ಇಸ್ರೋ ಸೂರ್ಯ ಶಿಕಾರಿ! ಆದಿತ್ಯ-ಎಲ್ 1 ಮಿಷನ್​ನ ಒಟ್ಟು ವೆಚ್ಚ, ಪ್ರಯಾಣದ ದಿನ, ಕ್ರಮಿಸುವ ದೂರವೆಷ್ಟು?

Aditya L1 Mission
Published on

ನವದೆಹಲಿ: ಭಾರತದ ಮೊಟ್ಟ ಮೊದಲ ಸೂರ್ಯ ಯೋಜನೆ ಆದಿತ್ಯ-ಎಲ್ 1 ಇಂದು (ಸೆ.02) ಬೆಳಗ್ಗೆ 11.50ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಆಗಿದೆ. ಚಂದ್ರಯಾನ 3 ಯಶಸ್ವಿಯಾದ ಬೆನ್ನಲ್ಲೇ ಸೂರ್ಯನತ್ತ ಸಾಗಿರುವ ಇಸ್ರೋ ನೇಸರನ ಸಂಪೂರ್ಣ ಅಧ್ಯಯನ ನಡೆಸಲಿದೆ. ಭಾರತದ ಬಾಹ್ಯಾಕಾಶ ಕ್ಷೇತ್ರದ ಪಾಲಿಗೆ ಈ ವರ್ಷ ಸುವರ್ಣ ವರ್ಷವಾಗಿ ಉಳಿಯಲಿದೆ.

ಸೂರ್ಯ ಯೋಜನೆಯ ವೆಚ್ಚ ಎಷ್ಟು?

ಮೂರು ಹಂತಗಳನ್ನು ಯಶಸ್ವಿಯಾದ ಬಳಿಕ ಆದಿತ್ಯ ಎಲ್​ 1 ನೌಕೆ ಭೂಕಕ್ಷೆಯನ್ನು ತಲುಪಿದೆ. ಜುಲೈ 23ರಂದು ಉಡಾವಣೆಯಾಗಿ ಆಗಸ್ಟ್​ 23ರಂದು ಚಂದ್ರನ ಮೇಲೆ ಇಳಿದ ಚಂದ್ರಯಾನ 3 ಯೋಜನೆಗೆ ಒಟ್ಟು 615 ಕೋಟಿ ರೂಪಾಯಿ ಖರ್ಚಾಗಿದೆ. ಇದೀಗ ಆದಿತ್ಯ ಎಲ್​ 1 ಯೋಜನೆಗೆ ಇಸ್ರೋ ಎಷ್ಟು ಹಣ ಖರ್ಚು ಮಾಡಿದೆ ಎಂಬ ಕುತೂಹಲ ಸಹಜವಾಗಿಯೇ ಎಲ್ಲರಲ್ಲೂ ಇದೆ. ಅದಕ್ಕೆ ಉತ್ತರ 300 ಕೋಟಿ ರೂಪಾಯಿ. ಹೌದು ಚಂದ್ರಯಾನ 3 ಯೋಜನೆಯ ಅರ್ಧದಷ್ಟು ಹಣ ಮಾತ್ರ ಸೂರ್ಯ ಯೋಜನೆಗೆ ಖರ್ಚಾಗಿದೆ.

ಆದಿತ್ಯ ಎಲ್​ 1 ಯೋಜನೆ ಉದ್ದೇಶವೇನು?

ಸೋಲಾರ್​ ಅಟ್ಮಾಸ್ಪಿಯರ್​ ಅಂದ್ರೆ ಕ್ರೋಮೋಸ್ಪಿಯರ್​ ಮತ್ತು ಸೂರ್ಯನ ವಾತಾವರಣದ ಹೊರಭಾಗವಾದ ಕರೊನಾವನ್ನು ಡೀಪ್​ ಆಗಿ ಸ್ಟಡಿ ಮಾಡುವುದೇ ಈ ಆದಿತ್ಯ ಎಲ್​ 1 ಮಿಷನ್​ನ ಒಂದು ಮುಖ್ಯ ಉದ್ದೇಶವಾಗಿದೆ. ಇನ್-ಸಿಟು ಕಣ ಮತ್ತು ಪ್ಲಾಸ್ಮಾ ಪರಿಸರವನ್ನು ಅಧ್ಯಯನ ಮಾಡಿ ಡೇಟಾವನ್ನು ಒದಗಿಸಿಸುತ್ತದೆ. ಅಧ್ಯಯನಕ್ಕಾಗಿ ಆದಿತ್ಯ ಎಲ್​ 1ಗೆ 7 ಪೇಲೋಡ್​ ಅನ್ನು ಅಳವಡಿಸಿದ್ದಾರೆ. ಅವುಗಳಲ್ಲಿ ನಾಲ್ಕು ಸೋಲಾರ್​ ಸರ್ಫೇಸ್​ ಅನ್ನು ಸ್ಟಡಿ ಮಾಡುತ್ತವೆ ಮತ್ತು ಉಳಿದ ಮೂರು ಸೋಲಾರ್​ ವಿಂಡ್ಸ್​ ಮತ್ತು ಮ್ಯಾಗ್ನೇಟಿಕ್​ ಫೀಲ್ಡ್​ ಅನ್ನು ಅಧ್ಯಯನ​ ಮಾಡುತ್ತವೆ.

ಎಷ್ಟು ಸಮಯ ಬೇಕು?

ಸೂರ್ಯನ ಲಾಗ್ರಾಂಗಿಯನ್ ಪಾಯಿಂಟ್ ಭೂಮಿಯಿಂದ ಅಂದಾಜು 15 ಲಕ್ಷ ಕಿ.ಮೀ.ದೂರದಲ್ಲಿದೆ. ಅಲ್ಲಿಗೆ ತಲುಪಲು ಸುಮಾರು 4 ತಿಂಗಳು ಸಮಯ ತೆಗೆದುಕೊಳ್ಳುತ್ತದೆ ಎಂದು ಇಸ್ರೋ ತಿಳಿಸಿದೆ.

ಈ ಲಾಗ್ರಾಂಗಿಯನ್ ಪಾಯಿಂಟ್​ಗೆ ಫ್ರೆಂಚ್ ಗಣಿತಜ್ಞ ಜೋಸೆಫ್-ಲೂಯಿಸ್ ಲಾಗ್ರಾಂಗಿಯನ್ ಅವರ ಹೆಸರನ್ನು ಇಡಲಾಗಿದೆ. ಅವರು 18ನೇ ಶತಮಾನದಲ್ಲಿ ಲಾಗ್ರಾಂಗಿಯನ್ ಪಾಯಿಂಟ್​ ಬಗ್ಗೆ ಮೊದಲು ಅಧ್ಯಯನ ಮಾಡಿದರು. ಲಾಗ್ರಾಂಗಿಯನ್ ಪಾಯಿಂಟ್​ನಲ್ಲಿ ಸೂರ್ಯ ಮತ್ತು ಭೂಮಿಯಂತಹ ಎರಡು ದೊಡ್ಡ ಕಾಯಗಳ ಗುರುತ್ವಾಕರ್ಷಣೆಯ ಬಲಗಳು ಸಮತೋಲನದ ಪ್ರದೇಶವನ್ನು ಸೃಷ್ಟಿಸುತ್ತವೆ. ಇದನ್ನು ಬಾಹ್ಯಾಕಾಶ ನೌಕೆ ತನ್ನ ಇಂಧನ ಬಳಕೆಯನ್ನು ಕಡಿಮೆ ಮಾಡಲು ಬಳಸಬಹುದು.

ಪ್ರತಿನಿತ್ಯ 1,440 ಚಿತ್ರ ರವಾನೆ

ಆದಿತ್ಯ ಎಲ್ 1 ಬಾಹ್ಯಾಕಾಶ ನೌಕೆಯು ಉದ್ದೇಶಿತ ಕಕ್ಷೆಯನ್ನು ತಲುಪಿದ ನಂತರ ನೌಕೆಯಲ್ಲಿನ ಪ್ರಾಥಮಿಕ ಪೇಲೋಡ್ ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್ (ವಿಇಎಲ್​ಸಿ) ಉಪಕರಣವು ಪ್ರತಿದಿನಕ್ಕೆ 1,440 ಚಿತ್ರಗಳನ್ನು ಕಳುಹಿಸಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net