

ನವದೆಹಲಿ: ಕರೊನಾ ಹಾವಳಿ ಇಟ್ಟಿರುವ ಈ ಸಂದರ್ಭದಲ್ಲಿ ಭಯ ಹುಟ್ಟಿಸುವ ಎರಡು ಪದಗಳೆಂದರೆ ಒಂದು 'ಪಾಸಿಟಿವ್', ಇನ್ನೊಂದು 'ಹಾಟ್ ಸ್ಪಾಟ್'. ಇದೀಗ ರೈತರು ಪ್ರತಿಭಟಿಸುವ ಸ್ಥಳದಲ್ಲೂ 'ಹಾಟ್ ಸ್ಪಾಟ್' ಪದ ಜೋರಾಗಿ ಕೇಳಿಬರುತ್ತಿದೆ. ಆದರೆ ರೈತರು ಈ ಪದ ಕೇಳಿಯೂ ಖುಷಿಯಾಗಿದ್ದಾರೆಂಬುದೇ ವಿಶೇಷ.
ಏಕೆಂದರೆ ಇದು ಬೇರೆಯದೇ ಹಾಟ್ ಸ್ಪಾಟ್. 'ಅನ್ನದಾತೋ ಸುಖೀಭವ' ಎಂಬ ಮಾತಿದೆ. ಅಂಥ ಅನ್ನದಾತರಿಗೆ ಆಪ್ 'ಡಾಟಾ' ಕೊಡಲು ಮುಂದಾಗಿದೆ. ಅಂದರೆ, ಪ್ರತಿಭಟನಾನಿರತ ರೈತರಿಗೆ ಉಚಿತವಾಗಿ ಮೊಬೈಲ್ ಡಾಟಾ ಕೊಡಲು ಮುಂದಾಗಿರುವ ಆಮ್ ಆದ್ಮಿ ಪಾರ್ಟಿ, ಅದಕ್ಕಾಗಿ ಪ್ರತಿಭಟನಾ ಸ್ಥಳದಲ್ಲಿ ವೈಫೈ ಹಾಟ್ ಸ್ಪಾಟ್ಗಳನ್ನು ಅಳವಡಿಸಲು ಮುಂದಾಗಿದೆ.
ದೆಹಲಿಯ ಸಿಂಘು ಗಡಿಪ್ರದೇಶದಲ್ಲಿ ಸುಮಾರು ಒಂದು ತಿಂಗಳಿನಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಗೆ ದೇಶದ ಮೂಲೆಮೂಲೆಗಳಿಂದಲೂ ರೈತರು ಬಂದಿದ್ದಾರೆ. ಅವರೆಲ್ಲ ತಮ್ಮ ಕುಟುಂಬದ ಜತೆ ನಿರಂತರ ಸಂಪರ್ಕದಲ್ಲಿರಲು ಅನುಕೂಲ ಮಾಡಿಕೊಡುವ ಸಲುವಾಗಿ ವೈಫೈ ಹಾಟ್ಸ್ಪಾಟ್ ಅಳವಡಿಸಲು ನಿರ್ಧರಿಸಲಾಗಿದೆ ಎಂದು ಆಪ್ನ ಮುಖಂಡ ರಾಘವ್ ಚಡ್ಡಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಹಿಂದೆ ದೆಹಲಿ ಸರ್ಕಾರ ಪ್ರತಿಭಟನಾನಿರತ ರೈತರಿಗೆ ಮೊಬೈಲ್ ಟಾಯ್ಲೆಟ್ಗಳನ್ನು ವ್ಯವಸ್ಥೆ ಮಾಡಿರುವುದನ್ನೂ ಅವರು ಈ ವೇಳೆ ಸ್ಮರಿಸಿಕೊಂಡರು. (ಏಜೆನ್ಸೀಸ್)