More

    ಸಂಸತ್ ಭವನ ಉದ್ಘಾಟನೆ ಸುತ್ತ ವಿವಾದದ ಹುತ್ತ

    ದೇಶದ ರಾಜಧಾನಿ ನವದೆಹಲಿಯಲ್ಲಿ ನಿರ್ವಿುಸಲಾಗಿರುವ ನೂತನ ಸಂಸತ್ ಭವನದ ಉದ್ಘಾಟನೆಯನ್ನು ಮೇ 28ರಂದು ನಿಗದಿಪಡಿಸಲಾಗಿದೆ. ಉದ್ಘಾಟನೆಯ ದಿನಾಂಕ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆ ನೆರವೇರುತ್ತಿರುವ ಬಗೆಗೆ ವಿರೋಧ ಪಕ್ಷಗಳ ನಾಯಕರು ತಕರಾರು, ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

    ‘ಸಾವರ್ಕರ್ ಅವರ ಜನ್ಮದಿನವಾದ ಮೇ 28ರಂದು, 64,500 ಚದರ ಮೀಟರ್ ವಿಸ್ತೀರ್ಣದ ತ್ರಿಕೋನ ಆಕಾರದ ನಾಲ್ಕು ಅಂತಸ್ತಿನ ಕಟ್ಟಡವನ್ನು ಪ್ರಧಾನಿ ಮೋದಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಸ್ಪೀಕರ್ ಓಂ ಬಿರ್ಲಾ ಪ್ರಧಾನಿಯನ್ನು ಭೇಟಿಯಾಗಿ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಿದ್ದಾರೆ’ ಎಂದು ಲೋಕಸಭೆ ಸಚಿವಾಲಯ ತಿಳಿಸಿದೆ.

    ಅದೇ ದಿನದಂದು ಹಿಂದುತ್ವಪರ ಹೋರಾಟಗಾರ ಹಾಗೂ ವಿಚಾರವಾದಿ ವೀರ ಸಾವರ್ಕರ್ ಜನ್ಮದಿನವಾಗಿದೆ. ಹೀಗಾಗಿ,ಬಿಜೆಪಿ ಸರ್ಕಾರ ಉದ್ದೇಶಪೂರ್ವಕವಾಗಿಯೇ ಈ ದಿನವನ್ನು ಉದ್ಘಾಟನೆಗೆ ಆಯ್ದುಕೊಂಡಿದೆ. ಯಾವ ವ್ಯಕ್ತಿಗೆ ಈ ದೇಶದ ಜಾತ್ಯತೀತತೆ, ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೇಲೆ ನಂಬಿಕೆಯಿರಲಿಲ್ಲವೋ, ಯಾವ ವ್ಯಕ್ತಿ ಮಹಾತ್ಮಾ ಗಾಂಧಿ ಅವರ ಕೊಲೆ ಸಂಚಿನ ಆರೋಪ ಹೊಂದಿದ್ದ್ದಾನೋ ಆ ವ್ಯಕ್ತಿಯ ಜನ್ಮದಿನದಂದು ನೂತನ ಸಂಸತ್ ಭವನ ಉದ್ಘಾಟಿಸುವುದು ಪ್ರಜಾಪ್ರಭುತ್ವಕ್ಕೆ ಮಾಡುವ ಅಗೌರವವಾಗಿದೆ ಎಂದು ವಿಪಕ್ಷ ನಾಯಕರು ಟೀಕಿಸುತ್ತಿದ್ದಾರೆ.

    ರಾಷ್ಟ್ರಪತಿ ಉದ್ಘಾಟಿಸಲಿ

    ಹೊಸ ಸಂಸತ್ ಕಟ್ಟಡವನ್ನು ರಾಷ್ಟ್ರಪತಿಗಳು ಉದ್ಘಾಟಿಸಬೇಕೆ ಹೊರತು ಪ್ರಧಾನಿಯಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಹೊಸ ಸಂಸತ್ ಭವನವು ಪ್ರಧಾನಿ ನರೇಂದ್ರ ಮೋದಿಯವರ ಆಡಂಬರದ ಯೋಜನೆ ಎಂದು ಕಾಂಗ್ರೆಸ್ ಟೀಕಿಸಿದ್ದರೆ, ಇದೊಂದು ಅಗತ್ಯದ ಯೋಜನೆ ಬಿಜೆಪಿ ಪ್ರತಿಪಾದಿಸಿದೆ.

    ಭವನ ಉದ್ಘಾಟನೆಗೆ ರಾಷ್ಟ್ರಪತಿಗಳಿಗೆ ಆಹ್ವಾನ ನೀಡದೆ ಸರ್ಕಾರ ಅಗೌರವ ತೋರಿದೆ. ಮೋದಿ ಸರ್ಕಾರವು ಕೇವಲ ಚುನಾವಣಾ ಕಾರಣಗಳಿಗಾಗಿ ದಲಿತ ಮತ್ತು ಬುಡಕಟ್ಟು ಸಮುದಾಯಗಳಿಂದ ಭಾರತದ ರಾಷ್ಟ್ರಪತಿಗಳ ಆಯ್ಕೆಯನ್ನು ಮಾಡಿದಂತೆ ತೋರುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ. ದೇಶದ ಪ್ರಥಮ ಪ್ರಜೆಯೂ ಆಗಿರುವ ರಾಷ್ಟ್ರಪತಿಗಳು ಭಾರತದ ಅತ್ಯುನ್ನತ ಶಾಸಕಾಂಗದ ಅತ್ಯುನ್ನತ ಸಾಂವಿಧಾನಿಕ ಪ್ರಾಧಿಕಾರವಾಗಿರುವುದರಿಂದ, ಹೊಸ ಕಟ್ಟಡವನ್ನು ಅವರೇ ಉದ್ಘಾಟಿಸಬೇಕು. ಮಾಜಿ ರಾಷ್ಟ್ರಪತಿಯಾಗಿದ್ದ ರಾಮನಾಥ ಕೋವಿಂದ ಅವರಿಗೆ ಹೊಸ ಸಂಸತ್ ಭವನದ ಶಿಲಾನ್ಯಾಸ ಕಾರ್ಯಕ್ರಮಕ್ಕೂ ಆಹ್ವಾನ ನೀಡಿರಲಿಲ್ಲ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪ್ರಧಾನಿ ಮೋದಿ ಸರ್ಕಾರದ ಮುಖ್ಯಸ್ಥರೇ ಹೊರತು ಶಾಸಕಾಂಗದ ಮುಖ್ಯಸ್ಥರಲ್ಲ. ಲೋಕಸಭೆ ಸ್ಪೀಕರ್ ಮತ್ತು ರಾಜ್ಯಸಭೆಯ ಸಭಾಪತಿಗಳು ಇದನ್ನು ಏಕೆ ಉದ್ಘಾಟಿಸುವುದಿಲ್ಲ? ಇದು ಸಾರ್ವಜನಿಕ ಹಣದಿಂದ ನಿರ್ವಿುಸಲ್ಪಟ್ಟಿದೆ. ಆದರೆ, ಪ್ರಧಾನಿಯವರು ತಮ್ಮ ಸ್ನೇಹಿತರು ಖಾಸಗಿ ನಿಧಿಯಿಂದ ಇದನ್ನು ಪ್ರಾಯೋಜಿಸಿರುವಂತೆ ಏಕೆ ವರ್ತಿಸುತ್ತಿದ್ದಾರೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಟೀಕಿಸಿದ್ದಾರೆ.

    ರಾಷ್ಟ್ರಕ್ಕೆ ಸಂಸದೀಯ ಪ್ರಜಾಪ್ರಭುತ್ವವನ್ನು ಉಡುಗೊರೆಯಾಗಿ ನೀಡಿದ ಭಾರತೀಯ ಸಂವಿಧಾನವು 2023ರ ನವೆಂಬರ್ 26ರಂದು 75ನೇ ವರ್ಷಕ್ಕೆ ಕಾಲಿಡುತ್ತದೆ. ಈ ದಿನವು ಹೊಸ ಸಂಸತ್ ಭವನದ ಉದ್ಘಾಟನೆಗೆ ಯೋಗ್ಯ. ಆದರೆ, ಇದನ್ನು ಸಾವರ್ಕರ್ ಜನ್ಮದಿನವಾದ ಮೇ 28ರಂದು ಮಾಡಲಾಗುತ್ತಿದೆ. ಇದು ಎಷ್ಟು ಪ್ರಸ್ತುತ ಎಂದು ತೃಣಮೂಲ ಸಂಸದ ಸುಖೇಂದು ಶೇಖರ್ ರೇ ಪ್ರಶ್ನಿಸಿದ್ದಾರೆ.

    ಇದು ನಮ್ಮ ಎಲ್ಲಾ ಸಂಸ್ಥಾಪಕರಿಗೆ ಅವಮಾನ. ಗಾಂಧಿ, ನೆಹರು, ಪಟೇಲ್, ಬೋಸ್ ಮತ್ತು ಇತರರ ಸಂಪೂರ್ಣ ನಿರಾಕರಣೆ. ಡಾ. ಅಂಬೇಡ್ಕರ್ ಅವರ ಸ್ಪಷ್ಟವಾದ ನಿರಾಕರಣೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರತಿಕ್ರಿಯಿಸಿದ್ದಾರೆ.

    ಹೊಸ ಕಟ್ಟಡದ ಹಲವು ವೈಶಿಷ್ಟ್ಯ

    • ತ್ರಿಕೋನ ಆಕಾರದ ನಾಲ್ಕು ಅಂತಸ್ತಿನ ಕಟ್ಟಡದ ವಿಸ್ತೀರ್ಣ 64,500 ಚದರ ಮೀಟರ್.
    • 1,280 ಸಂಸದರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.
    • ಜ್ಞಾನದ್ವಾರ, ಶಕ್ತಿದ್ವಾರ ಹಾಗೂ ಕರ್ಮದ್ವಾರ ಎಂಬ ಮೂರು ಪ್ರಮುಖ ದ್ವಾರಗಳನ್ನು ನಿರ್ವಿುಸಲಾಗಿದೆ. ಸಂಸದರು, ವಿಐಪಿ ಸಂದರ್ಶಕರು ಹಾಗೂ ಅಧಿಕಾರಿಗಳಿಗಾಗಿ ಪ್ರತ್ಯೇಕ ದ್ವಾರಗಳು ಇರಲಿವೆ.
    • 2020ರ ಡಿಸೆಂಬರ್ 10ರಂದು ಶಂಕುಸ್ಥಾಪನೆ.
    • ಭವನದ ಮೇಲೆ ರಾಷ್ಟ್ರೀಯ ಲಾಂಛನದ ಕಂಚಿನ ಪ್ರತಿರೂಪವಿದೆ. ಇದರ ತೂಕ ಅಂದಾಜು 9,500 ಕೆ.ಜಿ ಇದ್ದು, 6.5 ಮೀಟರ್ ಎತ್ತರವಿದೆ.

    1200 ಕೋಟಿ ರೂ. ವೆಚ್ಚ

    ಅಂದಾಜು 1,200 ಕೋಟಿ ರೂ. ವೆಚ್ಚದಲ್ಲಿ ನೂತನ ಸಂಸತ್ ಭವನ ನಿರ್ವಿುಸಲಾಗಿದೆ. 2020ರಲ್ಲಿ ಟಾಟಾ ಪ್ರಾಜೆಕ್ಟ್ಸ್ಗೆ ನಿರ್ವಣದ ಹೊಣೆ ವಹಿಸಲಾಯಿತು. ಆಗ 971 ಕೋಟಿ ರೂಪಾಯಿ ವೆಚ್ಚಕ್ಕೆ ಅನುಮೋದನೆ ನೀಡಲಾಗಿತ್ತು. ನಂತರ ಕಚ್ಚಾ ಸಾಮಗ್ರಿ ದರ ಹೆಚ್ಚಳದಿಂದಾಗಿ ಯೋಜನಾ ವೆಚ್ಚವನ್ನು 1,200 ಕೋಟಿ ರೂಪಾಯಿಗೆ ಏರಿಸಲಾಯಿತು. ಕಳೆದ ವರ್ಷದ ನವೆಂಬರ್ ಒಳಗಡೆ ಕಾಮಗಾರಿ ಮುಕ್ತಾಯಗೊಳಿಸುವ ಗುರಿ ನಿಗದಿಪಡಿಸಲಾಗಿತ್ತ್ತು. ಆದರೆ, ಕೋವಿಡ್ ಮತ್ತು ಇತರೆ ಸಮಸ್ಯೆಗಳಿಂದಾಗಿ ಸ್ವಲ್ಪ ವಿಳಂಬವಾಯಿತು.

    ಸೆಂಟ್ರಲ್ ವಿಸ್ಟಾ ಯೋಜನೆ

    ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಯಡಿ ಹೊಸ ಸಂಸತ್ ಭವನ ನಿರ್ಮಾಣ ಮಾಡಲಾಗಿದೆ. ಪ್ರಧಾನ ಮಂತ್ರಿ ಭವನ, ಉಪ ರಾಷ್ಟ್ರಪತಿ ಭವನ, ಕೇಂದ್ರ ಸಚಿವಾಲಯ, ಮುಂತಾದವು ಈ ಯೋಜನೆಯಲ್ಲಿ ಸೇರಿವೆ. ಈ ಯೋಜನೆಯಡಿಯಲ್ಲಿ, ಕರ್ತವ್ಯಪಥವನ್ನು ಪೂರ್ಣಗೊಳಿಸಲಾಗಿದೆ. ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್​ವರೆಗಿನ 3 ಕಿ.ಮೀ. ಉದ್ದದ ಕಾರಿಡಾರ್ ನವೀಕರಣ ಕಾಮಗಾರಿ ಇದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts