ಅಬಕಾರಿ ನೀತಿ ಹಗರಣ; ನನಗೆ ನೀಡಲಾಗಿರುವ ನೋಟಿಸ್​ ಅಕ್ರಮ, ರಾಜಕೀಯ ಪ್ರೇರಿತ: ಅರವಿಂದ್​ ಕೇಜ್ರಿವಾಲ್

Arvind Kejriwal
Published on

ನವದೆಹಲಿ:  ಈ ಹಿಂದೆ ದೆಹಲಿ ಸರ್ಕಾರ ಜಾರಿಗೆ ತಂದಿದ್ದ ಅಬಕಾರಿ ನೀತಿಯಲ್ಲಿನ ಬಹುಕೋಟಿ ಅಕ್ರಮಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ED) ನೀಡಿರುವ ನೋಟಿಸ್​ ಕಾನೂನು ಬಾಹಿರ ಹಾಗೂ ರಾಜಕೀಯ ಪ್ರೇರಿತ ಎಂದು ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಆರೋಪಿಸಿದ್ದಾರೆ.

ಅಬಕಾರಿ ನೀತಿಯಲ್ಲಿನ ಬಹುಕೋಟಿ ಅಕ್ರಮಕ್ಕೆ ಸಂಬಂಧಿಸಿದಂತೆ ಡಿಸೆಂಬರ್​ 21ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ED) ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ಗೆ ಸಮನ್ಸ್​​ ಜಾರಿ ಮಾಡಿತ್ತು.

Arvind Kejriwal

ಜಾರಿ ನಿರ್ದೇಶನಾಲಯದ ಸಮನ್ಸ್​ಗೆ ಆರು ಪುಟಗಳ ಪತ್ರ ಬರೆದಿರುವ ಕೇಜ್ರಿವಾಲ್​, ತಮ್ಮ ವಿರುದ್ಧ ಜಾರಿ ಮಾಡಿರುವ ಸಮನ್ಸ್ ರಾಜಕೀಯ ದುರುದ್ದೇಶದಿಂದ ಕೂಡಿದ್ದು, ಕಾನೂನಿಗೆ ವಿರುದ್ಧವಾಗಿದೆ. ಜೀವನವನ್ನು ಅತ್ಯಂತ ಪ್ರಾಮಾಣಿಕ ಹಾಗೂ ಪಾರದರ್ಶಕತೆಯಿಂದ ನಡೆಸುತ್ತಿದ್ದು, ಮರೆಮಾಚಲು ಏನೂ ಇಲ್ಲ. ಕಾನೂನಿನ ಪ್ರಕಾರ ಕಳುಹಿಸಿದ ಸಮನ್ಸ್ ಸ್ವೀಕರಿಸಲು ಸಿದ್ಧವಿರುವುದಾಗಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕೇಜ್ರಿವಾಲ್ ಡಿಸೆಂಬರ್ 19ರಿಂದ 10 ದಿನಗಳ ಕಾಲ ವಿಪಸ್ಸನ ಧ್ಯಾನದಲ್ಲಿ ಭಾಗವಹಿಸಲು ತೆರಳಿರುವುದಾಗಿ ಎಎಪಿ ಮೂಲಗಳು ತಿಳಿಸಿವೆ. ಆದರೆ, ವಿಪಸ್ಸನ ಧ್ಯಾನ ನಡೆಸುವ ಸ್ಥಳವನ್ನು ಬಹಿರಂಗಪಡಿಸಿಲ್ಲ. ಈ ಹಿಂದೆ ನವೆಂಬರ್ 2ರಂದು ವಿಚಾರಣೆಗೆ ಹಾಜರಾಗುವಂತೆ ED ಸಮನ್ಸ್ ಜಾರಿ ಮಾಡಿತ್ತು. ಆದರೆ ವಿಚಾರಣೆಗೆ ಕೇಜ್ರಿವಾಲ್ ಹಾಜರಾಗಿರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net