ಮಹಿಳೆಯರ ಉಚಿತ ಪ್ರಯಾಣಕ್ಕೆ ಮಾರ್ಗಸೂಚಿ ಬಿಡುಗಡೆ; ಇಲ್ಲಿದೆ ಪೂರ್ಣ ವಿವರ…

Free Bus Woman
Published on

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರ ಉಚಿತ ಪ್ರಯಾಣ ಶಕ್ತಿ ಯೋಜನೆಗೆ ಈಗಾಗಲೇ ಅಧಿಕೃತ ಆದೇಶ ಹೊರಬಿದ್ದಿದೆ. ಮಹಿಳೆಯರ ಜತೆಗೆ ತೃತೀಯ ಲಿಂಗಿಗಳಿಗೂ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದೀಗ 'ಶಕ್ತಿ ಯೋಜನೆಯ' ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ಮುಂದಿನ ಮೂರು ತಿಂಗಳೊಳಗೆ ಉಚಿತ ಸೌಲಭ್ಯ ಪಡೆಯುವ ಎಲ್ಲಾ ಮಹಿಳೆಯರಿಗೆ ಸರ್ಕಾರದಿಂದ ಶಕ್ತಿ ಸ್ಮಾರ್ಟ್‌ ಕಾರ್ಡ್‌ ವಿತರಿಸಲಾಗುತ್ತದೆ. ಈ ಕಾರ್ಡ್ ಹೊಂದಿದ್ದರೆ ಮಾತ್ರ ಉಚಿತವಾಗಿ ಸರ್ಕಾರಿ ಬಸ್​ನಲ್ಲಿ ಮಹಿಳೆಯರು ಪ್ರಯಾಣಸಬಹುದಾಗಿದೆ.

ಶಕ್ತಿ ಸ್ಮಾರ್ಟ್ ಕಾರ್ಡ್ ಹೊಂದಿರುವ ರಾಜ್ಯದ ಎಲ್ಲಾ ಮಹಿಳೆಯರು ನಗರ, ಸಾಮಾನ್ಯ ಮತ್ತು ವೇಗದೂತ ಸಾರಿಗೆಗಳಲ್ಲಿ (ಎ.ಸಿ ಬಸ್ ಮತ್ತು ಐಷಾರಾಮಿ ಬಸ್‌ಗಳನ್ನು ಹೊರತುಪಡಿಸಿ) ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಿ, ಆದೇಶ ಹೊರಡಿಸಲಾಗಿದೆ.

'ಶಕ್ತಿ ಯೋಜನೆ'ಯ ಪ್ರಮುಖ ಅಂಶಗಳು ಈ ಕೆಳಗಿನಂತಿವೆ...

  • ಕರ್ನಾಟಕ ರಾಜ್ಯದ ಮಹಿಳೆಯರಿಗೆ (ವಿದ್ಯಾರ್ಥಿನಿಯರು ಸೇರಿದಂತೆ) ಮಾತ್ರ ಉಚಿತ ಪ್ರಯಾಣ ಸೌಲಭ್ಯ ಅನ್ವಯಿಸುತ್ತದೆ. ಈ ಮಹಿಳಾ ಪ್ರಯಾಣಿಕರ ಪೈಕಿ 6 ವರ್ಷದಿಂದ 12 ವರ್ಷದವರೆಗಿನ ಬಾಲಕಿಯರು ಮತ್ತು ಲಿಂಗತ್ಯ ಅಲ್ಪಸಂಖ್ಯಾತರು ಸಹ ಒಳಗೊಂಡಿರುತ್ತಾರೆ.
  • ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಗರ ಸಾರಿಗೆ ಸಾಮಾನ್ಯ ಮತ್ತು ವೇಗದೂತ (ತಡರಹಿತ ಸಾರಿಗೆಗಳು ಒಳಗೊಂಡಂತೆ) ಸಾರಿಗೆಗಳಲ್ಲಿ ಮಾತ್ರ ಮಹಿಳೆಯರು (ವಿದ್ಯಾರ್ಥಿನಿಯರು ಸೇರಿದಂತೆ) ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.
  • ಐಷಾರಾಮಿ ಬಸ್‌ಗಳಾದ ರಾಜಹಂಸ, ನಾನ್ ಎ.ಸಿ ಸ್ಲೀಪರ್, ಎ.ಸಿ ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಅಂಬಾರಿ, ಅಂಬಾರಿ ಡ್ರೀಮ್ ಕ್ಲಾಸ್, ಅಂಬಾರಿ ಉತ್ಸವ್, ಫ್ಲೈ ಬಸ್, ಇವಿ ಪ್ಲಸ್ ಸಾರಿಗೆಗಳಲ್ಲಿ ಉಚಿತ ಪ್ರಯಾಣ ಸೌಲಭ್ಯವು ಅನ್ವಯಿಸುವುದಿಲ್ಲ.
  • ಮಹಿಳಾ ಪ್ರಯಾಣಿಕರಿಗೆ ಪ್ರಯಾಣ ದೂರದ ಯಾವುದೇ ಮಿತಿ ಇರುವುದಿಲ್ಲ. ಈ ಪ್ರಯಾಣ ಸೌಲಭ್ಯವು ರಾಜ್ಯದ ಒಳಗೆ ಪ್ರಯಾಣಿಸಲು ಮಾತ್ರ ಅನ್ವಯವಾಗುತ್ತದೆ.
  • ಶಕ್ತಿ ಯೋಜನೆಯು ದೈನಿಕ ಪಾಸು, ಮಾಸಿಕ ಪಾಸು, ಸಾಂದರ್ಭಿಕ ಒಪ್ಪಂದ ಹಾಗೂ ಖಾಯಂಗುತ್ತಿಗೆ (chartered service), ಪ್ಯಾಕೇಜ್ ಮುಂತಾದ ಸೇವೆಗಳಿಗೆ ಅನ್ವಯಿಸುವುದಿಲ್ಲ.

ಸ್ಮಾರ್ಟ್​ ಕಾರ್ಡ್​ಗೆ ಅರ್ಜಿ ಸಲ್ಲಿಸುವುದು ಹೇಗೆ?

ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಗಳನ್ನು ಪಡೆದು ಸಾರ್ವಜನಿಕರು ಸಂಬಂಧಪಟ್ಟ ಸಾರಿಗೆ ಇಲಾಖೆಗೆ ಸಲ್ಲಿಸಬೇಕು. ಅಂತೆಯೇ ನಿಗಮಗಳು ಶಕ್ತಿ ಸ್ಮಾರ್ಟ್ ಕಾರ್ಡ್​ಗಳನ್ನು ವಿತರಿಸುವ ಪ್ರಕ್ರಿಯೆಯನ್ನು ಮುಂದಿನ ಮೂರು ತಿಂಗಳೊಳಗಾಗಿ ಪೂರ್ಣಗೊಳಿಸಬೇಕು ಎಂದು ಸರ್ಕಾರವು ಆದೇಶದಲ್ಲಿ ಸಾರಿಗೆ ನಿಗಮಗಳಿಗೆ ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net