

ನವದೆಹಲಿ: ಹೊಸ ವರ್ಷ ಬಂತೆಂದರೆ ಬಹುತೇಕ ಮಂದಿ ನಿರ್ಣಯಗಳನ್ನು ಕೈಗೊಂಡು, ಈ ವರ್ಷ ನಾನು ಹಾಗಾಗಬೇಕು, ಹೀಗಾಗಬೇಕು ಎಂದು ಸಂಕಲ್ಪ ಮಾಡಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ನಾನು ಜೀವನದಲ್ಲಿ ಏನೇನಾಗಬೇಕು ಎಂಬ ಗೋಲು ಹಾಕಿಕೊಂಡು ಅದನ್ನು ತನ್ನ ಮೊಬೈಲ್ಫೋನ್ನಲ್ಲಿ ಫೀಡ್ ಮಾಡಿಕೊಂಡಿದ್ದ. ಆದರೆ ಆತನ ಗೋಲುಗಳೆಲ್ಲ ಬಟಾಬಯಲಾಗಿವೆ.
ಹೌದು.. ಮೊಬೈಲ್ಫೋನ್ ಕಳೆದುಹೋದ ಪರಿಣಾಮವಾಗಿ ಈತನ ಗೋಲುಗಳು ಜಗಜ್ಜಾಹೀರಾಗಿವೆ. ಅದರಲ್ಲಿ ಕೆಲವು ತಮಾಷೆ ಅನಿಸುವಂಥ ವಿಚಿತ್ರ ಗೋಲುಗಳು ಕೂಡ ಇವೆ ಎಂಬುದೇ ಗಮನಾರ್ಹ. ಶಿಯಾ ಸೆಡ್ಗ್ಮನ್ ಎಂಬಾತನಿಗೆ ಆ ಮೊಬೈಲ್ಫೋನ್ ಸಿಕ್ಕಿದ್ದು, ಈತ ಅದರಲ್ಲಿ ಫೀಡ್ ಆಗಿರುವ ಗೋಲುಗಳನ್ನು ತನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ.
ಆಸ್ಟ್ರೇಲಿಯಾದ ಪೆರಿಶರ್ ವ್ಯಾಲಿಯ ಪೆರಿಶರ್ ಸ್ಕಿ ರೆಸಾರ್ಟ್ಗೆ ಸ್ಕಿಯಿಂಗ್ಗೆ ಬಂದಿದ್ದ ವ್ಯಕ್ತಿಯೊಬ್ಬ ತನ್ನ ಮೊಬೈಲ್ಫೋನ್ ಕಳೆದುಕೊಂಡಿದ್ದ. ಅದು ಶಿಯಾಗೆ ಸಿಕ್ಕಿದ್ದು, ಆತ ಅದನ್ನು ಎತ್ತಿಕೊಂಡು ನೋಡಿದಾಗ ಲಾಕ್ಸ್ಕ್ರೀನ್ನಲ್ಲೇ ಆ ವ್ಯಕ್ತಿ ಫೀಡ್ ಮಾಡಿಕೊಂಡಿದ್ದ ಗೋಲುಗಳು ಕಾಣಿಸಿವೆ. ಜೀವನದ ಗೋಲುಗಳು ಅಂತ ಆತ 8 ಸಂಗತಿಗಳನ್ನು ಅಲ್ಲಿ ಫೀಡ್ ಮಾಡಿಟ್ಟುಕೊಂಡಿದ್ದ.
ಈ ಮೊಬೈಲ್ಫೋನ್ನ ಲಾಕ್ಸ್ಕ್ರೀನ್ ತನ್ನ ಫೇಸ್ಬುಕ್ ಗ್ರೂಪ್ವೊಂದರಲ್ಲಿ ಹಂಚಿಕೊಂಡಿದ್ದ ಶಿಯಾ, ಬಳಿಕ ಅದನ್ನು ರೆಸಾರ್ಟ್ ರಿಸೆಪ್ಷನ್ನಲ್ಲಿ ನೀಡಿದ್ದ. ಬಳಿಕ ಅದು ಸಂಬಂಧಪಟ್ಟವರಿಗೆ ತಲುಪಿದೆ ಎಂದು ರೆಸಾರ್ಟ್ನವರು ಹೇಳಿದ್ದಾಗಿಯೂ ಆತ ಮಾಹಿತಿ ಹಂಚಿಕೊಂಡಿದ್ದ.
ನಿಕೋಟಿನ್ ಬಿಡಬೇಕು, ಬ್ಯಾಂಕ್ ಅಕೌಂಟ್ನಲ್ಲಿ 25 ಸಾವಿರ ಡಾಲರ್ ಇರಬೇಕು, ಮೂವರು ಯುವತಿಯರೊಂದಿಗೆ ಏಕಕಾಲದಲ್ಲಿ ಡೇಟಿಂಗ್ ಮಾಡಬೇಕು, ಬಲಿಷ್ಠನಾಗಬೇಕು, ಮೋಟರ್ಬೈಕ್ ಹೊಂದಬೇಕು ಹಾಗೂ ಮೂರು ತಿಂಗಳು ಕಟಿಂಗ್ ಮಾಡಿಕೊಳ್ಳಬಾರದು ಎಂಬುದು ಆತನ ಜೀವನದ 8 ಗೋಲುಗಳಲ್ಲಿ ಪ್ರಮುಖವಾದವು. ಇದನ್ನೇ ಉದಾಹರಣೆ ಆಗಿಸಿಕೊಂಡ ರೆಸಾರ್ಟ್ನವರು ಸ್ಕಿಯಿಂಗ್ ವೇಳೆ ಸ್ಲೋಪ್ನಲ್ಲಿ ನಿಮ್ಮ ವಸ್ತುಗಳ ಕುರಿತು ಎಚ್ಚರಿಕೆಯಿಂದಿರಿ ಎಂಬ ಸಂದೇಶವನ್ನು ಕೂಡ ಸಾರಿದ್ದಾರೆ.