

ತಮಿಳುನಾಡು: ಕ್ರಿಕೆಟ್ ಲೋಕದ ದಿಗ್ಗಜ, ಟೀಮ್ ಇಂಡಿಯಾ ಕಂಡ ಶ್ರೇಷ್ಠ ನಾಯಕ, 'ಕ್ಯಾಪ್ಟನ್ ಕೂಲ್' ಮಹೇಂದ್ರ ಸಿಂಗ್ ಧೋನಿ ಯಾರಿಗೆ ಗೊತ್ತಿಲ್ಲ ಹೇಳಿ? 28 ವರ್ಷಗಳ ಬಳಿಕ 2011ರಲ್ಲಿ ಭಾರತಕ್ಕೆ ವಿಶ್ವಕಪ್ ತಂದುಕೊಟ್ಟ ನಾಯಕ ಎಂಬ ಪಟ್ಟ ಪಡೆದಿರುವ ಮಾಹಿ, ಕ್ರಿಕೆಟ್ ಪ್ರೇಮಿಗಳಿಂದ ಹಿಡಿದು ವಯಸ್ಸಾದ ವೃದ್ಧರ ಪ್ರೀತಿ, ಅಭಿಮಾನ ಸಂಪಾದಿಸಿದ್ದಾರೆ. ಕೇವಲ ಏಕದಿನ ವಿಶ್ವಕಪ್ ಮಾತ್ರವಲ್ಲದೇ ಟಿ20 ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿಯನ್ನೂ ಗೆದ್ದುಕೊಟ್ಟ ಭಾಗ್ಯವಂತ ಆಟಗಾರ. ಇಷ್ಟೆಲ್ಲಾ ಸಾಧನೆಗೈದ ಧೋನಿ, ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಬಳಿಕ ಐಪಿಎಲ್ಗೆ ಮಾತ್ರ ಸೀಮಿತವಾಗಿದ್ದಾರೆ. ವರ್ಷಕ್ಕೊಮ್ಮೆ ನಡೆಯುವ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಮೈದಾನಕ್ಕಿಳಿಯುವ ಮೂಲಕ ಫ್ಯಾನ್ಸ್ಗಳಿಗೆ ದರ್ಶನ ನೀಡ್ತಾರೆ.
ಕ್ರಿಕೆಟ್ ಜಗತ್ತಿನಲ್ಲಿ ತಮ್ಮ ಚಾಣಕ್ಷತನದ ಕ್ಯಾಪ್ಟನ್ಸಿ ಮೂಲಕವೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಧೋನಿ, ಮೈದಾನಕ್ಕಿಳಿಯುತ್ತಿದ್ದಾರೆ ಎಂಬ ವಿಷಯ ಗೊತ್ತಾದರೆ ಸಾಕು ಸ್ಟೇಡಿಯಂನಲ್ಲಿ ಜಮಾಯಿಸಿರುವ ಫ್ಯಾನ್ಸ್ಗಳ ಆರ್ಭಟ ಜೋರಾಗುತ್ತದೆ. ಆಗ ಕೇಳುವುದು ಒಂದೇ ಶಬ್ದ. 'ಧೋನಿ...ಧೋನಿ'. ಈ ಪದವನ್ನು ಬಿಟ್ಟರೆ ಇನ್ಯಾವ ಹೆಸರಿಗೂ ಅಲ್ಲಿ ಜಾಗವಿರುವುದಿಲ್ಲ. ಅಷ್ಟರ ಮಟ್ಟಿಗೆ ಫ್ಯಾನ್ಸ್ಗಳನ್ನು ಹೊಂದಿರುವ ಮಾಹಿ, ಎಲ್ಲರ ನೆಚ್ಚಿನ ಕ್ಯಾಪ್ಟನ್ ಕೂಲ್ ಆಗಿಯೇ ಇಂದಿಗೂ ಕಾಣಿಸಿಕೊಳ್ಳುತ್ತಾರೆ. ಆದ್ರೆ, ಮಾಜಿ ಕ್ರಿಕೆಟಿಗರೊಬ್ಬರು ಹಂಚಿಕೊಂಡ ಆ ಒಂದು ಘಟನೆ ಧೋನಿ ಅಭಿಮಾನಿಗಳು ಅಂದುಕೊಂಡಂತೆ ಮಾಹಿ 'ಕೂಲ್' ಅಲ್ಲ ಎಂಬುದನ್ನು ತಿಳಿಸಿದೆ.
2008ರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಟೀಮ್ನ ಯಶಸ್ಸಿನ ಕಡೆಗೆ ಕೊಂಡೊಯ್ದಿರುವ 'ಕ್ಯಾಪ್ಟನ್ ಕೂಲ್', ಐಪಿಎಲ್ ಇತಿಹಾಸದಲ್ಲಿಯೇ ತಮ್ಮ ತಂಡವನ್ನು ಐದು ಬಾರಿ ಚಾಂಪಿಯನ್ಸ್ ಪಟ್ಟಕೇರಿಸಿದ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಕೇವಲ ಚಾಂಪಿಯನ್ಸ್ ಮಾತ್ರವಲ್ಲದೇ ಅನೇಕ ಬಾರಿ ಫೈನಲ್, ರನ್ನರ್ ಅಪ್ ಆಗಿ ಸ್ಥಾನ ಪಡೆದಿರುವುದು ಮತ್ತಷ್ಟು ವಿಶೇಷ. ಇನ್ನು ಇದೇ ತಂಡದಲ್ಲಿ ಧೋನಿ ನಾಯಕತ್ವದಡಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಮಾಜಿ ಆಟಗಾರ ಸುಬ್ರಮಣ್ಯಂ ಬದ್ರಿನಾಥ್, ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಹಲವು ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಈ ವೇಳೆ ಧೋನಿ ಬಗ್ಗೆ ಮಾತನಾಡಿದ ಬದ್ರಿನಾಥ್, "2008ರ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ರೋಚಕ ಪಂದ್ಯ ನಡೆಯುತ್ತಿತ್ತು. ಈ ಮ್ಯಾಚ್ನಲ್ಲಿ ಆರ್ಸಿಬಿ 8 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿತ್ತು. ಬೆಂಗಳೂರು ಪಡೆ ನೀಡಿದ ಗುರಿಯನ್ನು ತಲುಪುವಲ್ಲಿ ಸಿಎಸ್ಕೆ ವಿಫಲವಾಯಿತು. ಕೇವಲ 111 ರನ್ ಗಳಿಸಿದ ನಮ್ಮ ತಂಡ 8 ವಿಕೆಟ್ ಕಳೆದುಕೊಂಡಿತು. ಈ ವೇಳೆ ಬ್ಯಾಟಿಂಗ್ಗೆ ಬಂದ ಧೋನಿ ಅನಿಲ್ ಕುಂಬ್ಳೆ ಅವರ ಬೌಲಿಂಗ್ನಲ್ಲಿ ಕೇವಲ ಒಂದು ರನ್ ಗಳಿಸಿ ಔಟ್ ಆದರು. ಇದರಿಂದ ಸಿಟ್ಟಾದ ಮಾಹಿ, ಮೈದಾನದಲ್ಲಿ ತಮ್ಮ ಕೋಪ ತೋರಿಸದೆ ಡ್ರೆಸ್ಸಿಂಗ್ ರೂಮ್ಗೆ ಎಂಟ್ರಿ ಕೊಡುವಾಗ ಅಲ್ಲೇ ಇದ್ದ ನೀರಿನ ಬ್ಯಾಟಲ್ನ ಜೋರಾಗಿ ಒದ್ದರು" ಎಂದರು.
"ನಾನು ಡ್ರೆಸ್ಸಿಂಗ್ ರೂಮ್ನಲ್ಲಿ ನಿಂತಿದ್ದೆ. ಆಗ ರೂಮ್ಗೆ ಬಂದ ಧೋನಿ, ಕೋಪದಿಂದ ಬಾಟಲಿಯನ್ನು ಜೋರಾಗಿ ಒದ್ದು ಒಳಗೆ ಬಂದರು. ಅವರ ಕೋಪದ ತಾಪ ನೋಡಲಾರದ ಉಳಿದ ಕ್ರಿಕೆಟಿಗರು ಹಾಗೂ ನಾನು, ಮಾಹಿಯನ್ನು ಮಾತನಾಡಿಸಲು ಹೆದರಿದೆವು. ಇಡೀ ದಿನ ನಾವ್ಯಾರು ಧೋನಿಯನ್ನು ಮಾತನಾಡಿಸುವ ಧೈರ್ಯ ಮಾಡಲಿಲ್ಲ. ಅವರು ಕೂಡ ಯಾರನ್ನು ಮಾತನಾಡಿಸಲಿಲ್ಲ. ಅಂದು ತಂಡ ಮೀಟಿಂಗ್ ಕೂಡ ನಡೆಯಲಿಲ್ಲ" ಎಂದು ಬದ್ರಿನಾಥ್ ಹೇಳಿದ್ದಾರೆ,(ಏಜೆನ್ಸೀಸ್).