ನಾವು ಸಹ ಇದನ್ನು ಸಹಿಸಲ್ಲ… ಕ್ಯಾಪ್ಟನ್​ ರೋಹಿತ್ ಶರ್ಮಾ ಪರ ಬ್ಯಾಟ್ ಬೀಸಿದ ಅಭಿಮಾನಿಗಳು

ವಿಜಯವಾಣಿ - 2024-05-20T102202.903
Published on

ಮುಂಬೈ: ಇತ್ತೀಚೆಗಷ್ಟೇ ಐಪಿಎಲ್ 2024ರ ಆವೃತ್ತಿಯಲ್ಲಿ ತಮ್ಮ ಕಡೆಯ ಪಂದ್ಯವನ್ನು ತವರಿನಲ್ಲಿ ಆಡಿದ ಐದು ಬಾರಿ ಚಾಂಪಿಯನ್ಸ್ ತಂಡ ಮುಂಬೈ ಇಂಡಿಯನ್ಸ್, ಕಡೆಗೂ ಅಭಿಮಾನಿಗಳನ್ನು ಸಂತಸದಿಂದ ಮನೆಗೆ ಕಳುಹಿಸುವಲ್ಲಿ ವಿಫಲವಾಯಿತು. ಆದರೆ, ಎಂಐನ ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮಾ ಮಾತ್ರ ಅಬ್ಬರದ ಬ್ಯಾಟಿಂಗ್ ಮೂಲಕ ತನ್ನನ್ನು ಮೊದಲ ಪಂದ್ಯದಿಂದಲೂ ಬೆಂಬಲಿಸಿಕೊಂಡು ಬಂದ ಫ್ಯಾನ್ಸ್​ಗಳನ್ನು ಖುಷಿಪಡಿಸುವಲ್ಲಿ ಸಫಲರಾದರು. ಇನ್ನು ಇದೆಲ್ಲದರ ಮಧ್ಯೆ ನಡೆದ ಒಂದು ಎಡವಟ್ಟಿಗೆ ಇದೀಗ ರೋಹಿತ್ ಅಕ್ಷರಶಃ ಸಿಡಿಮಿಡಿಗೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಕಡೆಯ ಪಂದ್ಯಕ್ಕೂ ಮುನ್ನ ಮುಂಬೈ ಇಂಡಿಯನ್ಸ್​ನ ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮಾ, ಕೆಕೆಆರ್​ ತಂಡದ ಸದಸ್ಯರೊಂದಿಗೆ ಮೈದಾನದಲ್ಲಿ ಮಾತನಾಡುವಾಗ ಹಿಂದಿನಿಂದ ಬಂದ ಕ್ಯಾಮರಾಮನ್ ಅವರ ಖಾಸಗಿ ಮಾತುಕತೆಯ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು. ಇದರಿಂದ ಸಿಡಿಮಿಡಿಗೊಂಡ ರೋಹಿತ್, ತಕ್ಷಣವೇ ಆತನಿಗೆ ಕೈಮುಗಿದು ಮೈಕ್ ಆಫ್ ಮಾಡುವಂತೆ ಮನವಿ ಮಾಡಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಇದೀಗ ಅದೇ ರೀತಿ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಮತ್ತು ಫ್ರಾಂಚೈಸಿಯೊಂದಿಗೆ ರೋಹಿತ್ ಶರ್ಮಾಗೆ ಉತ್ತಮ ಸಂಬಂಧವಿಲ್ಲ ಎಂಬ ವಿಷಯ ಈಗಾಗಲೇ ಎಲ್ಲರಿಗೂ ತಿಳಿದುಬಂದಿದೆ. ಅಂದಿನಿಂದಲೂ ರೋಹಿತ್ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯುವ ಸಾಧ್ಯತೆಗಳು ಹೆಚ್ಚಿವೆ ಎಂದೇ ಹೇಳಲಾಗುತ್ತಿದೆ. ಇನ್ನು ಈ ಮಧ್ಯೆ ಕೋಲ್ಕತ್ತಾ ನೈಟ್ ರೈಡರ್ಸ್‌ನ ಬ್ಯಾಟಿಂಗ್ ಕೋಚ್ ಅಭಿಷೇಕ್ ನಾಯರ್ ಅವರೊಂದಿಗಿನ ರೋಹಿತ್​ ಸಂಭಾಷಣೆ ತುಣುಕನ್ನು ಸ್ಟಾರ್ ಸ್ಪೋರ್ಟ್ಸ್ ರೆಕಾರ್ಡ್ ಮಾಡಿ, ಪ್ರಸಾರ ಮಾಡುವ ಮೂಲಕ ಸೋರಿಕೆ ಮಾಡಿದೆ!

ಈ ವಿಷಯಕ್ಕೆ ಸಿಡಿದೆದ್ದ ರೋಹಿತ್ ಶರ್ಮಾ, ತಮ್ಮ ಖಾಸಗಿ ಸಮಯವನ್ನು ಗೌರವಿಸದೆ, ಈ ರೀತಿ ಉಲ್ಲಂಘನೆ ಎಷ್ಟು ಸರಿ? ಎಂದು ಆರೋಪಿಸಿ ಪ್ರಸಾರ ವಾಹಿನಿಯ ವಿರುದ್ಧ ಕಡೆಗೂ ಧ್ವನಿ ಎತ್ತಿದ್ದಾರೆ. ತಮ್ಮ ಎಕ್ಸ್​ನಲ್ಲಿ (ಈ ಹಿಂದಿನ ಟ್ವಿಟರ್​) ಮುಖಕ್ಕೆ ಹೊಡೆದಂತೆ ತಮ್ಮ ಅಸಮಾಧಾನವನ್ನು ಹೊರಹಾಕಿರುವ ರೋಹಿತ್, “ಕ್ರಿಕೆಟಿಗರ ಜೀವನವು ಎಷ್ಟು ಹಿಂಸಾತ್ಮಕವಾಗುತ್ತಿದೆ ಎಂದರೆ ಕ್ಯಾಮೆರಾಗಳು ಈಗ ನಾವು ನಮ್ಮ ಸ್ನೇಹಿತರು, ಸಹೋದ್ಯೋಗಿಗಳೊಂದಿಗೆ ಪಂದ್ಯದ ಪ್ರ್ಯಾಕ್ಟಿಸ್​ ಅಥವಾ ದಿನಗಳಲ್ಲಿ ಗೌಪ್ಯವಾಗಿ ನಡೆಸುವ ಪ್ರತಿಯೊಂದು ವಿಷಯವನ್ನು ಮತ್ತು ಸಂಭಾಷಣೆಯನ್ನು ರೆಕಾರ್ಡ್ ಮಾಡುತ್ತಿವೆ” ಎಂದಿದ್ದಾರೆ.

“ನನ್ನ ಸಂಭಾಷಣೆಯನ್ನು ರೆಕಾರ್ಡ್ ಮಾಡಬೇಡಿ ಎಂದು ಸ್ಟಾರ್ ಸ್ಪೋರ್ಟ್ಸ್‌ಗೆ ಕೇಳುವ ಮುನ್ನ ಅವರು ಈ ಸೂಕ್ಷ್ಮ ವಿಷಯವನ್ನು ಅರಿತುಕೊಳ್ಳಬೇಕಿತ್ತು. ಅದರ ಬದಲಿಗೆ ನಮ್ಮ ಖಾಸಗಿ ಸಂಭಾಷಣೆಯನ್ನು ಪ್ರಸಾರ ಮಾಡುವ ಮೂಲಕ ಗೌಪ್ಯತೆಯ ಉಲ್ಲಂಘನೆ ಮಾಡಿದೆ. ಆಸಕ್ತಿಕರ ಮತ್ತು ಕುತೂಹಲಕಾರಿ ವಿಷಯ ಮತ್ತು ಹೆಚ್ಚಿನ ಲೈಕ್​ ಪಡೆಯುವುದರ ಹಿಂದೆ ಬಿದ್ದಿರುವ ಕಾರಣ ಹೀಗೆಲ್ಲಾ ಆಗುತ್ತಿದೆ. ಇದರಿಂದ ನಮ್ಮ (ಕ್ರಿಕೆಟಿಗರು) ಮತ್ತು ಅಭಿಮಾನಿಗಳ ನಡುವಿನ ನಂಬಿಕೆಯನ್ನು ಮುರಿಯುತ್ತಿದ್ದೀರಿ” ಎಂದು ತಮ್ಮ ಅಸಮಾಧಾನವನ್ನು ಟ್ವೀಟ್​​ ಮೂಲಕ ಹೊರಹಾಕಿದ್ದರು.

ಇನ್ನು ಸ್ಟಾರ್​ ಸ್ಪೋರ್ಟ್ಸ್​​ ವಿರುದ್ಧ ರೋಹಿತ್​ ಟ್ವೀಟ್ ಮಾಡುತ್ತಿದ್ದಂತೆ ಆ್ಯಕ್ಟಿವ್ ಆದ ಹಿಟ್​ ಮ್ಯಾನ್ ಅಭಿಮಾನಿಗಳು ಮತ್ತು ನೆಟ್ಟಿಗರು, ಅವರ ಪೋಸ್ಟ್​ ರೀ-ಟ್ವೀಟ್ ಮಾಡುವ ಮೂಲಕ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದರು. ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಮಾಡುತ್ತಿದ್ದಂತೆ ಈ ವಿಷಯ ಎಕ್ಸ್​ನಲ್ಲಿ ಟ್ರೆಂಡಿಂಗ್ ಸ್ಥಾನದಲ್ಲಿ ಕಾಣಿಸಿಕೊಂಡಿತು. 'ಇದನ್ನು ನಾವು ಸಹ ಒಪ್ಪುವುದಿಲ್ಲ. ಈ ರೀತಿ ಮಾಡುವುದು ಸರಿಯಲ್ಲ. ಇನ್ನಾದರೂ ಎಚ್ಚೆತ್ತುಕೊಳ್ಳಿ ಸ್ಟಾರ್​​ ಸ್ಪೋರ್ಟ್ಸ್'​ ಎಂದು ಕಮೆಂಟ್ ಮಾಡುವ ಮೂಲಕ ಫ್ಯಾನ್ಸ್ ರೋಹಿತ್ ಪರ ಬ್ಯಾಟ್ ಬೀಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net