

ಬೆಂಗಳೂರು: ಸೈರನ್ ಹಾಕಿಕೊಂಡು ಸಕಾಲಕ್ಕೆ ವಿದ್ಯಾರ್ಥಿಯನ್ನು ಸಿಇಟಿ ಪರೀಕ್ಷಾ ಕೇಂದ್ರಕ್ಕೆ ತಲುಪಿಸುವ ಮೂಲಕ ನಗರದ ಪೊಲೀಸ್ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ.
ಕೊತ್ತನೂರಿನ ಹೊಯ್ಸಳ ಸಿಬ್ಬಂದಿ ಗೌರಿಶ್ ಹಾಗೂ ಸೋಮಶೇಖರ್ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ವಿದ್ಯಾರ್ಥಿಯೊಬ್ಬ ಸಿಇಟಿ ಪರೀಕ್ಷೆ ಬರೆಯಲು ಹೋಗಬೇಕಿತ್ತು. ಆದರೆ, ಶನಿವಾರ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಇದ್ದಿದ್ದರಿಂದ ನಗರದಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಇದರಿಂದ ವಿದ್ಯಾರ್ಥಿ ಮನನೊಂದಿದ್ದ.
ವಿದ್ಯಾರ್ಥಿಯನ್ನು ಗಮನಿಸಿದ ಪೊಲೀಸರು ಆತನನ್ನು ವಿಚಾರಿಸಿದಾಗ ಸಿಇಟಿ ಪರೀಕ್ಷೆಗೆ ಹೋಗುತ್ತಿರುವುದಾಗಿ ಮತ್ತು ಟ್ರಾಫಿಕ್ ಜಾಮ್ನಲ್ಲಿ ಸಿಲುಕಿರುವುದಾಗಿ ಅಸಹಾಯಕತೆ ತೋಡಿಕೊಂಡಿದ್ದ. ಬಳಿಕ ಆತನಿಗೆ ಧೈರ್ಯ ತುಂಬಿ, ಹೊಯ್ಸಳ ವಾಹನದಲ್ಲಿ ಕೇವಲ 15 ನಿಮಿಷದಲ್ಲಿ ಕೋರಮಂಗಲದ ಜೆ.ಎನ್.ಸಿ ಕಾಲೇಜಿಗೆ ತಲುಪಿಸುವ ಮೂಲಕ ವಿದ್ಯಾರ್ಥಿನಿ ಪರೀಕ್ಷೆ ಬರೆಯಲು ಹೊಯ್ಸಳ ಸಿಬ್ಬಂದಿ ನೆರವಾದರು.
ಹೊಯ್ಸಳ ಸಿಬ್ಬಂದಿಗೆ ವಿದ್ಯಾರ್ಥಿ ಧನ್ಯವಾದ ತಿಳಿಸಿದ್ದಾನೆ. ನಾವು ನಿಮ್ಮ ಸೇವೆಗೆ ಸದಾ ಸಿದ್ಧವಾಗಿರುತ್ತೇವೆ ಎಂದು ಹೊಯ್ಸಳ ಸಿಬ್ಬಂದಿ ಸಹ ಸಾರ್ವಜನಿಕರಿಗೆ ವಿಡಿಯೋ ಮೂಲಕ ಸಂದೇಶ ರವಾನಿಸಿದ್ದು, ಅವರ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. (ದಿಗ್ವಿಜಯ ನ್ಯೂಸ್)