ಸಿನಿಮಾ

ಸಕಾಲಕ್ಕೆ ಸಿಗದ ಆ್ಯಂಬುಲೆನ್ಸ್​; ಆಟೋದಲ್ಲಿ ಪ್ರಯಾಣಿಸಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಗರ್ಭಿಣಿ

ಚಿತ್ರದುರ್ಗ: ಒಂದೆಡೆ ತಾಲೂಕು ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲು ವೈದ್ಯರಿಲ್ಲ. ಇನ್ನೊಂದೆಡೆ ಜಿಲ್ಲಾಸ್ಪತ್ರೆಗೆ ತೆರಳಲು ಸಕಾಲಕ್ಕೆ ಆಂಬುಲೆನ್ಸ್ ಸಿಗದೆ ಗರ್ಭಿಣಿ ಪರದಾಡಿದ ಮನಕಲುಕುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯಲ್ಲಿ ನಡೆದಿದೆ.

ಮಗುವಿಗೆ ಜನ್ಮ ನೀಡಬೇಕಿದ್ದ ತುಂಬು ಗರ್ಭಿಣಿ ಆಸ್ಪತ್ರೆಯಲ್ಲಿ ಪರದಾಡುತ್ತಿದ್ದರೆ ಅಲ್ಲಿನ ವೈದ್ಯಕೀಯ ಸಿಬ್ಬಂದಿ ಆಕೆಯ ನೆರವಿಗೆ ಬರಲಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಆಟೋದಲ್ಲಿ ಪ್ರಯಾಣ

ಕೊನೆಗೆ ಗರ್ಭಿಣಿ ಆಟೋ ಮಾಡಿಕೊಂಡು ತನ್ನ ತಾಯಿ ಜತೆ 30 ಕಿಲೋ ಮೀಟರ್ ದೂರದ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ತೆರಳಿ ದಾಖಲಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ ತಾಯಿ, ಮಗು ಆರೋಗ್ಯವಾಗಿದ್ದಾರೆ. ಆದರೆ, ಸಕಾಲಕ್ಕೆ ಸ್ಪಂದಿಸದ ಚಳ್ಳಕೆರೆ ಆಸ್ಪತ್ರೆಯ ವೈದ್ಯರ ವಿರುದ್ಧ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.

ತಾಲೂಕಿನ ಕ್ಯಾತಗೊಂಡನಹಳ್ಳಿಯ ಸುಮರಾಣಿಗೆ ಸೋಮವಾರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಾಯಿ ಬೋರಮ್ಮ, ಪತಿ ಪುಟ್ಟಣ್ಣ ಜತೆ ತಮ್ಮೂರಿನಿಂದ 35 ಕಿಲೋ ಮೀಟರ್ ಕ್ರಮಿಸಿ ಈ ಮೊದಲು ತಾವು ಚಿಕಿತ್ಸೆ ಪಡೆಯುತ್ತಿದ್ದ ಚಳ್ಳಕೆರೆಯ ಖಾಸಗಿ ಆಸ್ಪತ್ರೆಗೆ ಆಗಮಿಸಿದ್ದರು.

Pragnant Lady
ತಾಯಿ-ಮಗು

ಸರ್ಕಾರಿ ಹೆರಿಗೆ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯೆ ಕಾರ್ಯನಿರ್ವಹಿಸುತ್ತಿದ್ದ ಖಾಸಗಿ ಆಸ್ಪತ್ರೆಯದು. ಸ್ಕ್ಯಾನಿಂಗ್ ಮಾಡಿಸಿದ ಬಳಿಕ ದಾಖಲಾಗಲು ಸೂಚಿಸಿದ್ದ ವೈದ್ಯರು ಹೆರಿಗೆ ಮಾಡಿಸಲು 30 ಸಾವಿರ ರೂ. ಖರ್ಚಾಗುತ್ತದೆ ಎಂದು ಹೇಳಿದ್ದಾರೆ.

ಸ್ಪಂದಿಸದ ವೈದ್ಯರು

ಹಣ ಇಲ್ಲದ ಕಾರಣ ದಂಪತಿ ತಾಲೂಕು ಆಸ್ಪತ್ರೆಗೆ ತೆರಳಿದಾಗ ಅಲ್ಲಿಯೂ ಅವರಿಗೆ ಸರಿಯಾದ ಸ್ಪಂದನೆ ಸಿಗಲಿಲ್ಲ. ವೈದ್ಯರೊಬ್ಬರು ರಜೆ ಇದ್ದಾರೆಂಬ ಮಾಹಿತಿ ತಿಳಿದು ಚಿತ್ರದುರ್ಗಕ್ಕೆ ತೆರಳಲು ನಿರ್ಧರಿಸಿ 108ಕ್ಕೆ ಕರೆ ಮಾಡಿದರೆ ಆಂಬುಲೆನ್ಸ್ ಕೂಡ ಸಿಗಲಿಲ್ಲ. ಹೀಗಾಗಿ ಆಟೋ ಆಶ್ರಯಿಸುವುದು ಅನಿವಾರ್ಯವಾಯಿತು.

ಜಿಲ್ಲಾಸ್ಪತ್ರೆಗೆ ತೆರಳುತ್ತಿದ್ದಂತೆ ಡಿಎಚ್‌ಒ ರಂಗನಾಥ್ ಮುತುವರ್ಜಿ ವಹಿಸಿ ಆದ್ಯತೆ ಮೇರೆಗೆ ಚಿಕಿತ್ಸೆ ನೀಡಲು ಎಲ್ಲ ಏರ್ಪಾಡು ಮಾಡಿದ್ದರು ಎಂದು ಗರ್ಭಿಣಿಯ ತಾಯಿ ಬೋರಮ್ಮ ತಿಳಿಸಿದ್ದಾರೆ.

ಕಠಿಣ ಕ್ರಮದ ಎಚ್ಚರಿಕೆ

ಈ ಕುರಿತು ಪ್ರತಿಕ್ರಿಯಿಸಿರುವ ಡಿಎಚ್‌ಒ ರಂಗನಾಥ್​ ಗರ್ಭಿಣಿಗೆ ಸೂಕ್ತ ಚಿಕಿತ್ಸೆ ಕೊಡಬೇಕಾಗಿತ್ತು. ಆಟೋದಲ್ಲಿ ಚಳ್ಳಕೆರೆಯಿಂದ ಚಿತ್ರದುರ್ಗಕ್ಕೆ ಬಂದ ವಿಷಯ ಮನಸ್ಸಿಗೆ ಬಹಳ ನೋವು ತರಿಸಿತು.

ಜಿಲ್ಲಾಸ್ಪತ್ರೆಗೆ ಬಂದ ಕೂಡಲೇ ಹೆರಿಗೆಗೆ ವ್ಯವಸ್ಥೆ ಮಾಡಲಾಗಿದೆ. ಇಂತಹ ಅವ್ಯವಸ್ಥೆಗೆ ಕಾರಣರಾದವರಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದು ಡಿಎಚ್‌ಒ ರಂಗನಾಥ್ ತಿಳಿಸಿದ್ದಾರೆ.

Latest Posts

ಲೈಫ್‌ಸ್ಟೈಲ್