More

    ಸಂಬಳ ಕೊಡುತ್ತೇನೆಂದಾಕೆ ವಿಚ್ಛೇದನದ ಬೆದರಿಕೆ ಹಾಕುತ್ತಿದ್ದಾಳೆ: ಪತ್ನಿಯ ಆಸ್ತಿಯಲ್ಲಿ ಪಾಲು ಸಿಗುವುದೆ?

    ಸಂಬಳ ಕೊಡುತ್ತೇನೆಂದಾಕೆ ವಿಚ್ಛೇದನದ ಬೆದರಿಕೆ ಹಾಕುತ್ತಿದ್ದಾಳೆ: ಪತ್ನಿಯ ಆಸ್ತಿಯಲ್ಲಿ ಪಾಲು ಸಿಗುವುದೆ?ಪ್ರಶ್ನೆ: ನನ್ನ ಮದುವೆಯಾಗಿ ಎಂಟು ವರ್ಷ ಆಗಿದೆ. ನನ್ನ ಹೆಂಡತಿ ಅಂಗವಿಕಲಳು. ಆದರೂ ಅನುಕಂಪದಿಂದ ನಾನು ಅವಳನ್ನು ಮದುವೆ ಆದೆ.
    ಮದುವೆಗೆ ಮುಂಚೆ ಅವಳ ಅಣ್ಣಂದಿರು, ಅವಳ ಸಂಪಾದನೆಯೆಲ್ಲಾ ನಿಮಗೇ ಕೊಡುತ್ತಾಳೆ. ಅವಳ ಆಸ್ತಿಯೂ ನಿಮಗೇ ಎಂದು ಹೇಳಿದರು. ಅವಳ ಹೆಸರಿಗೆ ಒಂದು ಮನೆಯನ್ನೂ ಕಟ್ಟಿಸಿಕೊಟ್ಟರು. ಅವಳು ಸಂಬಳ ಒಂದು ವರ್ಷ ಮಾತ್ರ ನನ್ನ ಕೈಗೆ ಕೊಟ್ಟು ಖರ್ಚಿಗೆ ನನ್ನಿಂದಲೇ ತೆಗೆದುಕೊಂಡು ಹೋಗುತ್ತಿದ್ದಳು. ಆಮೇಲೆ ದುಡ್ಡು ಕೊಡುವುದನ್ನು ನಿಲ್ಲಿಸಿದಳು.

    ಈ ವಿಷಯದಲ್ಲಿ ನಮ್ಮಲ್ಲಿ ಯಾವಾಲೂ ಜಗಳ ಆಗುತ್ತಿತ್ತು. ಬರಬರುತ್ತಾ ಅವಳು ನನ್ನ ಮೇಲೆ ಜೋರು ಮಾಡುತ್ತಿದ್ದಳು. ನೀನು ಸೋಮಾರಿ. ಕೆಲಸ ಮಾಡುವುದಿಲ್ಲ , ಸಂಪಾದನೆಯೂ ಇಲ್ಲ ಎಂದು ಹೀಯಾಳಿಸುತ್ತಿದ್ದಳು.

    ನನಗೆ ಒಳ್ಳೆಯ ಕೆಲಸ ನಲವತ್ತು ವರ್ಷ ವಯಸ್ಸು ಆದರೂ ಇನ್ನೂ ಸಿಕ್ಕಿಲ್ಲ. ಈಗ ಅವಳ ಅಣ್ಣಂದಿರು ಅವಳ ತಲೆ ಕೆಡಿಸಿ ಅವಳನ್ನು ತಮ್ಮ ಊರಿಗೇ ಕರೆದುಕೊಂಡು ಹೋಗಿದ್ದಾರೆ. ನನ್ನ ಅನುಮತಿ ಇಲ್ಲದೆ ವರ್ಗಾವಣೆ ಪಡೆದಿದ್ದಾಳೆ. ಎಲ್ಲ ಹಣವನ್ನೂ ಅವರಿಗೇ ಕೊಡುತ್ತಿದ್ದಾಳೆ.
    ಈಗ ವಿಚ್ಛೇದನ ಕೊಡು ಇಲ್ಲದಿದ್ದರೆ ನಾನೇ ಕೋರ್ಟಿಗೆ ಹೋಗುತ್ತೇನೆ ಎನ್ನುತ್ತಿದ್ದಾಳೆ. ಅವರ ಅಣ್ಣಂದಿರ ದುರುದ್ದೇಶ ಅವಳಿಗೆ ತಿಳಿಯುತ್ತಿಲ್ಲ. ಈಗ ಅವಳು ಕೋರ್ಟಿಗೆ ಹೋದರೆ ನನಗೆ ಅವಳಿಂದ ಪರಿಹಾರ ಸಿಗುತ್ತದೆಯೇ? ಅವಳು ಮದುವೆಗೆ ಮುಂಚೆ ಕೊಟ್ಟ ಮಾತಿನಂತೆ ನನಗೆ ಕೊಡಬೇಕಾದ ಸಂಬಳ ಕೊಡುವಂತೆ ಮಾಡಲು ಸಾಧ್ಯವೇ? ಅವಳ ಹೆಸರಿನಲ್ಲಿರುವ ಮನೆಯಲ್ಲಿ ನನಗೆ ಅರ್ಧ ಭಾಗ ಇದೆಯೇ? ಇವೆಲ್ಲಾ ಗೊತ್ತಿದ್ದರೆ ನಾನು ಅಂಗವಿಕಲಳನ್ನು ಮದುವೆಯೇ ಆಗುತ್ತಿರಲಿಲ್ಲ. ಅವಳು ಮೋಸ ಮಾಡಿದ್ದಕ್ಕೆ ಶಿಕ್ಷೆ ಇದೆಯೇ?

    ಉತ್ತರ: ಪತ್ನಿಯ ಸಂಪಾದನೆಯಲ್ಲಿ, ಮತ್ತು ಪತ್ನಿಯ ಹೆಸರಿನಲ್ಲಿ ಇರುವ ಆಸ್ತಿಯಲ್ಲಿ ಆಕೆ ಬದುಕಿರುವಾಗ ಪತಿಗೆ ಯಾವ ಅಧಿಕಾರವೂ ಇರುವುದಿಲ್ಲ. ಈ ಬಗ್ಗೆ ನೀವು ಕೋರ್ಟಿನಲ್ಲಿ ಕೇಳಿದರೆ ನಗೆಪಾಟಲಿಗೆ ಈಡಾಗುತ್ತೀರಿ. ಒಂದು ವೇಳೆ ವಿಚ್ಛೇದನ ಪಡೆಯದೇ, ನಿಮ್ಮ ಪತ್ನಿ ತೀರಿಕೊಂಡರೆ, ಆಕೆಯ ಹೆಸರಿನಲ್ಲಿ ಉಳಿದ ಚರ ಸ್ಥಿರ ಆಸ್ತಿಗಳಲ್ಲಿ ನಿಮಗೆ ಭಾಗ ಸಿಗುತ್ತದೆ.

    ಒಂದು ವೇಳೆ ಆಕೆ ತನ್ನ ಜೀವಿತ ಕಾಲದಲ್ಲೇ ಬೇರೆಯವರಿಗೆ ವಿಲ್/ದಾನ ಮಾಡಿದ್ದರೆ, ಆಗ ಅದೂ ನಿಮಗೆ ಸಿಗುವುದಿಲ್ಲ. ಒಂದು ವೇಳೆ ನೀವು ಧೃಢಕಾಯರಾಗಿ ಇಲ್ಲದೇ ಇದ್ದು, ನಿಮ್ಮನ್ನು ನೀವು ಪೋಷಿಸಿಕೊಳ್ಳಲು ಸಾಧ್ಯ ಇರದ ಖಾಯಿಲೆ ಇತ್ಯಾದಿಗಳಿಂದ ಬಳಲುತ್ತಿದ್ದರೆ, ಆಗ ನೀವು ನಿಮ್ಮ ಪತ್ನಿಯಿಂದ ತಿಂಗಳಿಗೆ ಇಷ್ಟು ಎಂದು ಜೀವನಾಂಶ ಪಡೆಯಬಹುದು ಅಷ್ಟೇ. ‌

    ನಿಮಗೆ ಅವಳ ಸಂಬಳವೂ ಸಿಗುವುದಿಲ್ಲ ಮತ್ತು ಮನೆಯಲ್ಲಿ ಒಂದು ನಯಾ ಪೈಸೆ ಭಾಗವೂ ಸಿಗುವುದಿಲ್ಲ. ನೀವು ಅಂಗವಿಕಲರಾದವರನ್ನು ಮದುವೆ ಆಗ ಬೇಕು ಎಂದು ಯಾರೂ ನಿಮ್ಮನ್ನು ಒತ್ತಾಯ ಮಾಡಲಿಲ್ಲ. ನಿಮಗೆ ಇಷ್ಟವಿಲ್ಲದೇ ಹೋದರೆ ಮದುವೆಗೆ ಒಪ್ಪಬಾರದಿತ್ತು. ಈಗ ಅವಳಿಂದ ಪರಿಹಾರ ನಿರೀಕ್ಷಿಸಿದರೆ, ನೀವೇ ತಪ್ಪು ಮಾಡಿದಂತೆ ಆಗುತ್ತದೆ.

    ಪತ್ನಿಯ ಸಂಪಾದನೆಯನ್ನೆಲ್ಲಾ ಪತಿಗೇ ಕೊಡಬೇಕು ಎಂದು ಬಯಸುವುದೂ, ನಿರೀಕ್ಷಿಸುವುದೂ ಸಹ ಸರಿಯಲ್ಲ. ನೀವು ಈ ಯೋಚನೆಗಳನ್ನು ಪಕ್ಕಕ್ಕೆ ಇಟ್ಟು ಆಕೆಯ ಮನಸ್ಸನ್ನು ಪ್ರೀತಿ ವಿಶ್ವಾಸದಿಂದ ಗೆದ್ದುಕೊಳ್ಳುವುದು ಒಳ್ಳೆಯದು. ಆಕೆಯಿಂದ ಒಂದು ಪೈಸೆಯನ್ನೂ ನಿರೀಕ್ಷಿಸದೇ ಇದ್ದರೆ ನಿಮ್ಮ ದಾಂಪತ್ಯವಾದರೂ ಸರಿಹೋಗಬಹುದು.

    ನ್ಯಾಯದೇವತೆ ಅಂಕಣದ ಹಿಂದಿನ ಪ್ರಶ್ನೋತ್ತರಗಳನ್ನು ನೋಡಲು https://www.vijayavani.net/ ಕ್ಲಿಕ್ಕಿಸಿ. ಅಲ್ಲಿ ಅಂಕಣ ಕಾಲಮ್‌ನಲ್ಲಿ ನ್ಯಾಯದೇವತೆ ಎಂದು ಇದ್ದು ಅದರ ಮೇಲೆ ಕ್ಲಿಕ್‌ ಮಾಡಿದರೆ ಎಲ್ಲವೂ ಲಭ್ಯ.). ಇಲ್ಲದಿದ್ದರೆ ನೇರವಾಗಿ ಇಲ್ಲಿ ಕ್ಲಿಕ್ಕಿಸಿ:

    https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/

    ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು [email protected] ಅಥವಾ [email protected] ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

    ಅಪ್ಪನ ಆಸ್ತಿಗೆ ವಿಲ್‌ ಮಾಡದೇ ಅಮ್ಮ ಮೃತಪಟ್ಟಳು- ಅದನ್ನು ಭಾಗ ಮಾಡುವುದು ಹೇಗೆ?

    ಮಕ್ಕಳಾಗಿಲ್ಲವೆಂದು ಇನ್ನೊಂದು ಮದ್ವೆಯಾದರೆ ಇಬ್ರಿಗೂ ಮಕ್ಕಳಾದವು: ಈಗ ಆಸ್ತಿಯ ಭಾಗ ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts