More

    ಕೋಟೆ ಗದ್ದುಗೆಗೆ ಗದ್ದಿಗೌಡರ-ಸಂಯುಕ್ತ ಹಣಾಹಣಿ; ಕಮಲದ 5ನೇ ಗೆಲುವಿಗೆ ಗ್ಯಾರಂಟಿ ಸವಾಲು!

    | ಅಶೋಕ ಶೆಟ್ಟರ ಬಾಗಲಕೋಟೆ

    ಪ್ರಧಾನಿ ನರೇಂದ್ರ ಮೋದಿ ಅವರ ಮತಬೇಟೆ, ಗಟ್ಟಿಯಾಗಿರುವ ಹಿಂದುತ್ವದ ಬೇರು, ಶ್ರೀರಾಮಚಂದ್ರನ ನಾಮ ಒಗ್ಗೂಡಿಕೊಂಡಿದ್ದರಿಂದ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಗದ್ದುಗೆ ಗಟ್ಟಿ ಎನ್ನುವುದು ಬಿಜೆಪಿಯ ಅಚಲ ವಿಶ್ವಾಸ. ಆದರೆ, ಪಂಚ ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಮಹಿಳಾ ಮತದಾರರನ್ನು ಟಾರ್ಗೆಟ್ ಮಾಡಿರುವ ಕಾಂಗ್ರೆಸ್ ತಂತ್ರ ಬಾಗಲಕೋಟೆ ಲೋಕಕಣದ ಹೋರಾಟವನ್ನು ರೋಚಕಗೊಳಿಸಿದೆ.

    ಬಿಜೆಪಿ ಅಭ್ಯರ್ಥಿ, ಸಂಸದ ಪಿ.ಸಿ.ಗದ್ದಿಗೌಡರ 2004 ರಿಂದ ಗೆಲ್ಲುತ್ತಾ ಬಂದಿದ್ದಾರೆ. ಆ ಮೂಲಕ ಕಾಂಗ್ರೆಸ್​ನಿಂದ ಸುನಗದ ಎಸ್.ಬಿ.ಪಾಟೀಲ ಅವರ ಸತತ ನಾಲ್ಕು ಗೆಲುವಿನ ದಾಖಲೆ ಸರಿಗಟ್ಟಿದ್ದಾರೆ. 5ನೇ ಬಾರಿ ಗೆಲುವು ಪಡೆದರೆ ಹೊಸ ಇತಿಹಾಸ ಬರೆಯಲಿದ್ದಾರೆ. ಗದ್ದಿಗೌಡರ ಸರಳ-ಸಜ್ಜನಿಕೆ, ಪಕ್ಷ-ಜಾತಿ ಭೇದ ಮರೆತು ಎಲ್ಲರೊಂದಿಗಿನ ಒಡನಾಟ ಅವರಿಗೆ ನಾಲ್ಕು ಸಲ ಸಿಕ್ಕ ಗೆಲುವಿಗೆ ಪೂರಕ ಎಂಬುದನ್ನು ಮರೆಯುವಂತಿಲ್ಲ. ಆದರೆ, ಈ ಬಾರಿ ವಿಜಯಮಾಲೆ ಅತ್ತಿತ್ತ ಹೊಯ್ದಾಡುತ್ತಿದ್ದಾಳೆ ಎನ್ನುವುದು ಕ್ಷೇತ್ರ ಸಂಚಾರದಲ್ಲಿ ಅನುಭವಕ್ಕೆ ಬರುತ್ತಿದೆ. ಕಳೆದ ಸಲ ಕಾಂಗ್ರೆಸ್ ಸೋತಿದ್ದರೂ ಆ ಚುನಾವಣೆ ಉಸ್ತುವಾರಿ ಹೊತ್ತಿದ್ದ ಸಚಿವ ಶಿವಾನಂದ ಪಾಟೀಲರಿಗೆ ಕ್ಷೇತ್ರದಲ್ಲಿ ಎಲ್ಲೆಲ್ಲಿ ಏನೇನು ಇದೆ ಎನ್ನುವ ಅನುಭವ ಆಗಿದ್ದು, ಪುತ್ರಿ ಸಂಯುಕ್ತ ಪಾಟೀಲ ಕಣದಲ್ಲಿದ್ದಾರೆ. ಯುದ್ಧ ಗೆಲ್ಲಲು ಹೊಸ ಹೊಸ ಅಸ್ತ್ರಗಳನ್ನು ಬಳಸುತ್ತಿದ್ದಾರೆ. ಹಾಲಿ, ಮಾಜಿ ಸಚಿವರು, ಶಾಸಕರು ಒಗ್ಗಟ್ಟಿನ ಮಂತ್ರ ಜಪಿಸಿ, ಅಖಾಡಕ್ಕೆ ಇಳಿದಿದ್ದಾರೆ. ಕಾಂಗ್ರೆಸ್ ಸರ್ಕಾರ ಅನುಷ್ಠಾನಕ್ಕೆ ತಂದಿರುವ ಗ್ಯಾರಂಟಿ ಯೋಜನೆಗಳು ಹಾಗೂ ಎಐಸಿಸಿ ನೀಡಿರುವ ಹೊಸ ಭರವಸೆಗಳು ಕೈ ಹಿಡಿಯುತ್ತವೆ ಎನ್ನುವ ಕಾರಣಕ್ಕೆ ಗ್ಯಾರಂಟಿ ಪ್ರಚಾರಕ್ಕೆ ಅಧಿಕ ಒತ್ತು ನೀಡುತ್ತಿದ್ದಾರೆ.

    ಅಹಿಂದ ಮತದಾರರೇ ನಿರ್ಣಾಯಕರು: ಕ್ಷೇತ್ರದಲ್ಲಿ ಒಟ್ಟು 18,06,183 ಮತದಾರರು ಇದ್ದಾರೆ. ಇದರಲ್ಲಿ 8,95,432 ಪುರುಷರು, 9,10,650 ಮಹಿಳೆಯರು ಹಾಗೂ 101 ಲಿಂಗತ್ವ ಅಲ್ಪಸಂಖ್ಯಾತರು ಇದ್ದಾರೆ. ವೀರಶೈವ ಲಿಂಗಾಯತರು (ಎಲ್ಲ ಒಳಪಂಗಡ ಸೇರಿ) ಟಾಪ್​ನಲ್ಲಿ ಇದ್ದಾರೆ. ನಂತರದಲ್ಲಿ ಎಸ್ಸಿ-ಎಸ್ಟಿ, ಕುರುಬ, ಮುಸ್ಲಿಂ ಅಧಿಕವಾಗಿದ್ದಾರೆ. ಗದ್ದಿಗೌಡರ ವೀರಶೈವ ಲಿಂಗಾಯತ ಗಾಣಿಗ ಸಮಾಜದವರು. ಸಂಯುಕ್ತ ಪಾಟೀಲ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದವರು. ಹೀಗಾಗಿ ಲಿಂಗಾಯತ ಮತ ವಿಭಜನೆ ಆಗಲಿದ್ದು, ದಲಿತ, ಹಿಂದುಳಿದ ಅಲ್ಪಸಂಖ್ಯಾತ ಮತದಾರರೇ ಫಲಿತಾಂಶ ನಿರ್ಧರಿಸಲಿದ್ದಾರೆ.

    ಪ್ರಚಾರದಲ್ಲಿ ಕೈ ಮುಂದೆ : ಸತತ ನಾಲ್ಕು ಸಲ ಸೋತಿರುವ ಕಾಂಗ್ರೆಸ್ ಈ ಬಾರಿ ಜಾತಿ ಸಮೀಕರಣಕ್ಕೆ ಆದ್ಯತೆ ನೀಡಿದೆ. ವೀರಶೈವ ಲಿಂಗಾಯತರಲ್ಲಿ ಪಂಚಮಸಾಲಿ ಮತದಾರರು ಅಧಿಕ. ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಸಹ ಅದೇ ಸಮುದಾಯಕ್ಕೆ ಸೇರಿದ್ದಾರೆ. ಮುಸ್ಲಿಂ ಮತಗಳು ಕಾಂಗ್ರೆಸ್​ಗೆ ಬಂದೇ ಬರುತ್ತವೆ. ಲಿಂಗಾಯತ ಒಳಪಂಗಡಗಳು, ದಲಿತ ಮತ್ತು ಕುರುಬ ಸಮಾಜದ ಮತಗಳ ಕ್ರೋಡೀಕರಣಕ್ಕೆ ತಂತ್ರ ರೂಪಿಸುತ್ತಿದೆ. ಬಿಜೆಪಿ ಮಡಿಲಲ್ಲಿ ಇರುವ ನೇಕಾರರ ಮತಗಳನ್ನು ಸೆಳೆಯಲು ಜವಳಿ ಸಚಿವರೂ ಆಗಿರುವ ಶಿವಾನಂದ ಪಾಟೀಲ ಮುಂದಾಗಿದ್ದಾರೆ. ಆದರೆ, ಲೋಕಸಭೆ ಚುನಾವಣೆಯಲ್ಲಿ ಜಾತಿ ಸಮೀಕರಣ ವರ್ಕೌಟ್ ಆಗಿಲ್ಲ. ಈಗಲೂ ಯುವ ಮತದಾರರ ಬಾಯಲ್ಲಿ ‘ಮತ್ತೊಮ್ಮೆ ಮೋದಿ’ ಉದ್ಘೋಷವೇ ಹೊರಬರುತ್ತಿದೆ. ಹೀಗಾಗಿ ಮತದಾರ ಅಂತಿಮವಾಗಿ ಯಾವ ನಿರ್ಧಾರಕ್ಕೆ ಬರುತ್ತಾನೆ ಎನ್ನುವುದು ನಿಗೂಢವಾಗಿದೆ.ಎರಡು ಪಕ್ಷಗಳಲ್ಲೂ ಸ್ಟಾರ್ ಪ್ರಚಾರಕರೊಂದಿಗೆ ಮತಬೇಟೆ ಜೋರಾಗಿದ್ದು, ಕಾಂಗ್ರೆಸ್ ಪ್ರಚಾರದಲ್ಲಿ ಮುಂದಿದೆ.

    ಎರಡು ಕಡೆಯೂ ಒಳಹೊಡೆತ: ಎರಡು ಕಡೆಯೂ ಒಳಹೊಡೆತದ ಭೀತಿ ಇದೆ. ಮೇಲ್ನೋಟಕ್ಕೆ ಕೆಲವರ ಆರಂಭದ ಮುನಿಸು ಶಮನವಾದಂತೆ ಕಾಣಿಸಿದರೂ ಅದರ ಝುಳ ಮಾತ್ರ ಬೆವರು ತರಿಸುತ್ತಲೇ ಇದೆ. ಯಾರು ಯಾವಾಗ ಹೇಗೆ ಕೈ ಕೊಡುತ್ತಾರೋ ಅಂದಾಜಿಗೆ ಬರದಂತಾಗಿದೆ. ಹೀಗಾಗಿ ಈ ಆಂತರಿಕ ಅಸಮಾಧಾನದ ಭೀತಿ ಯಾರಿಗೆ ಖೆಡ್ಡಾ ತೋಡುತ್ತದೆಯೋ ಎನ್ನುವ ಚರ್ಚೆಗಳು ಇವೆ.

    ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಇದೆ. ನಾಲ್ಕು ಸಲ ಗೆದ್ದರೂ ಸಂಸ ದರು ಕೆಲಸ ಮಾಡಿಲ್ಲ ಎನ್ನುವ ಬೇಸರ ಇದೆ. ಕಾಂಗ್ರೆಸ್ ಗ್ಯಾರಂಟಿಗಳು ಜನರ ಮನೆ-ಮನ ತಲುಪಿವೆ. ಈಗ ಎಐಸಿಸಿ ನೀಡಿರುವ ಭರವಸೆ ಗಳು ಜನರಲ್ಲಿ ವಿಶ್ವಾಸ ಮೂಡಿಸಿವೆ. ಕಾಂಗ್ರೆಸ್ ಹಿರಿಯರು, ಮುಖಂಡರು, ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಗೆಲುವು ಖಚಿತ.

    | ಸಂಯುಕ್ತ ಪಾಟೀಲ ಕಾಂಗ್ರೆಸ್ ಅಭ್ಯರ್ಥಿ

    ಪ್ರಧಾನಿ ನರೇಂದ್ರ ಮೋದಿ ಅಲೆ ಇಲ್ಲಿ ಮಾತ್ರ ಅಲ್ಲ, ದೇಶದೆಲ್ಲೆಡೆ ಇದೆ. 4 ಅವಧಿಯಲ್ಲಿ ನಾನು ಮಾಡಿದ ಅಭಿವೃದ್ಧಿ ಕೆಲಸಗಳು ಕಣ್ಮುಂದಿವೆ. ದೇಶದ ಭದ್ರತೆ, ಅಭಿವೃದ್ಧಿಗೆ ಮೋದಿ ಬೇಕು ಎಂದು ಜನ ನಿರ್ಧರಿಸಿಯಾಗಿದೆ. ಕಾಂಗ್ರೆಸ್ ಸುಳ್ಳು ಆರೋಪ ವರ್ಕೌಟ್ ಆಗಲ್ಲ. ಯಾವ ಜಾತಿ ಸಮೀಕರಣವೂ ನಡೆಯಲ್ಲ. ಬಿಜೆಪಿ ಗೆಲುವು ಶತಃಸಿದ್ಧ.

    | ಪಿ.ಸಿ.ಗದ್ದಿಗೌಡರ ಬಿಜೆಪಿ ಅಭ್ಯರ್ಥಿ

    ಪ್ರಜ್ವಲ್‌ ರೇವಣ್ಣ ವಿಡಿಯೋ ನೋಡಿದ ಹರ್ಷಿಕಾ ಪೂಣಚ್ಚ ಶಾಕ್​ ಕಾಮೆಂಟ್ಸ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts