ಕೇತಿಕಾಗೆ ಬಿಗ್ ಟಿಕೆಟ್: ಪವನ್ ಕಲ್ಯಾಣ್ ಸಿನಿಮಾದಲ್ಲಿ ಸಿಕ್ಕ ದೊಡ್ಡ ಅವಕಾಶ

ketika sharma
Published on

ಹೈದರಾಬಾದ್: ಟಾಲಿವುಡ್‌ನ ಉದಯೋನ್ಮಖ ನಟಿ ಕೇತಿಕಾ ಶರ್ಮಾ, ಅನಿಲ್ ಪದುರಿ ನಿರ್ದೇಶನದ ‘ರೊಮ್ಯಾಂಟಿಕ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದವರು. ನಂತರ ಸಂತೋಷ್ ಜಗರಲಪುಡಿ ನಿರ್ದೇಶನದ ‘ಲಕ್ಷ್ಯ’ ಹಾಗೂ ಗಿರಿಸಾಯಾ ನಿರ್ದೇಶನದ ‘ರಂಗ ರಂಗ ವೈಭವಾಂಗ’ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದರು. 2021ರಲ್ಲಿ ಚಿತ್ರರಂಗ ಪ್ರವೇಶಿಸಿದ ಕೇತಿಕಾ ಈವರೆಗೆ ಒಟ್ಟು 3 ಸಿನಿಮಾಗಳಲ್ಲಿ ನಟಿಸಿದ್ದು ಇದೀಗ ತೆಲುಗು ಚಿತ್ರರಂಗದ ಸ್ಟಾರ್ ಕಲಾವಿದ ಪವನ್ ಕಲ್ಯಾಣ್ ಜತೆ ‘ಬ್ರೋ’ ಚಿತ್ರದಲ್ಲಿ ಅಭಿನಯಿಸುವ ಅವಕಾಶವನ್ನು ಪಡೆದಿದ್ದಾರೆ.

ಸಮುತಿರಕಣಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ಪವನ್ ಕಲ್ಯಾಣ್ ಹಾಗೂ ಸಾಯಿ ಧರ್ಮ ತೇಜ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ಆ್ಯಕ್ಷನ್ ಡ್ರಾಮಾ ಜಾನರ್‌ನಲ್ಲಿ ಗುರುತಿಸಿಕೊಳ್ಳಲಿರುವ ‘ಬ್ರೋ’ ಕಾಲಿವುಡ್‌ನ ‘ವಿನೋದಯ ಸೀತಮ್’ ರೀಮೇಕ್ ಎನ್ನಲಾಗಿದೆ. ಇತ್ತೀಚೆಗಷ್ಟೇ ಇದರ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಜುಲೈ 28ರಂದು ಚಿತ್ರ ಬಿಡುಗಡೆಯಾಗಲಿದೆ. ಪವನ್ ಕಲ್ಯಾಣ್ ಕೃಷ್ಣ ನಿರ್ದೇಶನದ ‘ಹರಿ ಹರ ವೀರ ಮಲ್ಲು’, ಹರೀಶ್ ಶಂಕರ್ ನಿರ್ದೇಶನದ ’ಉಸ್ತಾದ್ ಭಗತ್ ಸಿಂಗ್’ ಹಾಗೂ ‘ಸಾಹೋ’ ಖ್ಯಾತಿಯ ನಿರ್ದೇಶಕ ಸುಜೀತ್ ಅವರ ‘ಒಜಿ’ ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಳ್ಳಲಿದ್ದಾರೆ.

ಹೀಗೆ ಅನೇಕ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಪವನ್ ಕಲ್ಯಾಣ್ ಜತೆ ನಟಿಸುತ್ತಿರುವ ಕೇತಿಕಾ ವೃತ್ತಿ ಜೀವನದಲ್ಲಿ ‘ಬ್ರೋ’ ಒಂದು ಮಹತ್ವದ ಚಿತ್ರವಾಗಲಿದೆ.

ಬಹುಕೋಟಿ ವೆಚ್ಚದ ‘ಬ್ರೋ’ ಸೆಟ್

‘ಬ್ರೋ’ ಚಿತ್ರದ ಚಿತ್ರೀಕರಣಕ್ಕಾಗಿ ಹೈದ್ರಾಬಾದ್‌ನ ಅನ್ನಪುರ್ಣ ಸ್ಟುಡಿಯೋಸ್‌ನಲ್ಲಿ 7 ಎಕರೆಯಷ್ಟು ಜಾಗದಲ್ಲಿ ಬೃಹತ್ ಹಾಗೂ ಅತ್ಯಂತ ದುಬಾರಿ ಪಬ್ ಸೆಟ್ ನಿರ್ಮಿಸಲಾಗಿದೆ. ತೆಲುಗು ಚಿತ್ರರಂಗದಲ್ಲೇ ಅತ್ಯಂತ ದುಬಾರಿ ಸೆಟ್ ಇದು. ಇಲ್ಲಿ ಒಂದು ಹಾಡು ಹಾಗೂ ಆ್ಯಕ್ಷನ್ ಸೀಕ್ವೆನ್ಸ್ ಚಿತ್ರೀಕರಣ ಮಾಡಲಾಗಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net