More

    ರಾಜ್ಯದಲ್ಲಿದೆ ಪಿಕ್ ಪಾಕೆಟ್ ಸರ್ಕಾರ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕೆ

    ಹುಬ್ಬಳ್ಳಿ: ಕರ್ನಾಟಕದಲ್ಲಿ ಒಬ್ಬ ವ್ಯಕ್ತಿಯಿಂದ 10 ಸಾವಿರ ಕಿತ್ತುಕೊಂಡು 2 ಸಾವಿರ ರೂಪಾಯಿ ನೀಡುವ ಪಿಕ್ ಪಾಕೆಟ್ ಸರ್ಕಾರ ಅಸ್ತಿತ್ವದಲ್ಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.

    ನವಲಗುಂದ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಶುಕ್ರವಾರ ಬಿಜೆಪಿ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

    ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಹೆಸರಲ್ಲಿ ತನ್ನ ಬೆನ್ನು ತಾನೇ ತಟ್ಟಿಕೊಳ್ಳುತ್ತಿದೆ. ಆದರೆ, ವಾಸ್ತವದಲ್ಲಿ ಜನರಿಗೆ ಏನನ್ನೂ ಕೊಡುತ್ತಿಲ್ಲ. ಒಂದು ಕಡೆ ಫ್ರೀ ಕೊಟ್ಟು ಮತ್ತೊಂದರಲ್ಲಿ ಅದರ ಹತ್ತರಷ್ಟು ಜನರಿಂದ ಕಿತ್ತುಕೊಳ್ಳುತ್ತಿದೆ ಎಂದು ಹರಿಹಾಯ್ದರು.

    4.75 ರೂ. ಇದ್ದ ವಿದ್ಯುತ್ ದರವನ್ನು 7.25 ರೂ.ಗೆ ಹೆಚ್ಚಿಸಿದೆ. ರೈತರಿಗೆ 10 ಸಾವಿರಕ್ಕೆ ಟಿಸಿ ಸಿಗುತ್ತಿತ್ತು. ಈಗ 3 ಲಕ್ಷ, 6 ಲಕ್ಷ ರೂಪಾಯಿ ವಿಧಿಸಿದ್ದಾರೆ. ಸ್ಪ್ರಿಂಕ್ಲರ್ ಪೈಪ್ ದರ ಹೆಚ್ಚಿಸಿದ್ದಾರೆ ಎಂದರು.

    ಸ್ಟ್ಯಾಂಪ್ ಡ್ಯೂಟಿ 20 ರೂ. ಇದ್ದದ್ದು ಈಗ 100 ರೂ.ಗೆ ಏರಿದೆ. ಸ್ಟಾಂಪ್ ಪೇಪರ್ 100 ಇತ್ತು 500ಕ್ಕೆ ಹೆಚ್ಚಳ ಕಂಡಿದೆ. ಹೀಗೆ ಎಲ್ಲದರ ದರಗಳನ್ನು ಕಾಂಗ್ರೆಸ್ ಸರ್ಕಾರ ಏರಿಸಿ ಶ್ರೀಸಾಮಾನ್ಯರ ಕಣ್ಣಿಗೆ ಮಂಕು ಬೂದಿ ಎರಚುತ್ತಿದೆ ಎಂದು ದೂರಿದರು.

    ಹತ್ತು ಕೆಜಿ ಅಕ್ಕಿ ಎಲ್ಲಿದೆ? ಎಂದು ಪ್ರಶ್ನಿಸಿದ ಜೋಶಿ, ಬಹುದೊಡ್ಡ ಸುಳ್ಳುಕೋರರ ಸರ್ಕಾರ ಇದಾಗಿದೆ ಎಂದು ಜರಿದರು.

    ಕೇಂದ್ರದ ಅನೇಕ ಯೋಜನೆಗಳು ದೇಶದ ಜನರ ಸ್ವಾವಲಂಬಿ ಬದುಕಿಗೆ ದಾರಿ ದೀಪವಾಗಿವೆ. ಕಿಸಾನ್ ಸಮ್ಮಾನ್, ಆಯುಷ್ಮಾನ್, ಉಜ್ವಲ, ಸಂಜೀವಿನಿ, ಹರ್ ಘರ್ ಜಲ, ಫಸಲ್ ಬಿಮಾ ಹೀಗೆ ವಿವಿಧ ಯೋಜನೆಗಳು ಕೋಟ್ಯಂತರ ಜನರನ್ನು ತಲುಪಿವೆ ಎಂದು ಕೇಂದ್ರ ಸರ್ಕಾರದ ಸಾಧನೆ ವಿವರಿಸಿದರು.

    ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಷಣ್ಮುಖ ಗುರಿಕಾರ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದಶಿರ್ ಪ್ರಕಾಶ ಅಂಗಡಿ, ಚಂಬಣ್ಣ ಅಕ್ಕಿ, ಮಂಜುನಾಥ ಅಕ್ಕಿ, ಮಲ್ಲಿಕಾರ್ಜುನ ದೇಸಾಯಿ, ಲಿಂಗಯ್ಯ ಬಣ್ಣದನೂರುಮಠ, ಕಲ್ಲಯ್ಯ ಪುರದಣ್ಣನವರ, ಪ್ರಮುಖರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts