

ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ ಕೆಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ 2021 'ಹ್ಯಾಪಿ ನ್ಯೂ ಇಯರ್' ಆಗುವ ಲಕ್ಷಣಗಳು ಗೋಚರಿಸಿವೆ. ಏಕೆಂದರೆ ಕೇಂದ್ರ ಸರ್ಕಾರ ಈಗ ಹೊಸದೊಂದು ಆಫರ್ ಕೊಟ್ಟಿದ್ದು, ರೈತರ ಬೇಡಿಕೆ ಬಹುತೇಕ ಈಡೇರಿ, ಪ್ರತಿಭಟನೆಗೆ ಅಂತ್ಯ ಕಾಣುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರತಿಭಟನಾನಿರತ ರೈತ ಮುಖಂಡರ ಜತೆ ಮತ್ತೊಮ್ಮೆ ಮಾತುಕತೆ ನಡೆಸುವ ಬಗ್ಗೆ ಸೋಮವಾರ ಘೋಷಿಸಿರುವ ಕೇಂದ್ರ ಸರ್ಕಾರ, ಡಿ. 30ರಂದು ನಡೆಯುವ ಮಾತುಕತೆಗೆ ಬರುವಂತೆ ಆಹ್ವಾನಿಸಿದೆ. ಬುಧವಾರ ದೆಹಲಿಯ ವಿಜ್ಞಾನ ಭವನದಲ್ಲಿ ಮಧ್ಯಾಹ್ನ 2 ಗಂಟೆಗೆ ಈ ಮಾತುಕತೆ ನಡೆಯಲಿದೆ.
ಇನ್ನೊಂದೆಡೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ರೈತ ಮುಖಂಡ ದರ್ಶನ್ ಪಾಲ್, ಕೃಷಿ ಕಾಯ್ದೆಗಳನ್ನು ವಿರೋಧಿಸಿ ಡಿ. 30ರಂದು ಕುಂಡ್ಲಿ-ಮನೇಸರ್-ಪಲ್ವಾಲ್ ಹೆದ್ದಾರಿಯಲ್ಲಿ ಟ್ರ್ಯಾಕ್ಟರ್ ಜಾಥಾ ನಡೆಸುವುದಾಗಿ ಹೇಳಿದ್ದಾರೆ. ಮಾತ್ರವಲ್ಲದೆ, ದೆಹಲಿ ಹಾಗೂ ಇತರ ಭಾಗಗಳಿಂದರ ರೈತರು ಹಾಗೂ ಸಾರ್ವಜನಿಕರು ಇದರಲ್ಲಿ ಭಾಗವಹಿಸುವ ಮೂಲಕ ಹೊಸ ವರ್ಷವನ್ನು ಆಚರಣೆ ಮಾಡಬೇಕು ಎಂಬುದಾಗಿ ಅವರು ಕರೆ ನೀಡಿದ್ದಾರೆ. (ಏಜೆನ್ಸೀಸ್)