ಕೋಲ್ಕತ ಹತ್ಯೆ ಕೇಸ್​: ತನಿಖಾಧಿಕಾರಿಗಳ ಕಣ್ಣಿಗೆ ಮಣ್ಣೆರಚುವ ಪ್ರಯತ್ನ! ಸಂದೀಪ್ ವಿರುದ್ಧ ಸಿಬಿಐ ಗರಂ ​

ವಿಜಯವಾಣಿ-2024-09-16T110237.125
Published on

ಪಶ್ಚಿಮ ಬಂಗಾಳ: ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ಟ್ರೈನಿ ವೈದ್ಯೆಯ ಮೇಲೆ ನಡೆದ ಭೀಕರ ಅತ್ಯಾಚಾರ ಹಾಗೂ ಹತ್ಯೆ ಘಟನೆಯನ್ನು ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಿದ್ದ ವೈದ್ಯಕೀಯ ಸಿಬ್ಬಂದಿ, ಆರೋಪಿಗಳ ವಿರುದ್ಧದ ಹೋರಾಟವನ್ನು ನಿರಂತರವಾಗಿ ಮುಂದುವರೆಸಿದ್ದಾರೆ. ಆಗಸ್ಟ್​ 16ರಂದು 24 ಗಂಟೆಗಳ ಕಾಲ ದೇಶವ್ಯಾಪಿ ಮೆಡಿಕಲ್ ಸೇವೆಯನ್ನು ಸ್ಥಗಿತಗೊಳಿಸುವ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ತಮ್ಮ ಸಮಸ್ಯೆಯನ್ನು ಒತ್ತಿ ಹೇಳಿದ್ದ ಕಿರಿಯ ವೈದ್ಯರು, ಇದೀಗ ನ್ಯಾಯಕ್ಕಾಗಿ ನಡೆಸುತ್ತಿರುವ ಪ್ರತಿಭಟನೆ ಸಿಎಂ ಮನವಿ ಮಾಡಿದರೂ ಸಹ ಕೈಬಿಟ್ಟಿಲ್ಲ.

ಅತ್ಯಾಚಾರಿ ಆರೋಪಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು, ಈ ಕೃತ್ಯದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬುದರ ತನಿಖೆ ಚುರುಕಿನಿಂದ ಸಾಗಬೇಕು ಎಂಬ ಕೂಗು ದೇಶವ್ಯಾಪಿ ಕೇಳಿಬಂದಿದೆ. ಇದೆಲ್ಲದರ ನಡುವೆ ಸೆ.02ರಂದು 15 ದಿನಗಳ ನಿರಂತರ ವಿಚಾರಣೆ ಬಳಿಕ ಸಿಬಿಐ, ಆರ್​ಜಿ ಕರ್ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್​ ಘೋಷ್​​ನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿತು. ಸಂದೀಪ್ ಜತೆ ಅದೇ ಆರ್‌ಜಿ ಕರ್‌ ಕಾಲೇಜಿನಲ್ಲಿ ಸೆಕ್ಯೂರಿಟಿ ಆಫೀಸರ್​ ಆಗಿ ಕೆಲಸ ಮಾಡುತ್ತಿದ್ದ ಅಫ್ಸರ್ ಅಲಿ ಖಾನ್ ಹಾಗೂ ಆಸ್ಪತ್ರೆಗೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ಬಿಪ್ಲಬ್ ಸಿಂಗ್ ಮತ್ತು ಸುಮನ್ ಹಜ್ರಾರನ್ನು ಕೂಡ ಸಿಬಿಐ ಅರೆಸ್ಟ್ ಮಾಡಿತು. ಇದೀಗ ತನಿಖಾಧಿಕಾರಿಗಳಿಗೆ ವಂಚಿಸಲು ಆರೋಪಿ ಸಂದೀಪ್​ ಮುಂದಾಗಿದ್ದ ಎಂದು ಸಿಬಿಐ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಸಂದೀಪ್ ಘೋಷ್ ಮೃತ ಟ್ರೈನಿ ವೈದ್ಯೆಯ ಅತ್ಯಾಚಾರ ಹಾಗೂ ಹತ್ಯೆ ಕೇಸ್​ಗೆ ಸಂಬಂಧಿಸಿದಂತೆ ತನ್ನ ಪಾಲಿಗ್ರಾಫ್ ಪರೀಕ್ಷೆಯ ಫೊರೆನ್ಸಿಕ್ ವರದಿಯಿಂದ ಸಿಬಿಐ ತನಿಖಾಧಿಕಾರಿಗಳ ದಿಕ್ಕು ತಪ್ಪಿಸಲು ಯತ್ನಿಸಿದ್ದು, ಉದ್ದೇಶಪೂರ್ವಕವಾಗಿ ವಂಚಿಸಲು ಪ್ರಯತ್ನಿಸಿದ ಎಂದು ಹೇಳಲಾಗಿದೆ. ಅತ್ಯಾಚಾರ-ಹತ್ಯೆ ನಡೆದಿರುವುದು ಬೆಳಕಿಗೆ ಬಂದರೂ ಸಹ ಘೋಷ್ ಪೊಲೀಸ್​ ಠಾಣೆಯಲ್ಲಿ​ ಈ ಪ್ರಕರಣ ಕುರಿತು ಎಫ್‌ಐಆರ್ ದಾಖಲಿಸಲು ಬಯಸಲಿಲ್ಲ ಎಂಬ ಸಂಗತಿ ದೇಶವ್ಯಾಪಿ ಭಾರೀ ಸಂಚಲನ ಮೂಡಿಸಿತು. ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸುವಲ್ಲಿ ವಿಳಂಬ ಮತ್ತು ಸಾಕ್ಷಿ ನಾಪತ್ತೆಯಾಗಿದ್ದಕ್ಕಾಗಿ ಘೋಷ್ ಮತ್ತು ಹಿರಿಯ ಪೊಲೀಸ್ ಅಧಿಕಾರಿ ಅಭಿಜಿತ್ ಮೊಂಡಲ್​ರನ್ನು ಸಿಬಿಐ ಬಂಧಿಸಿದ ಎರಡು ದಿನಗಳ ಬಳಿಕ ಈ ವಿಷಯ ಬಹಿರಂಗವಾಗಿದೆ.

ತನಿಖೆಯ ಸಂದರ್ಭದಲ್ಲಿ ಘೋಷ್​ನನ್ನು ಲೇಯರ್ಡ್ ವಾಯ್ಸ್ ಅನಾಲಿಸ್ಟ್ (ಎಲ್‌ವಿಎ) ಮತ್ತು ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಸಿಬಿಐನ ರಿಮಾಂಡ್ ನೋಟ್ ಉಲ್ಲೇಖಿಸಿದೆ. ಇನ್ನು ಫರೆನ್ಸಿಕ್ (CFSL ) ವರದಿ ಪ್ರಕಾರ, ಈ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳಲ್ಲಿ ಸಂದೀಪ್​ ವರ್ಷನ್​ ಮೋಸದಾಯಕವಾಗಿದೆ ಎಂಬುದು ಸ್ಪಷ್ಟವಾಗಿದೆ. ವಕೀಲರೊಂದಿಗೆ ಸಮಾಲೋಚನೆ ನಡೆಸುತ್ತಿದ್ದರೂ ಡಾ. ಸಂದೀಪ್ ಘೋಷ್ ಈ ವಿಷಯದಲ್ಲಿ ಎಫ್‌ಐಆರ್ ದಾಖಲಿಸಲು ಉದ್ದೇಶಿಸಿಲ್ಲ ಎಂದು ವರದಿ ಹೇಳಿದೆ. ಅಂತಿಮವಾಗಿ ಮೃತ ಟ್ರೈನಿಯ ಹತ್ಯೆ ಕೇಸ್​ ಅನ್ನು ಆರ್‌ಜಿ ಕರ್ ಆಸ್ಪತ್ರೆಯ ಉಪಪ್ರಾಂಶುಪಾಲರು ದೂರು ದಾಖಲಿಸಿ, ಆತ್ಮಹತ್ಯೆ ನಡೆದಿದೆ ಎಂದು ತಿಳಿಸಿದ್ದಾರೆ.

ಸೆಮಿನಾರ್ ಹಾಲ್‌ನಲ್ಲಿ ವೈದ್ಯೆಯ ಅರೆಬೆತ್ತಲೆ ಶವ ಪತ್ತೆಯಾದಾಗ ಆಗಸ್ಟ್ 9ರ ಬೆಳಗ್ಗೆ 10.03ರಿಂದ ಮಾಜಿ ಆರ್‌ಜಿ ಕರ್​​​​​​​​​​ ಪ್ರಾಂಶುಪಾಲ ಸಂದೀಪ್, ಅಧಿಕಾರಿ​ ಅಭಿಜಿತ್ ಮೊಂಡಲ್ ಅವರೊಂದಿಗೆ ಸಂಪರ್ಕದಲ್ಲಿದ್ದರು ಎಂದು ಸಿಬಿಐ ರಿಮಾಂಡ್ ನೋಟ್ ಉಲ್ಲೇಖಿಸಿದೆ. ಆದಾಗ್ಯೂ, ಘೋಷ್ ಅತ್ಯಾಚಾರ ಪ್ರಕರಣದ ಬಗ್ಗೆ ಧ್ವನಿ ಎತ್ತಲು ಮುಂದಾಗಲಿಲ್ಲ, ಇಲ್ಲಿ ಅಂತಹದ್ದೇನು ನಡೆದಿಲ್ಲ ಎನ್ನುವಂತೆ ನಡೆದುಕೊಂಡಿರುವುದು ತಿಳಿದುಬಂದಿದೆ,(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net