ಕಾಂಗ್ರೆಸ್​ನ ಗ್ಯಾರಂಟಿ ಯೋಜನೆಗಳನ್ನು ಲಘುವಾಗಿ ಪರಿಗಣಿಸಿ ಯಾಮಾರಿದೆವು: ಪ್ರತಾಪ್ ಸಿಂಹ

Pratap Simha
Published on

ಬೆಂಗಳೂರು: ಚುನಾವಣೆಯ ಸಂದರ್ಭದಲ್ಲಿ ನೀಡಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಈಗಾಗಲೇ ಜಾರಿಗೊಳಿಸಿದೆ. ಆದರೆ ಒಂದಷ್ಟು ಷರತ್ತುಗಳನ್ನು ನೀಡಿರುವುದು ಜನರಲ್ಲಿ ಸಾಕಷ್ಟು ಗೊಂದಲ ಉಂಟಾಗಲು ಕಾರಣವಾಗಿದೆ. ಈ ಬಗ್ಗೆ ಪ್ರತಿಪಕ್ಷ ನಾಯಕರು ಕಾಂಗ್ರೆಸ್ ವಿರುದ್ಧ ನಿರಂತರವಾಗಿ ಕಿಡಿಕಾರುತ್ತಿದ್ದಾರೆ.

ಗ್ಯಾರಂಟಿ ಯೋಜನೆ ಬಗ್ಗೆ ನಿರಂತರವಾಗಿ ಟೀಕೆ ಮಾಡುತ್ತಾ ಬರುತ್ತಿರುವ ಸಂಸದ ಪ್ರತಾಪ್ ಸಿಂಹ, ಇದೀಗ ಟ್ವೀಟ್ ಮಾಡಿ 'ಕಾಂಗ್ರೆಸ್​ನವರ ಗ್ಯಾರಂಟಿಗಳನ್ನು ಲಘುವಾಗಿ ತೆಗೆದುಕೊಂಡು ಬಿಜೆಪಿಯವರಾದ ನಾವು ಚುನಾವಣೆಗಿಂತ ಮೊದಲು ಯಾಮಾರಿದೆವು' ಎಂದು ಹೇಳಿದ್ದಾರೆ.

ಕಾಂಗ್ರೆಸ್​ನವರ ಗ್ಯಾರಂಟಿ ಯೋಜನೆಯ ಬಗ್ಗೆ ಲಘುವಾಗಿ ಪರಿಗಣಿಸಿ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯವರಾದ ನಾವು ಮೋಸ ಹೋದೆವು. ಇದೀಗ ಗ್ಯಾರಂಟಿಗಳನ್ನು ಗಂಭೀರವಾಗಿ ತೆಗೆದುಕೊಂಡು ಕಾಂಗ್ರೆಸ್​ಗೆ ಮತ ಹಾಕಿ ಮೋಸ ಹೋದೆ ಎಂಬುದು ಮತದಾರನಿಗೆ ಈಗ ಅನುಭವ ಆಗುತ್ತಿದೆ ಎಂದು ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ.

ಸ್ವಾತಂತ್ರ್ಯ ಪೂರ್ವದಲ್ಲಿ ಟೋಪಿ ಹಾಕಿಕೊಂಡವರನ್ನು ನೋಡಿದರೆ ಜನ ಅವರನ್ನು ಕಾಂಗ್ರೆಸ್ಸಿಗರು ಎನ್ನುತ್ತಿದ್ದರು. ಆದರೆ ಈಗ ಕಾಂಗ್ರೆಸ್ಸಿಗರನ್ನು ನೋಡಿದರೆ ಟೋಪಿ ಹಾಕುವವರು ಎಂದು ಜನ ಆಡಿಕೊಳ್ಳುವಂತಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net