ಬೆಂಗಳೂರು: ರಿಯಾಲಿಟಿ ಶೋಗಳ ಪೈಕಿ ಅತೀ ದೊಡ್ಡ ರಿಯಾಲಿಟಿ ಶೋ ಎಂದೇ ಖ್ಯಾತಿ ಗಳಿಸಿರುವ ಕನ್ನಡ ಬಿಗ್ ಬಾಸ್ ಮನರಂಜನಾ ಕಾರ್ಯಕ್ರಮಕ್ಕೆ ಇದೀಗ ಹೊಸ ರೂಪ ಸಿಕ್ಕಿದ್ದು, ಸೀಸನ್ 10ರ ಯಶಸ್ಸಿನ ನಂತರ ಸೀಸನ್ 11 ಸಖತ್ ಸದ್ದು ಮಾಡುತ್ತಿದೆ. ಸತತ 11 ಸೀಸನ್ಗಳನ್ನು ತಮ್ಮ ಖಡಕ್ ಮಾತು, ವಿಭಿನ್ನ ಶೈಲಿಯಿಂದಲೇ ಅಚ್ಚುಕಟ್ಟಾಗಿ, ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಈ ಬಾರಿ ಕಾರ್ಯಕ್ರಮದ ಮುಂದಾಳತ್ವ ವಹಿಸಲಿದ್ದಾರಾ ಎಂಬ ಪ್ರಶ್ನೆ ವೀಕ್ಷಕರನ್ನು ಬೆಂಬಿಡದೆ ಕಾಡತೊಡಗಿತ್ತು. ಇದೀಗ ಆ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದ್ದು, ಆ್ಯಂಕರ್ ಯಾರು ಎಂಬುದು ಅಧಿಕೃತವಾಗಿ ರಿವೀಲ್ ಆಗಿದೆ.
ಇದನ್ನೂ ಓದಿ:ಸಾರ್ವಜನಿಕರ ಗಮನ ಸೆಳೆದ ಮಾನವ ಸರಪಳಿ ನಿರ್ಮಾಣ; ಪ್ರಜಾಪ್ರಭುತ್ವ ದಿನಾಚರಣೆ
ಸೀಸನ್ 10ರ ವಿನ್ನರ್ ಪಟ್ಟ ಯಾರ ಪಾಲಾಗಲಿದೆ ಎಂಬ ಒಂದೇ ಒಂದು ಪ್ರಶ್ನೆ ವೀಕ್ಷಕರನ್ನು ಹೇಗೆ ಬೆಂಬಿಡದೆ ಕಾಡುತ್ತಿತ್ತೋ, ಅದೇ ರೀತಿ ಕಿಚ್ಚ ಸುದೀಪ್ ಅವರ ನಿರೂಪಣೆ ಶೋಗೆ ಇರಲಿದೆಯೇ ಎಂಬುದು ಕೂಡ ತಲೆಯಲ್ಲಿ ಬಗೆಹರಿಯದ ಸಮಸ್ಯೆಯಾಗಿ ಜನರಲ್ಲಿ ಕಾಡುತ್ತಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸುದೀಪ್ ಸೀಸನ್ 11ರ ಆ್ಯಂಕರ್ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂಬ ಸುದ್ದಿಗಳು ವ್ಯಾಪಕವಾಗಿ ಹರಿದಾಡಿತ್ತು. ಆದ್ರೆ, ಇದೀಗ ಕಡೆಗೂ ಆ ಗೊಂದಲಗಳಿಗೆ ತೆರೆ ಎಳೆಯಲಾಗಿದ್ದು, ಬಿಗ್ ಬಾಸ್ ಸೀಸನ್ 11 ಅನ್ನು ಕೂಡ ಕಿಚ್ಚ ಸುದೀಪ್ ಅವರೇ ನಡೆಸಿಕೊಡಲಿದ್ದಾರೆ. ಈಗಾಗಲೇ ಕಾರ್ಯಕ್ರಮದ ಪ್ರೋಮೋ ಕೂಡ ಹೊರಬಿದ್ದಿದೆ.
ಒಂದೆಡೆ ಸುದೀಪ್ ನಿರೂಪಣೆ ಎಂದಿನಂತೆ ಈ ಸೀಸಸ್ನಲ್ಲಿಯೂ ನೋಡಬಹುದು ಎಂದು ಖುಷಿ ಪಟ್ಟ ಅಭಿಮಾನಿಗಳು ಹಾಗೂ ವೀಕ್ಷಕರಿಗೆ ಇದೀಗ ಮತ್ತೊಂದು ಸುದ್ದಿ ಡಬಲ್ ಧಮಾಕಾ ನೀಡಿದೆ. ಪ್ರತಿವರ್ಷ ಅಕ್ಟೋಬರ್ ತಿಂಗಳ ಮಧ್ಯೆ ಅಥವಾ ಕಡೆಯ ವಾರದಲ್ಲಿ ಅದ್ಧೂರಿ ಓಪನಿಂಗ್ ಪಡೆಯುತ್ತಿದ್ದ ಬಿಗ್ ಬಾಸ್ ಕಾರ್ಯಕ್ರಮ ಈ ಬಾರಿ ಅಚ್ಚರಿ ಎಂಬಂತೆ ಇದೇ ಸೆ.29ರಿಂದ ಪ್ರಾರಂಭವಾಗಲಿದೆ. ಕಾರ್ಯಕ್ರಮಕ್ಕೆ ಸುದೀಪ್ ಚಾಲನೆ ನೀಡಲಿದ್ದು, ಯಾರೆಲ್ಲಾ ಸ್ಟಾರ್ ಸೆಲೆಬ್ರಿಟಿಗಳು ಬಿಗ್ ಮನೆಯೊಳಗೆ ಬಿಗ್ ಎಂಟ್ರಿ ಕೊಡಲಿದ್ದಾರೆ ಎಂಬುದನ್ನು ಸದ್ಯ ಕಾದು ನೋಡಬೇಕಿದೆ.