More

    ಸಂಪಾದಕೀಯ | ಹೊಸಬರಿಗೆ ವೇದಿಕೆ; ಅಸ್ತಿತ್ವಕ್ಕೆ ಬಂದ 16ನೇ ವಿಧಾನಸಭೆ

    ರಾಜ್ಯದ ಇತಿಹಾಸದಲ್ಲಿ ಸೋಮವಾರ, ಮೇ 22 ಮತ್ತೊಂದು ಪ್ರಮುಖ ದಿನವಾಗಿ ದಾಖಲಾಯಿತು. ರಾಜ್ಯ ವಿಧಾನಸಭೆಯ ಮೂರು ದಿನಗಳ ವಿಶೇಷ ಅಧಿವೇಶನ ಆರಂಭವಾಗುವುದರೊಂದಿಗೆ, ಹದಿನಾರನೇ ವಿಧಾನಸಭೆಯೂ ಅಸ್ತಿತ್ವಕ್ಕೆ ಬಂದಂತಾಯಿತು. ಈ ಅಧಿವೇಶನದಲ್ಲಿ ಮೊದಲ ಎರಡು ದಿನ ನೂತನ ಶಾಸಕರ ಪ್ರಮಾಣವಚನ ನಡೆದರೆ, ಮೂರನೆಯ ದಿನ ಸಭಾಧ್ಯಕ್ಷರ ಆಯ್ಕೆ ನಡೆಯಲಿದೆ. ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಅವರು ಹಂಗಾಮಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಸೋಮವಾರದಂದು 182 ಶಾಸಕರು ಪ್ರಮಾಣವಚನ ಸ್ವೀಕರಿಸಿದರು. ಚುನಾವಣೆ ಘೋಷಣೆಯಾದ ದಿನದಿಂದ ನೀತಿಸಂಹಿತೆ ಜಾರಿಯಾಗಿದ್ದರಿಂದಾಗಿ, ದೈನಂದಿನ ಕೆಲಸಕಾರ್ಯ ಹೊರತುಪಡಿಸಿದಂತೆ ಸರ್ಕಾರದ ಇತರ ಕಾರ್ಯಚಟುವಟಿಕೆಗಳು ನಿಲುಗಡೆಗೆ ಬಂದಿದ್ದವು. ಹೀಗಾಗಿ ಆಡಳಿತಕೇಂದ್ರವಾದ ವಿಧಾನಸೌಧವೂ ಸೇರಿದಂತೆ ಎಲ್ಲೆಡೆ ಒಂದು ಬಗೆಯ ನೀರಸ ವಾತಾವರಣವಿತ್ತು. ಚುನಾವಣಾ ಪ್ರಚಾರದ ಅಬ್ಬರಾರ್ಭಟಗಳು ಮುಗಿದು, ಫಲಿತಾಂಶವೂ ಬಂದು, ನೂತನ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಎಂಟು ಸಂಪುಟ ದರ್ಜೆ ಸಚಿವರ ಪದಗ್ರಹಣವೂ ಆಗಿದೆ. ಮೊದಲ ಸಂಪುಟ ಸಭೆಯಲ್ಲಿ, ಕಾಂಗ್ರೆಸ್​ನ ಪ್ರಣಾಳಿಕೆಯಲ್ಲಿ ಘೋಷಿಸಲಾದ ಐದು ಗ್ಯಾರಂಟಿಗಳ ಜಾರಿಗೆ ಅನುಮೋದನೆ ದೊರಕಿದ್ದು, ಈ ಕುರಿತ ನಿಬಂಧನೆಗಳು ಮರತ್ತು ಷರತ್ತುಗಳು ಮುಂದಿನ ದಿನಗಳಲ್ಲಿ ಹೊರಬೀಳಬೇಕಿದೆ. ಇನ್ನು ಸಂಪುಟ ವಿಸ್ತರಣೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಈ ನಡುವೆ, ಹೊಸ ಶಾಸಕರ ಅಧಿಕೃತ ಕಾರ್ಯಾರಂಭಕ್ಕೆ ಅನುವಾಗುವಂತೆ ವಿಧಾನಸಭೆ ಅಧಿವೇಶನ ಕರೆಯಲಾಗಿದೆ. ಒಟ್ಟಾರೆಯಾಗಿ, ಹೊಸ ಸರ್ಕಾರದ ಕಾರ್ಯಕ್ಕೆ ಚಾಲನೆ ದೊರಕಿದಂತಾಗಿದೆ.

    ಈ ಸಲದ ವಿಶೇಷವೆಂದರೆ, ಮೊದಲ ಬಾರಿಗೆ ಶಾಸಕರಾಗಿ ಆರಿಸಿಬಂದವರ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿರುವುದು. ಎಲ್ಲ ಪಕ್ಷಗಳು ಹಾಗೂ ಪಕ್ಷೇತರರು ಸೇರಿ 60ಕ್ಕಿಂತ ಹೆಚ್ಚು ಪ್ರಥಮ ಬಾರಿಯ ಶಾಸಕರಿದ್ದಾರೆ. ವೈದ್ಯರು, ಇಂಜಿನಿಯರ್, ಎಂಬಿಎ ಪದವೀಧರರು, ಪ್ರಾಧ್ಯಾಪಕರು- ಹೀಗೆ ವೈವಿಧ್ಯಮಯ ಹಿನ್ನೆಲೆಯವರು ಶಾಸನಸಭೆಗೆ ಬಂದಿದ್ದಾರೆ. ರಾಜಕೀಯ ರಂಗದ ಬಗ್ಗೆ ಜನರಿಗಿರುವ ನಕಾರಾತ್ಮಕ ದೃಷ್ಟಿಕೋನ ಹೋಗಿ ಸಕಾರಾತ್ಮಕ ಅಭಿಪ್ರಾಯ ಮೂಡಬೇಕಾದಲ್ಲಿ, ಇತರ ಕ್ಷೇತ್ರಗಳವರೂ ಸಕ್ರಿಯ ರಾಜಕೀಯಕ್ಕೆ ಬರಬೇಕು ಎಂಬ ವಾದದ ಹಿನ್ನೆಲೆಯಲ್ಲಿ ಈ ಬೆಳವಣಿಗೆಯನ್ನು ಗಮನಿಸಬೇಕಾಗುತ್ತದೆ.

    ಮೊದಲ ಬಾರಿಗೆ ಶಾಸಕರಾದವರು ಮುಂದೆ ಪ್ರಬುದ್ಧರಾಗಿ ಬೆಳೆಯಲು ಶಾಸನಸಭೆಯು ಉತ್ತಮ ವೇದಿಕೆಯನ್ನು ಕಲ್ಪಿಸಿಕೊಡುತ್ತದೆ. ವಿವಿಧ ರಾಜ್ಯಗಳ ಶಾಸನಸಭೆಗಳು ಮತ್ತು ಸಂಸತ್​ನಲ್ಲಿ ಇಂಥ ಎಷ್ಟೋ ನಿದರ್ಶನಗಳಿವೆ. ಆ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳುವ ವಿವೇಚನೆಯನ್ನು ಇವರು ಪ್ರದರ್ಶಿಸಬೇಕಷ್ಟೆ. ನಮ್ಮಲ್ಲಿ ಪಕ್ಷ ರಾಜಕೀಯ ವ್ಯವಸ್ಥೆ ಇರುವುದರಿಂದಾಗಿ, ಬಹುತೇಕರು ಯಾವುದಾದರೊಂದು ರಾಜಕೀಯ ಪಕ್ಷವನ್ನು ಪ್ರತಿನಿಧಿಸುವುದು ಅನಿವಾರ್ಯ. ಆದರೆ ಒಟ್ಟಾರೆಯಾಗಿ ಶಾಸಕತ್ವದ ಹೊಣೆ-ಕರ್ತವ್ಯಗಳ ನಿರ್ವಹಣೆಯಲ್ಲಿ ಮತ್ತು ಶಾಸನಸಭೆಯೊಳಗಡೆ ಪಕ್ಷದಾಚೆಗೂ ವ್ಯಕ್ತಿತ್ವ ಬೆಳೆಸಿಕೊಳ್ಳುವ ಮನೋಭಾವವನ್ನು ಪ್ರದರ್ಶಿಸಿದಲ್ಲಿ, ಉತ್ತಮ ಜನಪ್ರತಿನಿಧಿಗಳಾಗಿ ರೂಪುಗೊಳ್ಳಬಹುದು. ಇಂದಿನ ಸಂಕೀರ್ಣ ಸಾಮಾಜಿಕ, ಆರ್ಥಿಕ ಸನ್ನಿವೇಶವನ್ನು ಸೂಕ್ಷ್ಮವಾಗಿ ಅರ್ಥೈಸಿಕೊಂಡು, ಅದಕ್ಕೆ ತಕ್ಕಂತೆ ಸಂವೇದನಾಶಿಲವಾಗಿ ವರ್ತಿಸುವುದು ಅಪೇಕ್ಷಣೀಯ. ರಾಜಕೀಯ ರಂಗದ ಬಗ್ಗೆ ಜನರ ಮನೋಭಾವ ಬದಲಿಸುವ ನಿಟ್ಟಿನಲ್ಲಿ, ಇನ್ನಷ್ಟು ಜನರು, ಅದರಲ್ಲೂ ವಿಶೇಷವಾಗಿ ಯುವಕರು ಈ ಕ್ಷೇತ್ರದತ್ತ ಆಸಕ್ತಿ ತಾಳುವ ರೀತಿಯಲ್ಲಿ ಇವರು ಕಾರ್ಯನಿರ್ವಹಿಸಿದರೆ, ಅದು ಸಾರ್ಥಕ ಶಾಸಕತ್ವವಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts