

ಬೆಂಗಳೂರು: ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ಶಾಲಾ ತರಗತಿಗಳ ಪ್ರಾರಂಭದ ದಿನಾಂಕವನ್ನು ಮುಂದಿನ ವಾರದಲ್ಲಿ ಅಂತಿಮಗೊಳಿಸಲಾಗುವುದು ಸಚಿವ ಸುರೇಶ್‌ಕುಮಾರ್ ಹೇಳಿದ್ದಾರೆ. ತರಗತಿಗಳನ್ನು ಈಗಲೇ ಪ್ರಾರಂಭಿಸಬಾರದೆಂದು ಪೋಷಕರ ಒತ್ತಡವಿದೆ. ಎಲ್ಲಾ ಆಯಾಮಗಳಲ್ಲಿ ಇದನ್ನು ಚರ್ಚಿಸಿ ಸದ್ಯದಲ್ಲೇ ಒಂದು ನಿರ್ಧಾರಕ್ಕೆ ಬರಲಾಗುವುದು ಎಂದು ಆಕಾಶವಾಣಿಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದರು.
ಇದನ್ನೂ ಓದಿ: ಶಾಲೆಗಳ ಆರಂಭ ಅಧ್ಯಯನಕ್ಕೆ ಸಮಿತಿ
ಯಾವುದೇ ಕಂಟೇನ್ಮೆಂಟ್ ವಲಯಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ನಡೆಸುವುದಿಲ್ಲ. ಪರೀಕ್ಷೆ ನಡೆಯುವ ದಿನದ ಆಸುಪಾಸಿನಲ್ಲಿ ಯಾವುದೇ ವಲಯ ಕಂಟೈನ್ಮೆಂಟ್ ವಲಯವೆಂದು ಘೋಷಿತವಾದಾಗ ಅಲ್ಲಿನ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಗೆ ಪುನರಾವರ್ತಿತ ಅಭ್ಯರ್ಥಿ ಎಂದು ಪರಿಗಣಿಸದೇ ಹೊಸ ಪರೀಕ್ಷಾರ್ಥಿ ಎಂದೇ ಪರಿಗಣಿಸಿ ಅವಕಾಶ ಕಲ್ಪಿಸಲಾಗುವುದೆಂದು ಸಚಿವರು ಹೇಳಿದರು.
ವಲಸೆ ಕಾರ್ಮಿಕರ ಮಕ್ಕಳು, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ಶಾಲೆಗಳು, ಹಾಸ್ಟೆಲ್ಗಳ ವಾಸಿ ವಿದ್ಯಾರ್ಥಿಗಳಿಗೆ ಅವರು ವಾಸವಾಗಿರುವ ಸ್ಥಳಗಳ ಹತ್ತಿರದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗುತ್ತದೆ. ಪರೀಕ್ಷೆಗೆ ಹಾಜರಾಗಲಿರುವ ಎಲ್ಲ ಅಭ್ಯರ್ಥಿಗಳಿಗೆ ಹೊಸದಾಗಿ ಹಾಲ್ ಟಿಕೆಟ್ಗಳನ್ನು ಒದಗಿಸಲಾಗುತ್ತಿದೆ. ಜು. 4ಕ್ಕೆ ಪರೀಕ್ಷೆಗಳು ಮುಕ್ತಾಯವಾಗಲಿದ್ದು, ಜು. 31ರೊಳಗೆ ಮೌಲ್ಯಮಾಪನ ಮುಗಿಸಿ ಫಲಿತಾಂಶ ಪ್ರಕಟಿಸಲು ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ ಎಂದರು.
ಜು. 5ರಂದು ನಿಗದಿಯಾಗಿದ್ದ ಟಿಇಟಿ ಪರೀಕ್ಷೆಯ ದಿನದಂದು ಸಿಟಿಇಟಿ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಟಿಇಟಿ ಪರೀಕ್ಷೆಯನ್ನು ಜು. 12ಕ್ಕೆ ನಡೆಸಲಾಗುವುದೆಂದು ಸಚಿವರು ತಿಳಿಸಿದರು.