ಜೂನ್​ 21-28ರ ನಡುವೆ ಗರಿಷ್ಠ ಮಟ್ಟಕ್ಕೆ ಕರೊನಾ ಕೇಸ್​ - ಅಧ್ಯಯನ ವರದಿ ಸುಳಿವು

corona
Published on

ನವದೆಹಲಿ: ಕರೊನಾ ವೈರಸ್ COVID19 ಕೇಸ್​ಗಳು ಶುಕ್ರವಾರ ಇದೇ ಮೊದಲ ಸಲ 6,000ದ ಗಡಿ ದಾಟಿದ್ದು ಇದುವರೆಗಿನ ಗರಿಷ್ಠ ಸಂಖ್ಯೆ ಎಂದು ದಾಖಲಾಗಿದೆ. ಆದರೆ, ಜೂನ್​ ತಿಂಗಳ 21ರಿಂದ 28ರ ನಡುವೆ ಈ ಪ್ರಮಾಣ ಇನ್ನೂ ಹೆಚ್ಚಾಗಿರಲಿದೆ ಎಂದು ಅಧ್ಯಯನ ವರದಿ ಒಂದು ಸುಳಿವು ನೀಡಿದೆ.

ಈ ಅಧ್ಯಯನದ ಮುಖ್ಯಸ್ಥರಾಗಿರುವ ಜಾದವಪುರ ಯೂನಿವರ್ಸಿಟಿಯ ಹಿರಿಯ ಪ್ರಾಧ್ಯಾಪಕ ನಂದದುಲಾಲ್​ ಬೈರಾಗಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಜುಲೈ ಎರಡನೇ ವಾರದಿಂದ ಮಾತ್ರವೇ ಕೋವಿಡ್​ 19 ಕೇಸ್​ಗಳ ಸಂಖ್ಯೆಯಲ್ಲಿ ಇಳಿಮುಖವನ್ನು ನಾವು ನಿರೀಕ್ಷಿಸಲು ಸಾಧ್ಯ. ಈ ಅಧ್ಯಯನ ವರದಿ ಸಿದ್ಧಪಡಿಸಲು ನಾವು ಜನಸಂಖ್ಯೆ ಇರುವ ಭೌಗೋಳಿಕ ಪ್ರದೇಶವನ್ನು ಏಳು ವಿಭಾಗಗಳಾಗಿ ವಿಂಗಡಿಸಿದೆವು. ಅದೇ ರೀತಿ ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿರುವ ಮಾರ್ಗಸೂಚಿ ಪ್ರಕಾರ ಸೋಂಕು ತಡೆ ಮತ್ತು ನಿಯಂತ್ರಣ ತಂತ್ರಗಾರಿಕೆಯ ಅಗತ್ಯಗಳನ್ನು ಗಮನಿಸಿಕೊಂಡು ಅಧ್ಯಯನ ಕಾರ್ಯಗತ ಮಾಡಿದ್ದೇವೆ ಎಂದು ಹೇಳಿದರು.

ಈಗಿರುವ ಸನ್ನಿವೇಶವನ್ನು ಗಮನಿಸಿದರೆ ಜೂನ್ 21-28ರ ನಡುವೆ ನಿತ್ಯವೂ ಪ್ರಕರಣಗಳ ಸಂಖ್ಯೆ 7,000ದಿಂದ 7,500 ಶ್ರೇಣಿಯಲ್ಲಿ ಇರಲಿದೆ. ಅಕ್ಟೋಬರ್ ಮೊದಲ ವಾರ ದೇಶದಲ್ಲಿ ಕರೊನಾ ಕೇಸ್​ಗಳ ಸಂಖ್ಯೆ 5 ಲಕ್ಷ ತಲುಪಲಿದೆ. ಆ ನಂತರವಷ್ಟೇ ಇಳಿಮುಖವಾಗಲಿದೆ. ಇಂತಹ ಸನ್ನಿವೇಶದಲ್ಲಿ ಕರೊನಾ ಹುಟ್ಟಿನ ಮೂಲ ಕೇಂದ್ರವಾದ ವುಹಾನ್​ನ ಪರಿಸ್ಥಿತಿ ಊಹಿಸಿಕೊಳ್ಳಿ. 76 ದಿನ ಸಂಪೂರ್ಣ ಲಾಕ್​ಡೌನ್ ಮಾಡಬೇಕಾಗಿ ಬಂತು ಅಲ್ಲಿ. ಆದರೆ, ಭಾರತದಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡ ಕಾರಣ ಕೇಸ್​ಗಳು ಏರುಮುಖವಾಗಿ ಸಾಗುವುದಕ್ಕೆ ಬಹಳ ದಿನಗಳು ಬೇಕಾಗಿವೆ. ಸಾಮಾಜಿಕ ಅಂತರ ಕಾಯುವ ದೃಷ್ಟಿಯಿಂದ ಸಾಧ್ಯವಾದಷ್ಟೂ ಸಾರ್ವಜನಿಕ ಸಾರಿಗೆ ತಪ್ಪಿಸಿದರೆ ಉತ್ತಮ. ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದನ್ನು ಸರ್ಕಾರದ ಗಮನಕ್ಕೂ ತಂದಿದ್ದೇವೆ ಎಂದು ಅವರು ಹೇಳಿದ್ದಾರೆ.

ಹಸಿರು ಮತ್ತು ಆರೆಂಜ್​ ವಲಯಗಳಲ್ಲಿ ಮಾತ್ರವೇ ಜೂನ್ ಕೊನೆಯ ವಾರದ ನಂತರದಲ್ಲಿ ಲಾಕ್​ಡೌನ್ ಭಾಗಶಃ ಸಡಿಲಗೊಳಿಸಬಹುದು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿದ್ದೇವೆ. ಎರಡನೇ ಹಂತದ ಕೋವಿಡ್ ಅಲೆಯನ್ನು ತಪ್ಪಿಸುವುದಕ್ಕೆ ಇಂತಹ ಕಠಿಣ ಕ್ರಮಗಳು ಅನಿವಾರ್ಯ ಎಂಬುದನ್ನೂ ಸರ್ಕಾರದ ಗಮನಕ್ಕೆ ತಂದಿದ್ದೇವೆ ಎಂದು ಬೈರಾಗಿ ಹೇಳಿದ್ದಾರೆ.

ಈ ಅಧ್ಯಯನವನ್ನು ಜಾದವಪುರ ಯೂನಿವರ್ಸಿಟಿಯ ಸೆಂಟರ್ ಫಾರ್ ಮ್ಯಾಥಮೆಟಿಕಲ್ ಬಯಾಲಜಿ ಆ್ಯಂಡ್ ಇಕಾಲಜಿ ವಿಭಾಗದ ಪ್ರೊಫೆಸರ್ ಮತ್ತು ಕೋಆರ್ಡಿನೇಟರ್ ನಂದದುಲಾಲ್ ಬೈರಾಗಿ ಅವರ ನೇತೃತ್ವದ ತಂಡ ನಡೆಸಿದೆ. ಈ ಅಧ್ಯಯನಕ್ಕೆ ಭಾರತ ಸರ್ಕಾರದ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ರಿಸರ್ಚ್​ ಬೋರ್ಡ್​(ಎಸ್​ಇಆರ್​ಬಿ) ಅನುಮೋದನೆ ನೀಡಿದ್ದು, covid19india.org/state website ನ ದತ್ತಾಂಶಗಳನ್ನು ಆಧರಿಸಿ ಈ ಅಧ್ಯಯನ ನಡೆಸಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net