ದೇವರಿಗೆ ಚಿನ್ನದ ಸೀರೆ ಉಡುಗೊರೆ ಕೊಟ್ಟ ಭಕ್ತರು: ಬೆಲೆ ಕೇಳಿದ್ರೆ ಬೆರಗಾಗೋದು ಖಚಿತ!

Kanyaka Parameshwari,
Published on

ವಿಶಾಖಪಟ್ಟಣ: ಆಂಧ್ರಪ್ರದೇಶದ ಜಗನ್ನಾಯಕಪುರದಲ್ಲಿರುವ ಶ್ರೀ ವಾಸವಿ ಕನ್ಯಕಾ ಪರಮೇಶ್ವರಿಗೆ ಭಕ್ತರು ಚಿನ್ನದ ಸೀರೆಯನ್ನು ಉಡುಗೊರೆಯಾಗಿ ನೀಡಿರುವುದು ಭಾರೀ ಸುದ್ದಿಯಾಗಿದೆ.

ಬರೋಬ್ಬರಿ 2 ಕೋಟಿ ರೂ. ವೆಚ್ಚದಲ್ಲಿ 3 ಕೆಜಿ ಚಿನ್ನವನ್ನು ಬಳಸಿ ಮಾಡಿರುವ ಸೀರೆಯನ್ನು ಕನ್ಯಕಾ ಪರಮೇಶ್ವರಿ ದೇವಿಗೆ ತೊಡಿಸಲಾಗಿದ್ದು, ದೇವಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಶ್ರೀ ವಾಸವಿ ಕನ್ಯಕಾ ಪರಮೇಶ್ವರಿ ಕಲ್ಯಾಣ ಭಕ್ತಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಂಧ್ರದ ವಿಧಾನಸಭೆ ಉಪಸಭಾಪತಿ ಕೊಳಗಟ್ಲ ವೀರಭದ್ರಸ್ವಾಮಿ ಹಾಗೂ ಕಾಕಿನಾಡ ಶಾಸಕ ದ್ವಾರಂಪುಡಿ ಚಂದ್ರಶೇಖರ್‌ ರೆಡ್ಡಿ ಅವರು ಸೀರೆಯನ್ನು ದೇವಿಗೆ ಹಸ್ತಾಂತರಿಸಿದರು.

110 ವರ್ಷಗಳ ಹಿಂದೆ ನಿರ್ಮಾಣವಾಗಿರುವ ವಾಸವಿ ಅಮ್ಮನವರ ದೇವಸ್ಥಾನಕ್ಕೆ ಆರ್ಯ ವೈಶ್ಯ ಸಂಗಮದ ಮುಖಂಡರು ಚಿನ್ನದ ಸೀರೆಯನ್ನು ತಯಾರಿಸಿ ಕಾಣಿಕೆ ನೀಡಿರುವುದು ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಹಿಂದೆಂದೂ ಕಂಡಿಲ್ಲ. ನಿಜಕ್ಕೂ ಇದು ಶ್ಲಾಘನೀಯ ಎಂದು ಕೊಳಗಟ್ಲ ವೀರಭದ್ರಸ್ವಾಮಿ ಹೊಗಳಿದರು.

ಕಳೆದ ತಿಂಗಳು ಕೂಡ ವಿಜಯನಗರದ ಕನ್ಯಕಾ ಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ವಾಸವಿ ಮಾತೆಯ ಜಯಂತಿಯನ್ನು ಅದ್ಧೂರಿಯಾಗಿ ನಡೆಸಲಾಗಿತ್ತು. ಈ ವಾರ್ಷಿಕೋತ್ಸವದ ಅಂಗವಾಗಿ ವಾಸವಿ ಮಾತೆಯನ್ನು ಚಿನ್ನದ ಸೀರೆ ಮತ್ತು ವಜ್ರದ ಕಿರೀಟದಿಂದ ಅಲಂಕರಿಸಲಾಗಿತ್ತು. ಎಪಿ ವಿಧಾನಸಭೆ ಉಪಸಭಾಪತಿ ಕೊಳಗಟ್ಲ ವೀರಭದ್ರ ಸ್ವಾಮಿ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಚಿನ್ನದ ಸೀರೆಯಲ್ಲಿ ದೇವಿಯ ದರ್ಶನಕ್ಕೆ ಭಕ್ತರು ಸಾಲುಗಟ್ಟಿ ನಿಂತಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net