

ಕೀರ್ತಿನಾರಾಯಣ ಸಿ. ಬೆಂಗಳೂರು: ಸಾಲದ ಕಂತು ಪಾವತಿಸಲಾಗದೆ ಜಪ್ತಿಯಾಗುವ ಖಾಸಗಿ ಬಸ್ಗಳಿಗೆ ಬೇರೊಂದು ನಂಬರ್ ಪ್ಲೇಟ್ ಹಾಗೂ ಚಾಸ್ಸಿ ನಂಬರ್ ಅಳವಡಿಸಿ, ಸಂಚರಿಸುತ್ತಿರುವ ಅಪಾಯಕಾರಿ ವಿಚಾರ ಬೆಳಕಿಗೆ ಬಂದಿದೆ. ಕೆಲ ಬ್ಯಾಂಕ್ ಹಾಗೂ ಫೈನಾನ್ಸ್ ಕಂಪನಿಗಳ ಕಳ್ಳಾಟದಿಂದಾಗಿ ಸರ್ಕಾರದ ಖಜಾನೆಗೆ ಸೇರಬೇಕಾದ ಕೋಟ್ಯಂತರ ರೂಪಾಯಿ ತೆರಿಗೆ ವಂಚನೆಯಾಗುವುದರ ಜತೆಗೆ ಜನರ ಜೀವಕ್ಕೂ ಕುತ್ತು ತಂದಿದೆ.
ನಂಬರ್ ಪ್ಲೇಟ್ ಬದಲಾಯಿಸಿ ಸಂಚರಿಸುವುದು ಕಾನೂನುಬಾಹಿರ. ಬ್ಯಾಂಕ್ಗಳು ಅಥವಾ ಹಣಕಾಸು ಸಂಸ್ಥೆಗಳು ವಾಹನಗಳನ್ನು ಜಫ್ತಿ ಮಾಡಿದ ಕೂಡಲೇ ಆರ್ಟಿಒ ಗಮನಕ್ಕೆ ತರಬೇಕು. ವಾಹನ ಮೇಲಿರುವ ಬಾಕಿ ತೆರಿಗೆಯನ್ನು ಪಾವತಿಸಬೇಕು. ಬಾಕಿ ತೆರಿಗೆ ವಸೂಲಿ ಮಾಡಲು ಸಾರಿಗೆ ಇಲಾಖೆ ಕ್ರಮ ಕೈಗೊಳ್ಳಲಿದೆ. | ಎನ್.ಶಿವಕುಮಾರ್ ಆಯುಕ್ತರು, ಸಾರಿಗೆ ಇಲಾಖೆ
ಸೀಜ್ ಮಾಡಿದ ಬಸ್ಗಳನ್ನು ಫೈನಾನ್ಸ್ ಕಂಪನಿಗಳು ಮಧ್ಯವರ್ತಿಗಳ ಮುಖಾಂತರ ಕಾನೂನು ಬಾಹಿರವಾಗಿ ಬೇರೊಬ್ಬರಿಗೆ ಮಾರಾಟ ಮಾಡುತ್ತವೆ. ಹೀಗೆ ಖರೀದಿಸಿದವರು ತಮ್ಮ ಹಳೇ ವಾಹನದ ನಂಬರ್ ಅಥವಾ ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ಓಡಿಸುತ್ತಾರೆ. ಬಸ್ಗಳ ಅಕ್ರಮ ಓಡಾಟದಿಂದಾಗಿ ಸರ್ಕಾರಕ್ಕೆ ತೆರಿಗೆ ಬರುವುದಿಲ್ಲ. ಒಂದು ವೇಳೆ ಬಸ್ ಅಪಘಾತಕ್ಕೀಡಾದರೆ ಅದರಲ್ಲಿರುವ ಪ್ರಯಾಣಿಕರಿಗೆ ವಿಮೆ ಪರಿಹಾರ ಸೌಲಭ್ಯವೂ ಸಿಗುವುದಿಲ್ಲ. ಆರ್ಟಿಒ ಅಧಿಕಾರಿಗಳ ಪ್ರಕಾರ ರಾಜ್ಯದಲ್ಲಿರುವ ಒಟ್ಟು ಬಸ್ಗಳಲ್ಲಿ ಶೇ.10ರಿಂದ ಶೇ.15 ಬಸ್ಗಳು ತೆರಿಗೆ ವಂಚಿಸಿ, ಸಂಚರಿಸುತ್ತಿವೆ.
ಬೆಂಗಳೂರಿನ ಕುಂಬಳಗೋಡು ಸಮೀಪದ ಗೋಣಿಪುರ ಮತ್ತು ಚುಂಚನಕುಪ್ಪೆ-ತಾವರೆಕೆರೆ ಬಳಿಯ ಪೆದ್ದನಪಾಳ್ಯದ ಯಾರ್ಡ್ಗಳಲ್ಲಿ ನಿಲ್ಲಿಸಿದ್ದ 20 ಬಸ್ಗಳನ್ನು ಗುರುವಾರ (ಮೇ 21) ಆರ್ಟಿಒ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿರುವುದು ಫೈನಾನ್ಸ್ ಸಂಸ್ಥೆಗಳ ಕಳ್ಳಾಟಕ್ಕೆ ಸಿಕ್ಕಿರುವ ಸಾಕ್ಷ್ಯವಾಗಿದೆ. ಇವು ಸಾಲದ ಕಂತು ಪಾವತಿಸದ ಹಿನ್ನೆಲೆಯಲ್ಲಿ ಫೈನಾನ್ಸ್ ಸಂಸ್ಥೆಗಳು ಜಫ್ತಿ ಮಾಡಿರುವ ಬಸ್ಗಳಾಗಿದ್ದು, ಸಾರಿಗೆ ಇಲಾಖೆಗೆ 1.70 ಕೋಟಿ ರೂ. ತೆರಿಗೆ ಪಾವತಿ ಬಾಕಿ ಇದೆ.
ಅಕ್ರಮ ಹೇಗೆ? ಫೈನಾನ್ಸ್ ಸಂಸ್ಥೆಗಳಿಂದ ಕಡಿಮೆ ಬೆಲೆಗೆ ಜಪ್ತಿ ಬಸ್ಗಳನ್ನು ಖರೀದಿಸುವ ಮಾಲೀಕರು ತೆರಿಗೆ ಪಾವತಿ ವಂಚಿಸಲು ತಮ್ಮ ಹಳೇ ವಾಹನದ ನಂಬರ್ ಪ್ಲೇಟ್, ಚಾಸ್ಸಿ ಅಳವಡಿಕೆ ತೆರಿಗೆ ಪಾವತಿಸಿರುವ ವಾಹನದ ನಂಬರ್ ಪ್ಲೇಟ್ ಅಳವಡಿಸಿ 2-3 ವಾಹನಗಳ ಓಡಾಟ ತೆರಿಗೆ ವಂಚಿಸಿರುವ ಬಸ್ಗಳು ಕಣ್ಣಮುಂದೆ ಓಡಾಡುತ್ತಿದ್ದರೂ ಅಧಿಕಾರಿಗಳಿಗೆ ತಿಳಿಯಲ್ಲ ದಾಖಲೆ ಪ್ರಕಾರ 3 ತಿಂಗಳಿಗೊಮ್ಮೆ ತೆರಿಗೆ ಬಾಕಿ ಏರುತ್ತಿರುತ್ತದೆ. ಬಸ್ ಎಲ್ಲಿದೆ ಗೊತ್ತಾಗಲ್ಲ
ಸೀಜ್ ಆಗಲೆಂದೇ ಕಂತು ಕಟ್ಟಲ್ಲ!: 30 ಸೀಟಿನ ಬಸ್ಗೆ 3 ತಿಂಗಳಿಗೆ 1 ಲಕ್ಷ ರೂ. ತೆರಿಗೆ ಪಾವತಿಸಬೇಕು. ವರ್ಷಕ್ಕೆ 4 ಲಕ್ಷ ರೂ. ಪಾವತಿಸಬೇಕು. 5 ವರ್ಷ ತೆರಿಗೆ ಪಾವತಿಸದಿದ್ದರೆ 20 ಲಕ್ಷ ರೂ. ಬಾಕಿಯಾಗುತ್ತದೆ. ಆಗ ವಾಹನ ಮುಟ್ಟುಗೋಲು ಹಾಕಿಕೊಳ್ಳಲಿ ಎಂದು ಕೆಲ ಪ್ರಕರಣಗಳಲ್ಲಿ ಮಾಲೀಕರೇ ಉದ್ದೇಶ ಪೂರ್ವಕವಾಗಿ ಸಾಲದ ಕಂತು ಪಾವತಿಸುವುದಿಲ್ಲ. ಫೈನಾನ್ಸ್ ಸಂಸ್ಥೆ ಜಪ್ತಿ ಮಾಡಿ ತೆಗೆದುಕೊಂಡು ಹೋದ ಬಳಿಕ ಮಾರಾಟ ಮಾಡಿದರೆ ತಾನು ಕೊಟ್ಟಿರುವ ಸಾಲದ ಮೊತ್ತವೂ ವಾಪಸ್ ಬರುವುದಿಲ್ಲ. ಇದೇ ಕಾರಣಕ್ಕೆ ಅಕ್ರಮವಾಗಿ ಮಾರಾಟ ಮಾಡುತ್ತಾರೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಮಾರುವೇಷದಲ್ಲಿ ಖೆಡ್ಡಾ?: ಬಸ್ ಖರೀದಿದಾರನಂತೆ ಮಾರುವೇಷದಲ್ಲಿ ಬ್ಯಾಂಕ್ ಏಜೆನ್ಸಿಯವರನ್ನು ಸಂರ್ಪಸಿದ ಯಶವಂತಪುರ ಆರ್ಟಿಒ ವಿಭಾಗದ ಬ್ರೇಕ್ ಇನ್ಸ್ಪೆಕ್ಟರ್ ಡೀಲ್ ಕುದುರಿಸುವಂತೆ ಮಾತನಾಡಿದ್ದರು. ಇದನ್ನು ನಂಬಿ ಏಜೆನ್ಸಿ ಸಿಬ್ಬಂದಿ ಕುಂಬಳಗೋಡು ಸಮೀಪದ ಗೋಣಿಪುರ ಮತ್ತು ತಾವರೆಕೆರೆ ಬಳಿಯ ಪೆದ್ದನಪಾಳ್ಯದ ಯಾರ್ಡ್ಗಳಲ್ಲಿ ನಿಲ್ಲಿಸಿರುವ ಜಪ್ತಿ ಬಸ್ಗಳ ವಿಷಯ ಬಾಯಿ ಬಿಟ್ಟಿದ್ದರು. ಈ ವಿಚಾರವನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಪ್ರತ್ಯೇಕ ತಂಡಗಳನ್ನು ರಚಿಸಿಕೊಂಡ ಬಳಿಕ ಗುರುವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ. 2 ಬಸ್ಗಳ ಮಾರಾಟ ಪ್ರಕ್ರಿಯೆ ಆರಂಭವಾಗಿತ್ತು. ಈಗ 20 ಬಸ್ಗಳನ್ನು ಸುಪರ್ದಿಗೆ ಪಡೆದುಕೊಂಡಿದ್ದಾರೆ. ಯಾರಿಗೂ ಮಾರಾಟ ಮಾಡದೆ ಯಥಾಸ್ಥಿತಿ ಕಾಪಾಡುವಂತೆ ಸಂಬಂಧಪಟ್ಟ ಬ್ಯಾಂಕ್ಗಳಿಗೆ ಆರ್ಟಿಒ ಇ ಮೇಲ್ ಮುಖಾಂತರ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರಲ್ಲಿ ಚೇಸ್, ಬೆಳಗಾವಿಯಲ್ಲಿ ಸೀಜ್!: ಬ್ಯಾಂಕ್ ಜಪ್ತಿ ಮಾಡಿದ್ದ ಬಸ್ಸನ್ನು ಖರೀದಿಸಿ ಮರುವಿನ್ಯಾಸಗೊಳಿಸಿದ್ದಲ್ಲದೆ ನಕಲಿ ನಂಬರ್ ಪ್ಲೇಟ್ ಅಳವಡಿಸಿ, ಚಾಸ್ಸಿ ನಂಬರ್ ತಿದ್ದಿದ್ದ ಕೇಸನ್ನು 2020 ಜನವರಿಯಲ್ಲೇ ಆರ್ಟಿಒ ಅಧಿಕಾರಿಗಳು ಬಯಲಿಗೆಳೆದಿದ್ದಾರೆ. ಬೆಳಗಾವಿಯಲ್ಲಿ ಜಪ್ತಿ ಮಾಡಿ ಅಲ್ಲಿನ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ಕೂಡ ದಾಖಲಾಗಿದೆ. ರಾಜ್ಯದಲ್ಲಿ ಜಾರಿಯಲ್ಲೇ ಇರದ ಯುಸಿ ಸೀರೀಸ್ನಲ್ಲಿ ನೋಂದಣಿ ಸಂಖ್ಯೆ ಅಳವಡಿಸಿಕೊಂಡು ಓಡಿಸಲಾಗುತ್ತಿತ್ತು. ಹಲವು ದಿನಗಳ ಕಾಲ ಬೆಂಗಳೂರಿನ ಆರ್ಟಿಒ ಅಧಿಕಾರಿಗಳು ನಕಲಿ ನಂಬರ್ನ ಬಸ್ ಓಡಾಟದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಕೊನೆಗೆ ಬೆಳಗಾವಿ ಅಧಿಕಾರಿಗಳಿಗೆ ಮಾಹಿತಿ ರವಾನಿಸಿ ಅಲ್ಲಿ ಬಸ್ ಜಪ್ತಿ ಮಾಡಿದ್ದರು. ಕೆಎ51/ಎಎ-6489 ವಾಹನದ ಮೂಲ ನಂಬರ್ ಪತ್ತೆಯಾಗಿದೆ. ಆದರೆ, ಎಆರ್-06ಎ-1883 ನೋಂದಣಿ ದಾಖಲೆಗಳನ್ನು ಹಾಜರುಪಡಿಸಿದ್ದು, ತನಿಖೆ ಮುಂದುವರಿದಿದೆ.
ಬ್ಯಾಂಕ್ಗಳೇ ನೇರ ಹೊಣೆ: ಪ್ರತಿಷ್ಠಿತ ಬ್ಯಾಂಕ್ಗಳೇ ಈ ಅಕ್ರಮ ನಡೆಸುತ್ತಿವೆ. ಹೀಗಾಗಿ ಬ್ಯಾಂಕು/ಹಣಕಾಸು ಸಂಸ್ಥೆಗಳನ್ನೇ ತೆರಿಗೆ ಪಾವತಿಗೆ ನೇರ ಹೊಣೆಯಾಗಿಸಬೇಕು. ಇದರಿಂದ ಸರ್ಕಾರಕ್ಕೆ ಆಗುವ ತೆರಿಗೆ ನಷ್ಟ ತಡೆಯುವ ಜತೆಗೆ ಕಾನೂನು ಬಾಹಿರ ಚಟುವಟಿಕೆಗಳಿಗೂ ಕಡಿವಾಣ ಹಾಕಬಹುದು. | ಆರ್ಟಿಒ ಅಧಿಕಾರಿಗಳು
ಹೇಗಿರುತ್ತೆ ಸೇಲ್ ಡೀಲ್!: ಜಪ್ತಿ ಮಾಡಿದ ಬಸ್ಗಳನ್ನು ಅನಧಿಕೃತವಾಗಿ ಯಾರ್ಡ್ನಲ್ಲಿ ತಂದು ನಿಲ್ಲಿಸಿಕೊಳ್ಳುವ ಬ್ಯಾಂಕ್/ಫೈನಾನ್ಸ್ ಸಂಸ್ಥೆಗಳು, ತಮ್ಮ ಹೆಸರಿಗೆ ನೋಂದಣಿ ವರ್ಗಾವಣೆ ಮಾಡಿಸಿಕೊಂಡರೆ ತೆರಿಗೆ ಪಾವತಿಸಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಆರ್ಟಿಒ ಗಮನಕ್ಕೆ ತರುವುದೇ ಇಲ್ಲ. ಮಧ್ಯವರ್ತಿಗಳ ಮುಖಾಂತರ ವಾಮಮಾರ್ಗದಲ್ಲಿ ಬೇರೊಬ್ಬರಿಗೆ ಬಸ್ಗಳನ್ನು ಮಾರಾಟ ಮಾಡಿ ಬಂದಷ್ಟು ಹಣ ಉಳಿಸಿಕೊಳ್ಳುತ್ತಾರೆ. 50 ಲಕ್ಷ ರೂ. ಮೌಲ್ಯದ ಬಸ್ಸನ್ನು 5-10 ಲಕ್ಷ ರೂ.ಗೆ ಮಾರಾಟ ಮಾಡಲಾಗುತ್ತದೆ. ಕಾನೂನು ಪ್ರಕಾರ ಇದು ಅಪರಾಧ ಎಂಬ ವಿಚಾರ ಗೊತ್ತಿದ್ದರೂ ಹಣಕಾಸು ಸಂಸ್ಥೆಗಳು ಈ ಕೃತ್ಯ ಎಸಗುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ.
ನಿಯಮ ಏನು ಹೇಳುತ್ತೆ?: ಸಾಲ ಮರುಪಾವತಿ ಮಾಡದಿದ್ದರೆ ಮಾಲೀಕನಿಗೆ ಫೈನಾನ್ಸ್ ಸಂಸ್ಥೆ ನೋಟಿಸ್ ಕೊಟ್ಟು ಬಸ್ ಜಪ್ತಿ ಮಾಡಬೇಕು. ಹೀಗೆ ಜಪ್ತಿ ಮಾಡಿದ ವಾಹನವನ್ನು ಮೂಲ ಮಾಲೀಕನ ಹೆಸರಿನಿಂದ ತಮ್ಮ ಸಂಸ್ಥೆ ಹೆಸರಿಗೆ ವರ್ಗಾವಣೆ ಮಾಡಿಸಿಕೊಳ್ಳಬೇಕು. ಆರ್ಟಿಒ, ಮೂಲ ಮಾಲೀಕನಿಗೆ ನೋಟಿಸ್ ಕೊಡುತ್ತದೆ. ಒಂದು ವೇಳೆ ಆಕ್ಷೇಪಣೆ ಸಲ್ಲಿಕೆಯಾಗದಿದ್ದರೆ ಆರ್ಟಿಒ ನೋಂದಣಿ ಟ್ರಾನ್ಸ್ಫರ್ ಮಾಡುತ್ತದೆ. ಅದಕ್ಕೂ ಮುನ್ನ ವಾಹನದ ಮೇಲೆ ಬಾಕಿ ಉಳಿದಿರುವ ಸಂಪೂರ್ಣ ತೆರಿಗೆಯನ್ನು ಫೈನಾನ್ಸ್ ಸಂಸ್ಥೆಯೇ ಪಾವತಿಸಬೇಕಾಗುತ್ತದೆ.