಾ ಇರಿಸಿದ್ದು, ಉಪಯೋಗವಿಲ್ಲದ ಬಿದ್ದಿರುವ ಸಂಪನ್ಮೂಲಗಳ ಪರಿಣಾಮಕಾರಿ ಬಳಕೆಗೂ ಗಮನಹರಿಸಲಾಗುತ್ತಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಕರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುವ ಮುನ್ನ ಚೀನಾದ ಆರ್ಥಿಕ ಬೆಳವಣಿಗೆ ಶೇಕಡ 6 ಎಂದು ಅಂದಾಜಿಸಲಾಗಿತ್ತು. ಆದಾಗ್ಯೂ, ಮೊದಲ ತ್ರೈಮಾಸಿಕದಲ್ಲಿ ಚೀನಾದ ಬೆಳವಣಿಗೆ ಶೇಕಡ 6.8ಕ್ಕೆ ಕುಸಿದಿತ್ತು. (ಏಜೆನ್ಸೀಸ್)