

ಲಖನೌ: ಬಹಿರ್ದೆಸೆಗೆ ತೆರಳಿದ್ದ ಅಪ್ರಾಪ್ತೆ ಮೇಲೆ ಐವರು ದುರುಳರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉತ್ತರಪ್ರದೇಶದ ಮೌ ಜಿಲ್ಲೆಯಲ್ಲಿ ನಡೆದಿದೆ.
ಡಿಸೆಂಬರ್ 02ರಂದು ಘಟನೆ ನಡೆದಿದ್ದು, ಡಿಸೆಂಬರ್ 20ರಂದು ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಪೊಲೀಸರು ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದು, ತಲೆಮಾರಿಸಿಕೊಂಡಿರುವ ನಾಲ್ವರನ್ನು ಪತ್ತೆಹಚ್ಚಲು ವಿಶೇಷ ತಂಡ ಒಂದನ್ನು ರಚಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ಮಹೇಶ್‌ಸಿಂಗ್ ಅತ್ರಿ, ಬಹಿರ್ದೆಸೆಗೆ ತೆರಳಿದ್ದ ವೇಲೆ ಐವರು ದುರುಳರು ಅಪ್ರಾಪ್ತೆಯನ್ನು ಅಪಹರಿಸಿ ಕೃತ್ಯ ಎಸಗಿದ್ದಾರೆ. ಆರೋಪಿಗಳು ತಮ್ಮ ಮೊಬೈಲ್ ಫೋನಿನಲ್ಲಿ ವಿಡಿಯೋವನ್ನು ಚಿತ್ರೀಕರಿಸಿದ್ದು, ಯಾರಿಗಾದರೂ ಹೇಳಿದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿದ್ದಾರೆ.
ಡಿಸೆಂಬರ್ 20ರಂದು ಬಾಲಕಿ ನಡೆದ ಘಟನೆ ಬಗ್ಗೆ ತನ್ನ ಪೋಷಕರ ಬಳಿ ಹೇಳಿಕೊಂಡಿದ್ದು, ಆಕೆಯ ತಂದೆ ಸಲ್ಲಿಸಿದ ದೂರಿನ ಆಧಾರದ ಮೇಲೆ ಭಾರತ ದಂಡ ಸಂಹಿತೆ (IPC Section), ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಓರ್ವ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ನಾಲ್ವರು ಆರೋಪಿಗಳು ತಲೆಮಾರಿಸಿಕೊಂಡಿದ್ದು, ಅವರನ್ನು ಪತ್ತೆಹಚ್ಚಲು ವಿಶೇಷ ತಂಡ ರಚಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಮಹೇಶ್‌ಸಿಂಗ್ ಅತ್ರಿ ತಿಳಿಸಿದ್ದಾರೆ.