More

    ಸಂವಿಧಾನಕ್ಕೆ ಅಪಚಾರವಾಗಿದ್ದು ಇಂದಿರೆಯಿಂದಲ್ಲವೇ?

    ಸಂವಿಧಾನ ರಕ್ಷಣೆಯ ವಿಷಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡುತ್ತಿರುವುದು ಹಾಸ್ಯಾಸ್ಪದ. ಸಂವಿಧಾನಕ್ಕೆ ಧಕ್ಕೆ ಮಾಡಿದವರು ಯಾರು, ಪ್ರಜಾಪ್ರಭುತ್ವವನ್ನು ಅವಮಾನಿಸಿದವರು ಯಾರು? ಎಂಬುದನ್ನು ಅವರು ಇತಿಹಾಸದ ಪುಟಗಳಿಂದ ಅರಿಯಬೇಕು. ತುರ್ತು ಪರಿಸ್ಥಿತಿಯ ಬಗ್ಗೆ ಒಂದಕ್ಷರ ಕೂಡ ಮಾತನಾಡದ ಕಾಂಗ್ರೆಸ್ಸಿಗರು ‘ಈಗ ಸಂವಿಧಾನ ಅಪಾಯದಲ್ಲಿದೆ’ ಎಂದು ಟೀಕಿಸುತ್ತಿರುವುದು ಹಾಸ್ಯಾಸ್ಪದ. ಪ್ರಧಾನಿ ನರೇಂದ್ರ ಮೋದಿ ಕಳೆದ 10 ವರ್ಷಗಳಲ್ಲಿ ಸಂವಿಧಾನದ ರಕ್ಷಣೆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತ ಬಂದಿದ್ದಾರೆ.

    | ವಿ.ಜಿ. ಪಾಟೀಲ್

    ದೇಶದ ಸಂವಿಧಾನವು ಅಪಾಯದಲ್ಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪದೇಪದೆ ಚುನಾವಣಾ ಭಾಷಣಗಳಲ್ಲಿ ಹೇಳುತ್ತಿದ್ದಾರೆ. ಆದರೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 49 ವರ್ಷಗಳ ಹಿಂದೆ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿ ಹೇಗೆ ಸಂವಿಧಾನ ವಿರೋಧಿ ಕೃತ್ಯ ಎಸಗಿದರು (ಭಾರತೀಯ ಪ್ರಜಾತಂತ್ರದ ಅತ್ಯಂತ ಕರಾಳ ದಿನಗಳು) ಎಂಬುದನ್ನು ಅವರ ಮೊಮ್ಮಗ ರಾಹುಲ್ ಗಾಂಧಿಗೆ ನೆನಪಿಸುವ ಯತ್ನವನ್ನು ಈ ಮೂಲಕ ಮಾಡುತ್ತಿದ್ದೇನೆ.

    ತುರ್ತು ಪರಿಸ್ಥಿತಿಯ ನಂತರ ದೇಶದಲ್ಲಿ ನಡೆದ ಚುನಾವಣೆಯಲ್ಲಿ ಉತ್ತರ ಪ್ರದೇಶದ ರಾಯ್ಬರೇಲಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇಂದಿರಾ ಗಾಂಧಿ, ರಾಜ್​ನಾರಾಯಣ್ ವಿರುದ್ಧ ಚುನಾವಣೆಯಲ್ಲಿ ಸೋತರು. ಇಂದಿರಾ ಗಾಂಧಿ ಚುನಾವಣಾ ಅಕ್ರಮಗಳ ವಿರುದ್ಧ ರಾಜ್​ನಾರಾಯಣ್ ಅಲಹಾಬಾದ್ ಹೈಕೋರ್ಟ್ ನಲ್ಲಿ ಹೋರಾಟ ಮಾಡಿದ್ದರು. ಅಕ್ರಮ ಸಾಬೀತಾದರೂ ರಾಜೀನಾಮೆ ನೀಡುವ ಬದಲು ಇಂದಿರಾ ಗಾಂಧಿ ಅಧಿಕಾರದಲ್ಲಿ ಮುಂದುವರಿಯುವ ಯತ್ನ ಮಾಡಿದರು.

    1975ರ ಜೂನ್ 12 ದೇಶದ ಕಾನೂನು ಮತ್ತು ರಾಜಕೀಯ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿರುವ ದಿನ. ಇದೇ ದಿನದಂದು ಅಲಹಾಬಾದ್ ಹೈಕೋರ್ಟ್, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಚುನಾ ವಣಾ ಅಕ್ರಮ ಎಸಗಿದ್ದಾರೆ ಎಂದು ತೀರ್ಪು ನೀಡಿ, 6 ವರ್ಷಗಳ ಕಾಲ ಸಾರ್ವಜನಿಕ ಜೀವನದಲ್ಲಿ ಇರುವಂತಿಲ್ಲ ಎಂದು ಹೇಳಿತ್ತು. ಇದರಿಂದಾಗಿಯೇ, ದೇಶದಲ್ಲಿ 2 ವರ್ಷಗಳ ಕಾಲ ತುರ್ತು ಪರಿಸ್ಥಿತಿ ಹೇರಲಾಯಿತು.

    ಹೈಕೋರ್ಟ್ ತೀರ್ಪಿಗೆ ಗೌರವ ನೀಡದ ಇಂದಿರಾ ಗಾಂಧಿ, ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಲಿಲ್ಲ. ತೀರ್ಪಿನ ಅನುಷ್ಠಾನಕ್ಕೆ ಸುಪ್ರೀಂಕೋರ್ಟ್ 1975ರ ಜೂನ್ 24ರಂದು ಷರತ್ತುಬದ್ಧ ತಡೆ ನೀಡಿತು. ದೇಶಕ್ಕೆ ಆಂತರಿಕ ಅಥವಾ ಬಾಹ್ಯ ಬೆದರಿಕೆ ಇದೆ ಎಂಬ ಸ್ಥಿತಿ ನಿರ್ವಣವಾದಾಗ ಅಥವಾ ಹಣಕಾಸು ಬಿಕ್ಕಟ್ಟು ತಲೆದೋರಿದ ಸಂದರ್ಭದಲ್ಲಿ ರಾಷ್ಟ್ರಪತಿ ಅನುಮೋದನೆ ಮೇರೆಗೆ ಸಂವಿಧಾನದ 18ನೇ ಪಠ್ಯವು ದೇಶದಲ್ಲಿ ಸಂವಿಧಾನಬದ್ಧ ತುರ್ತು ಪರಿಸ್ಥಿತಿ ಹೇರುವ ಅವಕಾಶವನ್ನು ನೀಡಿದೆ. ಆದರೆ, ಇಂಥದ್ದೊಂದು ಪರಿಸ್ಥಿತಿ ದೇಶದಲ್ಲೇನೂ ನಿರ್ವಣವಾಗಿರಲಿಲ್ಲ. ಹಾಗಿದ್ದರೂ, ಇಂದಿರಾ ಗಾಂಧಿಯವರ ನಿರ್ದೇಶನದ ಮೇರೆಗೆ ಅಂದಿನ ರಾಷ್ಟ್ರಪತಿ ಫಕ್ರುದ್ದಿನ್ ಅಲಿ ತುರ್ತು ಪರಿಸ್ಥಿತಿ ಹೇರುವ ಪ್ರಸ್ತಾವಕ್ಕೆ ಸಹಿ ಹಾಕಿದರು. 1975ರ ಜೂನ್ 25ರ ಮಧ್ಯರಾತ್ರಿಯಿಂದಲೇ ತುರ್ತು ಪರಿಸ್ಥಿತಿ ಜಾರಿಗೆ ಬಂತು. ವಿಚಿತ್ರ ಎಂದರೆ, ತುರ್ತು ಪರಿಸ್ಥಿತಿ ಘೊಷಣೆ ನಂತರವಷ್ಟೇ ಇಂದಿರಾ ಗಾಂಧಿ ತಮ್ಮ ಕ್ಯಾಬಿನೆಟ್​ಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಅಂದರೆ, ಇದು ಸಚಿವ ಸಂಪುಟದ ನಿರ್ಧಾರವಾಗಿರಲಿಲ್ಲ. ಬದಲಿಗೆ ಇಂದಿರಾ ಅವರ ವೈಯಕ್ತಿಕ ತೀರ್ವನವಾಗಿತ್ತು. ತಮ್ಮ ಸ್ವಹಿತಾಸಕ್ತಿಗಾಗಿ ಅವರು ಪ್ರಜಾಪ್ರಭುತ್ವದ ಎಲ್ಲ ನಿಯಮಗಳನ್ನು ಗಾಳಿಗೆ ತೂರಿದ್ದರು.

    ಸಂವಿಧಾನಕ್ಕೆ ಅಪಚಾರವಾಗಿದ್ದು ಇಂದಿರೆಯಿಂದಲ್ಲವೇ?

    ಮಾಧ್ಯಮಗಳಿಗೆ ನಿರ್ಬಂಧ ಹೇರುವ ಗೃಹ ಸಚಿವಾಲಯದ ಶಿಫಾರಸು ಗಳಿಗೆ ಜೂನ್ 26ರ ಬೆಳಗ್ಗೆ 8.30ಕ್ಕೆ ಕ್ಯಾಬಿನೆಟ್ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಈ ಮೂಲಕ ಎಲ್ಲ ಪ್ರಿಂಟರ್ಸ್, ಪ್ರಕಾಶಕರು, ಸಂಪಾದಕರು ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ಸುದ್ದಿಗಳನ್ನು ಸರ್ಕಾರದ ಸಕ್ಷಮ ಅಧಿಕಾರಿಯ ಅನುಮತಿ ಪಡೆಯದೆ ಪ್ರಕಟಿಸುವಂತಿರಲಿಲ್ಲ. ಅಲ್ಲಿಗೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗಿತ್ತು. 20 ತಿಂಗಳುಗಳ ತುರ್ತು ಪರಿಸ್ಥಿತಿಯಲ್ಲಿ ಯಾವುದೇ ವಿಚಾರಣೆ ನಡೆಸದೆ ಸುಮಾರು 1.40 ಲಕ್ಷ ಜನರನ್ನು ಸರ್ಕಾರ ಬಂಧನಕ್ಕೊಳಪಡಿಸಿತ್ತು ಎಂದು ಅಮ್ನೆಸ್ಟಿ ಇಂಟರ್​ನ್ಯಾಷನಲ್ ಸಂಸ್ಥೆ ಹೇಳಿತ್ತು. ಬಂಧನದ ಬಗ್ಗೆ ಅವರ ಸಂಬಂಧಿಕರು, ಸ್ನೇಹಿತರು ಅಥವಾ ವಿಶ್ವಾಸಿಗಳಿಗೆ ಕೂಡ ಮಾಹಿತಿ ನೀಡಲಿಲ್ಲ. ಸಂವಿಧಾನದಲ್ಲಿ ನೀಡಲಾಗಿರುವ ಸ್ವಾತಂತ್ರ್ಯದ ಹಕ್ಕನ್ನು ಹೇಗೆ ಕಿತ್ತೊಗೆಯಲಾಗಿತ್ತು ಎಂಬುದಕ್ಕಿದು ಉದಾಹರಣೆ. ವಿಪಕ್ಷಗಳ ಹಿರಿಯ ನಾಯಕರು, ಸಾಮಾಜಿಕ ಹೋರಾಟಗಾರರು, ವಿದ್ಯಾರ್ಥಿ ನಾಯಕರು ಹಾಗೂ ಪತ್ರಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂಧನಕ್ಕೀಡಾಗಿದ್ದರು.

    ಜಯಪ್ರಕಾಶ್ ನಾರಾಯಣ ಅವರನ್ನೂ ಯಾವುದೇ ಕಾರಣ ನೀಡದೆ ಜೈಲಿನಲ್ಲಿಟ್ಟಿದ್ದರು. 1977ರ ಮಾರ್ಚ್​ನಲ್ಲಿ ಜಯಪ್ರಕಾಶ ನಾರಾಯಣ ಅವರ ನೇತೃತ್ವದಲ್ಲಿ ಇಂದಿರಾ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ಭಾರಿ ಪ್ರಚಾರ ನಡೆಸಿದ ಪರಿಣಾಮವಾಗಿ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲನ್ನು ಕಂಡಿತು. 1977ರ ಮಾರ್ಚ್ 20ರಂದು ಲೋಕಸಭೆ ಚುನಾವಣೆ ಫಲಿತಾಂಶ ಹೊರಬಂತು. ಪ್ರತಿಪಕ್ಷಗಳು ‘ಜನತಾ’ ಎಂಬ ಹೆಸರಿನ ಅಡಿಯಲ್ಲಿ ಸ್ಪರ್ಧಿಸಿದ್ದವು. ಈ ಗುಂಪಿನ ಒಟ್ಟು 295 ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದರೆ, ಕಾಂಗ್ರೆಸ್ 154 ಸ್ಥಾನಗಳಿಗೆ ಸೀಮಿತಗೊಂಡಿತು. ತುರ್ತು ಪರಿಸ್ಥಿತಿಯಲ್ಲಿ ತಮ್ಮ ಸಂಪೂರ್ಣ ಸ್ವಾತಂತ್ರ್ಯ ಕಳೆದುಕೊಂಡಿದ್ದ ಜನತೆ, ಸರ್ವಾಧಿಕಾರಕ್ಕೆ ಈ ರೀತಿ ಉತ್ತರ ನೀಡಿದ್ದರು.

    ಜೈಪುರದ ಮೂರನೇ ರಾಣಿಯಾಗಿದ್ದ ರಾಣಿ ಗಾಯತ್ರಿದೇವಿ ಮತ್ತು ರಾಜಮಾತೆ ವಿಜಯರಾಜೇ ಸಿಂಧಿಯಾ ಅವರ ಮೇಲೆ ಯಾವುದೇ ಕ್ರಿಮಿನಲ್ ಆರೋಪದ ದೂರುಗಳಿರದಿದ್ದರೂ, ವೈಯಕ್ತಿಕ ದ್ವೇಷಕ್ಕಾಗಿ ಅವರನ್ನು ಬಂಧಿಸಲಾಗಿತ್ತು. ರಾಣಿ ಗಾಯತ್ರಿದೇವಿ ಅವರು ತುರ್ತು ಪರಿಸ್ಥಿತಿಯಲ್ಲಿ 6 ತಿಂಗಳುಗಳ ಅವಧಿಗೆ ದೆಹಲಿಯ ತಿಹಾರ್ ಜೈಲಿನಲ್ಲಿದ್ದರು. ತಿಹಾರ್ ಮೀನು ಮಾರುಕಟ್ಟೆಯಂತಿತ್ತು. ಬರೀ ಕಳ್ಳರು, ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡಿದ್ದವರಿಂದಲೇ ಅದು ತುಂಬಿಕೊಂಡಿತ್ತು. ನಂತರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 1 ಲಕ್ಷಕ್ಕಿಂತಲೂ ಹೆಚ್ಚು ಮತಗಳ ಅಂತರದಲ್ಲಿ ಗಾಯತ್ರಿದೇವಿ ಗೆದ್ದರು. ರಾಜಮಾತೆ ವಿಜಯರಾಜೆ ಸಿಂಧಿಯಾ ಅಂದು ಜನಸಂಘವನ್ನು ಬೆಂಬಲಿಸಿದರು. 1975ರ ಜೂನ್ 25ರಿಂದ 1977ರ ಮಾರ್ಚ್ 21ರ ತನಕ ತುರ್ತು ಪರಿಸ್ಥಿತಿ ಜಾರಿಯಲ್ಲಿತ್ತು.

    ಇದು ಈಗಿನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಅಜ್ಜಿ ಇಂದಿರಾ ಗಾಂಧಿ ಅವರು ಬೆಳೆಯುತ್ತಿದ್ದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಸಕಿಹಾಕಿದ್ದ ರೀತಿ. ಮೂಲಭೂತ ಹಕ್ಕು, ಸ್ವಾತಂತ್ರ್ಯ, ಮಾಧ್ಯಮ ಸ್ವಾತಂತ್ರ್ಯ ಎಲ್ಲವನ್ನೂ ಕಿತ್ತುಕೊಳ್ಳಲಾಗಿತ್ತು. ವಿಪರ್ಯಾಸ ಎಂದರೆ, ಇಂಥ ಇಂದಿರಾ ಗಾಂಧಿಯವರ ಮೊಮ್ಮಗ ರಾಹುಲ್ ಗಾಂಧಿ ಈಗ ಸಂವಿಧಾನ ರಕ್ಷಣೆಯ ಮಾತುಗಳನ್ನಾಡುತ್ತಿದ್ದಾರೆ. ಸಂವಿಧಾನಕ್ಕೆ ಭಾರೀ ಹಾನಿ ಮಾಡಿದ್ದ ಇಂದಿರಾ ಗಾಂಧಿಯವರ ಕೃತ್ಯಗಳ ಬಗ್ಗೆ ಅರಿವಿದ್ದರೂ, ರಾಹುಲ್ ಗಾಂಧಿ ಮಾತ್ರ ‘ನಾವು ಸಂವಿಧಾನ ರಕ್ಷಣೆ ಮಾಡುತ್ತೇವೆ’ ಎಂಬ ಹಾಸ್ಯದ ಮಾತುಗಳನ್ನಾಡುತ್ತ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಇನ್ನಿಲ್ಲದ ಟೀಕೆಗಳನ್ನು ಮಾಡುತ್ತಿದ್ದಾರೆ. ವಾಸ್ತವದಲ್ಲಿ, ಹಗಲು-ರಾತ್ರಿ ಎನ್ನದೆ ಜನಸೇವೆ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಕಳೆದ 10 ವರ್ಷಗಳಿಂದ ಸಂವಿಧಾನ ರಕ್ಷಣೆಯ ಗುರುತರ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತ ಬಂದಿದ್ದಾರೆ. ಆದರೆ, ಇಂದಿರಾ ಗಾಂಧಿ ಅಧಿಕಾರದಲ್ಲಿ ಉಳಿಯುವ ಏಕೈಕ ಕಾರಣಕ್ಕಾಗಿ ಸಂವಿಧಾನವನ್ನೇ ಗಾಳಿಗೆ ತೂರಿದ್ದರು. ಆದರೆ, ಈಗಿನ ಕಾಂಗ್ರೆಸ್ ನಾಯಕರು ಅಂದಿನ ಕರಾಳ ತುರ್ತು ಪರಿಸ್ಥಿತಿ ಬಗ್ಗೆ ಒಂದಕ್ಷರವೂ ಮಾತನಾಡುವುದಿಲ್ಲ ಎಂಬುದು ಕರಾಳ ಸತ್ಯ.

    (ಲೇಖಕರು ಹಿರಿಯ ವಕೀಲರು)

    ಲೈಂಗಿಕ ದೌರ್ಜನ್ಯ ಪ್ರಕರಣ: ಶಾಸಕ ಹೆಚ್​ಡಿ ರೇವಣ್ಣ ಬಂಧನ!  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts