ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮತ್ತೊಂದು ನಿರ್ಧಾರ; ಇದು ಎಲ್ಲ ಕಡೆಗೂ ಅನ್ವಯ ಎಂದ ಸಿಎಂ

Siddaramaiah
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ನನಗೆ ಝೀರೋ ಟ್ರಾಫಿಕ್ ಬೇಡ ಎಂದು ಘೋಷಣೆ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅದರ ಬೆನ್ನಿಗೇ ಇನ್ನೊಂದು ನಿರ್ಧಾರವನ್ನೂ ಪ್ರಕಟಿಸಿದ್ದಾರೆ. ಮಾತ್ರವಲ್ಲ, ಇದು ಎಲ್ಲೆಡೆಗೂ ಅನ್ವಯ ಎಂದೂ ಅವರು ಹೇಳಿದ್ದಾರೆ.

ನನ್ನ ವಾಹನ ಸಂಚಾರಕ್ಕೆ ನೀಡಲಾಗಿರುವ ಝೀರೋ ಟ್ರಾಫಿಕ್ ಸೌಲಭ್ಯ ಹಿಂದಕ್ಕೆ ಪಡೆಯುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದೇನೆ. ಝೀರೋ ಟ್ರಾಪಿಕ್‌ನಿಂದಾಗಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ಅನನುಕೂಲ ಆಗುತ್ತಿರುವುದನ್ನು ಕಂಡು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಎರಡು ಗಂಟೆಗಳ ಹಿಂದೆ ಸಿದ್ದರಾಮಯ್ಯ ಹೇಳಿದ್ದರು.

ಇದೀಗ ಅವರು ಅಂಥದ್ದೇ ಇನ್ನೊಂದು ನಿರ್ಧಾರವನ್ನು ಪ್ರಕಟಿಸಿದ್ದಾರೆ. ಅಂದರೆ, ನಾಳೆಯಿಂದ ಸಾರ್ವಜನಿಕರಿಂದ ಗೌರವ-ಸನ್ಮಾನದ ರೂಪದಲ್ಲಿ ಹಾರ-ತುರಾಯಿ, ಶಾಲು-ಶಲ್ಯಗಳನ್ನು ಸ್ವೀಕರಿಸದೆ ಇರಲು ನಿರ್ಧರಿಸಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಮಾತ್ರವಲ್ಲ, ಇದು ನನ್ನ ಮನೆ-ಕಚೇರಿ ಮತ್ತು ಸಾರ್ವಜನಿಕ ಸಮಾರಂಭಗಳಿಗೂ ಅನ್ವಯವಾಗುತ್ತದೆ ಎಂದಿದ್ದಾರೆ. ಪ್ರೀತಿ-ಗೌರವವನ್ನು ಕಾಣಿಕೆಗಳ ಮೂಲಕವೇ ಸಲ್ಲಿಸಬೇಕೆನ್ನುವವರು ಪುಸ್ತಕಗಳನ್ನು ನೀಡಬಹುದು. ನಿಮ್ಮೆಲ್ಲರ ಪ್ರೀತಿ-ಅಭಿಮಾನ ಸದಾ ನನ್ನ ಮೇಲಿರಲಿ ಎಂದೂ ಸಿಎಂ ಹೇಳಿದ್ದಾರೆ.

ಈ ಹಿಂದೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮಾತನ್ನು ಹೇಳಿದ್ದರು. ಹಾರ-ಶಾಲು ಕೊಡುವವರು, ಕೊಡಲೇಬೇಕು ಎಂದುಕೊಂಡವರು ಅದರ ಬದಲು ಪುಸ್ತಕ ಕೊಡಿ ಎಂದು ಹೇಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net