ಆಂಧ್ರಪ್ರದೇಶ: ಪ್ರೀತಿ, ಪ್ರೇಮಕ್ಕೆ ಸಮಯ, ವಯಸ್ಸು ಎಂಬ ಯಾವುದೇ ಇತಿಮಿತಿ ಇಲ್ಲ. ಯಾರ ಮೇಲೆ, ಯಾವಾಗ, ಏಕೆ ಪ್ರೀತಿ ಹುಟ್ಟುತ್ತದೆ ಎಂಬುದು ಇಂದಿಗೂ ಅರ್ಥವಾಗದ ಸಂಗತಿ. ಯಾವ ಹೂವು ಯಾರ ಮುಡಿಗೆ? ಯಾರ ಹೃದಯದಲಿ ಯಾರ ಹೆಸರೋ ಯಾರು ಬಲ್ಲರು? ಹೀಗೆ ಪ್ರೀತಿಯನ್ನು ನಾನಾ ರೀತಿಯಲ್ಲಿ ವಿವರಿಸಬಹುದೇ ವಿನಃ ಅದನ್ನು ಅರ್ಥೈಸಿಕೊಳ್ಳುವುದು ಬಹಳ ಕಷ್ಟಕರ. ಪ್ರೇಮ ಚಿಗುರೊಡೆದು, ಅರಳಿ, ಹೂವಾಗಿ ಬೆಳೆದ ಮೇಲೆ ಶುರುವಾಗುವುದೇ ಅದರ ಅಳಿವು-ಉಳಿವು. ಪೋಷಿಸಿ, ಬೆಳೆಸಿದ ಪ್ರೀತಿ ಎಂಬ ಹೂವನ್ನು ಸ್ವಾರ್ಥ, ತ್ಯಾಗಗಳಿಂದ ಉಳಿಸಿಕೊಳ್ಳವುದು, ಕಳೆದುಕೊಳ್ಳುವುದು ಆಯಾ ಪ್ರೇಮಿಗಳಿಗೆ ಬಿಟ್ಟದ್ದು. ಪ್ರೀತಿಯ ಹೋರಾಟದಲ್ಲಿ ಯಶಸ್ಸು ಕಂಡವರ ಸಂಖ್ಯೆ ಬೆರಳೆಣಿಕೆಯಷ್ಟಿದ್ದರೆ. ಸೋತು ಕಣ್ಣೀರಿಡುವವರು ಸಂಖ್ಯೆ ಊಹೆಗೂ ಮೀರಿದ್ದು. ಕೇವಲ ಸಾಮಾನ್ಯರಿಗೆ ಮಾತ್ರವಲ್ಲ ಈ ಲವ್ ಫೇಲ್ಯೂರ್! ಹೆಸರಾಂತ ಸೆಲೆಬ್ರಿಟಿಗಳು ಕೂಡ ಈ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ.
ಇದನ್ನೂ ಓದಿ: 8.87 ಲಕ್ಷ ರೂ. ವರ್ಗಾಯಿಸಿಕೊಂಡು ವಂಚನೆ
ಎರಡು ಜೀವಗಳ ನಡುವಿನ ಪ್ರೀತಿ ಸಂಬಂಧ ಗಟ್ಟಿಯಾಗಿ ಉಳಿಸಿಕೊಳ್ಳಬೇಕೆಂದರೆ ಇಬ್ಬರ ನಡುವೆ ಕೂಡ ಒಳ್ಳೆಯ ಬಾಂಧವ್ಯ, ತ್ಯಾಗ, ನಂಬಿಕೆ ಇರಬೇಕು. ಪರಸ್ಪರ ಒಬ್ಬರನೊಬ್ಬರ ಕಷ್ಟಗಳನ್ನು ಅರಿತು, ಸಹಕರಿಸಿಕೊಂಡು ಅನ್ಯೋನ್ಯತೆಯಿಂದ ಮುಂದೆ ಸಾಗಬೇಕು. ಈ ಮಧ್ಯೆ ಬರುವ ಒಂದಷ್ಟು ಮುನಿಸು, ಹೊಂದಾಣಿಕೆ ಸಮಸ್ಯೆಗಳು ಪ್ರೀತಿಯಲ್ಲಿ ವೈಮನಸ್ಸು, ಬಿರುಕು ಮೂಡಿಸುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದ ಪ್ರೇಮ ಸಂಬಂಧ ನುಚ್ಚುನೂರಾಗಬಹುದು. ಸದ್ಯ ಈ ಸಾಲಿಗೆ ಸೌತ್ ಬ್ಯೂಟಿ, ಟಾಲಿವುಡ್ ನಟಿ ಮೃಣಾಲ್ ಠಾಕೂರ್ ಸೇರಿದ್ದು, ಇದೀಗ ತಮ್ಮ ಹೇಳಿಕೆಯಿಂದಲೇ ಸಖತ್ ಟ್ರೆಂಡಿಂಗ್ನಲ್ಲಿದ್ದಾರೆ. ಎಲ್ಲರಂತೆ ತನಗೂ ಬ್ರೇಕಪ್ ಆಗಿದೆ ಎಂಬ ವಿಷಯವನ್ನು ಬಹಿರಂಗವಾಗಿ ಸಂದರ್ಶನವೊಂದರಲ್ಲಿ ಹಂಚಿಕೊಂಡಿರುವ ಮೃಣಾಲ್, 7 ತಿಂಗಳ ಹಿಂದಷ್ಟೇ ನಾನು ಬ್ರೇಕಪ್ ಮಾಡಿಕೊಂಡೆ ಎಂಬ ಅಚ್ಚರಿಕೆ ಹೇಳಿಕೆ ನೀಡಿದ್ದಾರೆ.
‘ಸೀತಾರಾಮಂ’, ‘ಹಾಯ್ ನಾನ್ನ’ ಚಿತ್ರದ ಮೂಲಕ ಟಾಲಿವುಡ್ ಚಿತ್ರರಂಗದಲ್ಲಿ ತಮ್ಮದೇ ಹೊಸ ಟ್ರೆಂಡ್ ಸೆಟ್ ಮಾಡಿರುವ ಮೃಣಾಲ್, ತಮ್ಮ ಬ್ಯೂಟಿಯಿಂದಲೇ ಯುವಕರ ನಿದ್ದೆಗೆಡಿಸಿದ್ದಾರೆ. ಸದ್ಯ ಬಾಲಿವುಡ್ನತ್ತ ಮುಖ ಮಾಡಿರುವ ನಟಿ, ಹೊಸ ಸಿನಿಮಾದ ಕೆಲಸಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿ, “ನಮಗೆ ಸರಿ ಹೊಂದುವ ವ್ಯಕ್ತಿ ನಮ್ಮ ಜೀವನದಲ್ಲಿ ಬರುವವರೆಗೂ ಬಂದು ಹೋಗುವವರು ಹೋಗುತ್ತಲೇ ಇರ್ತಾರೆ. ನಿಮಗೆ ಗೊತ್ತಾ ಯಾರು ನಿಮಗೆ ಸರಿಯಾದ ಜೋಡಿಯಾಗುತ್ತಾರೆ ಅಂತ? ಎಲ್ಲರಂತೆ ನಾನು ಸಹ ಒಬ್ಬ ವ್ಯಕ್ತಿಯನ್ನು ಪ್ರೀತಿಸಿದೆ. ಆದರೆ, ಆತ ಯಾಕೆ ಸಿನಿಮಾ ನಟಿಯೊಂದಿಗೆ ಪ್ರೀತಿಯಲ್ಲಿರಲು ಒಪ್ಪಲಿಲ್ಲ ಅನ್ನೋದೆ ನನಗೆ ಅರ್ಥವಾಗಲಿಲ್ಲ” ಎಂದರು.
ಇದನ್ನೂ ಓದಿ: 100 ಪ್ರತಿಶತ ಕಸ ಸಂಗ್ರಹಣೆ
“ನನ್ನೊಂದಿಗೆ ಪ್ರೀತಿಯಲ್ಲಿದ್ದ ಆತ ನಮ್ಮದು ಶಿಸ್ತುಬದ್ಧ ಕುಟುಂಬ, ತುಂಬ ಕಟ್ಟುನಿಟ್ಟು ಎಂದೆಲ್ಲಾ ಹೇಳಿದ. ಇದೆಲ್ಲಾ ಕೇಳಿದ ಮೇಲೆ ನನಗೆ ಬಹಳ ನೋವಾಯ್ತು. ಇಷ್ಟಾದ ನಂತರ ನಾವಿಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ಬೇರ್ಪಟ್ಟೆವು. ಇದೆಲ್ಲಾ ಏಳು ತಿಂಗಳ ಹಿಂದೆಯಷ್ಟೇ ನಡೆದಿರೋದು. ಈ ಬ್ರೇಕಪ್ ಆದಾಗ ನಾನು ದುಃಖಕ್ಕೆ ಒಳಗಾಗಿಲ್ಲ. ಕಾರಣ ನನ್ನ ಜೀವನದಲ್ಲಿ ಒಂದಷ್ಟು ಬ್ರೇಕಪ್ಗಳು ನಡೆದುಹೋಗಿವೆ. ನನಗೆ ಸಖತ್ ಲುಕ್ ಇರುವ ಹುಡುಗ ಬೇಕಿಲ್ಲ, ಅವನಲ್ಲಿ ಒಳ್ಳೆಯ ಗುಣವಿದ್ದರೆ ಸಾಕು” ಎಂದು ಮೃಣಾಲ್ ಹೇಳಿದ್ದಾರೆ. ಸದ್ಯ ನಟಿಯ ಈ ಹೇಳಿಕೆಗಳು ಅಭಿಮಾನಿಗಳಲ್ಲಿ ಭಾರೀ ಅಚ್ಚರಿ ಮೂಡಿಸಿದ್ದು, ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ,(ಏಜೆನ್ಸೀಸ್).
ಕಡೆಗೂ ಬಿಗ್ಬಾಸ್ 11ರ ಆ್ಯಂಕರ್ ಸೀಕ್ರೆಟ್ ರಿವೀಲ್! ಸೆ.29ರಿಂದ ಅಸಲಿ ಆಟ ಶುರು