

ಕಾರವಾರ: ಭಾರತದ ಅತ್ಯಂತ ಉದ್ದನೆಯ ಸಮುದ್ರ ಸೇತುವೆ ಎನ್ನುವ ಖ್ಯಾತಿಯ ಮುಂಬೈ ಅಟಲ್ ಸೇತುವೆ ವಿಚಾರ ಈಗ ರಾಜ್ಯದಲ್ಲಿ ಚರ್ಚೆಯಲ್ಲಿದೆ. ಸೇತುವೆ ಮುಂಬೈ ಹಾಗೂ ನವಿ ಮುಂಬೈ ಸಂಪರ್ಕಿಸುತ್ತದೆ. ರಾಜ್ಯದ ಮೂವರು ಪ್ರಸಿದ್ಧ ಮಹಿಳಾ ಮಣಿಗಳು ಈ ಬಗ್ಗೆ ಪರ ವಿರೋಧ ಹೇಳಿಕೆ ನೀಡುತ್ತಿದ್ದು, ಈ ಬಗ್ಗೆ ದೇಶಾದ್ಯಂತ ಸುದ್ದಿಯಾಗುತ್ತಿದೆ. ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.
ಬಹುಭಾಷಾ ನಟಿ ರಷ್ಮಿಕಾ ಮಂದಣ್ಣ ಅಟಲ್ ಸೇತುವೆಯ ಬಗ್ಗೆ ಜಾಲತಾಣಗಳಲ್ಲಿ ವಿಡಿಯೋ ಮಾಡಿ ನೀಡಿದ ಹೇಳಿಕೆ ಮಾಜಿ ಶಾಸಕಿ, ಉತ್ತರ ಕನ್ನಡ ಕಾಂಗ್ರೆಸ್ ಎಂಪಿ ಅಭ್ಯರ್ಥಿ ಡಾ.ಅಂಜಲಿ ನಿಂಬಾಳಕರ್ ವಿರೋಧ ವ್ಯಕ್ತಪಡಿಸಿದ್ದರು. ಅಂಜಲಿ ವಿರುದ್ಧ ಮಾಜಿ ಶಾಸಕಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ತಿರುಗಿ ಬಿದ್ದು ಕಟುವಾದ ಹೇಳಿಕೆ ನೀಡಿದ್ದಾರೆ.
ಕೇಂದ್ರ ಸರ್ಕಾರದ ಅಟಲ್ ಸೇತು ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ ರಷ್ಮಿಕಾ ಅವರು ಹಂಚಿಕೊಂಡ ವಿಡಿಯೊ ವ್ಯಾಪಕವಾಗಿ ವೈರಲ್ ಆಗಿದ್ದು, ಅದನ್ನು ಟ್ವೀಟ್ನ ಪ್ರಧಾನಿ ನರೇಂದ್ರ ಮೋದಿ ಅವರು ರೀಟ್ವೀಟ್ ಮಾಡಿದ್ದಾರೆ. ‘ಭಾರತದ ಅತಿ ಉದ್ದನೆಯ ಸಮುದ್ರ ಬ್ರಿಜ್. 22 ಕಿಲೋಮೀಟರ್ ಉದ್ದ ಇದೆ. ಎರಡು ಗಂಟೆಗಳ ಪ್ರಯಾಣ ಈಗ 20 ನಿಮಿಷಗಳಲ್ಲಿ ಮುಗಿಯುತ್ತದೆ. ನಂಬಲೂ ಅಸಾಧ್ಯ. ಕೆಲ ವರ್ಷಗಳ ಹಿಂದೆ ಯಾರೂ ಇದನ್ನು ಊಹಿಸಿಯೂ ಇರಲಿಲ್ಲ’ ಎಂದು ಹೇಳಿದ್ದಾರೆ.
ಭಾರತ ದೊಡ್ಡದಾಗಿ ಕನಸು ಕಾಣಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು. ಆದರೆ, ಏಳೇ ವರ್ಷಗಳಲ್ಲಿ ಈ ದೊಡ್ಡ ಬ್ರಿಡ್ಜ್ ನಿರ್ಮಾಣ ಮಾಡಿದ್ದೇವೆ. ಅಟಲ್ ಸೇತು ಇದು ಕೇವಲ ಸೇತುವೆ ಅಲ್ಲ, ಯುವ ಭಾರತಕ್ಕೆ ಇದು ಗ್ಯಾರಂಟಿ. ಈ ರೀತಿಯ ನೂರು ಅಟಲ್ ಸೇತುವೆ ಸ್ಥಾಪಿಸಬೇಕು ಎಂದರೆ ಅಭಿವೃದ್ಧಿಗೆ ಮತ ಹಾಕಿ’ ಎಂದು ರಶ್ಮಿಕಾ ಹೇಳಿರುವ ವಿಡಿಯೊಕ್ಕೆ ಹಲವರು ಪ್ರಶಂಸೆ ವ್ಯಕ್ತಪಡಿಸಿದರೆ ಇನ್ನು ಕೆಲವರು ಇದು ಬಿಜೆಪಿಯಿಂದ ಹಣ ಪಡೆದುಕೊಂಡು ಮಾಡಿರುವ ಪ್ರಚಾರದ ವಿಡಿಯೊ ಎಂದು ಟೀಕೆ ಮಾಡುತ್ತಿದ್ದಾರೆ.
ಅದಕ್ಕೆ ಕಾಂಗ್ರೆಸ್ ಮುಖಂಡರು ಮುಗಿಬಿದ್ದು, ಇಡಿ ದಾಳಿಗೆ ಹೆದರಿ ರಷ್ಮಿಕಾ ಹೇಳಿಕೆ ನೀಡಿದರೇ ಎಂಬ ಪ್ರಶ್ನೆಗಳನ್ನು ಎತ್ತಿದ್ದಾರೆ. ಆದರೆ, ರಾಜ್ಯಮಟ್ಟದಲ್ಲಿಯೂ ಈ ವಿಚಾರ ಚರ್ಚೆಗೆ ಬಂದಿದೆ.
ಬುಲೆಟ್ ರೈಲಿನ ಬಗ್ಗೆ ಏನಾದರೂ ಹೇಳಲು ಇದ್ಯಾ ಎಂದು ಪ್ರಶ್ನಿಸಿರುವ ಅಂಜಲಿ ನಿಂಬಾಳ್ಕರ್ , ಮುಂಬೈ – ಅಹಮದಾಬಾದ್ ಬುಲೆಟ್ ರೈಲು ಯೋಜನೆ ದುರಂತ. ಬೂಟ್ ನೆಕ್ಕುವುದನ್ನು ನಿಲ್ಲಿಸಿ. ಮೆಗಾಸ್ಟಾರ್ ಮಾಡಲು ಇದು ನಿಮಗೆ ಸಹಾಯ ಮಾಡುವುದಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ ಎಂದು ಡಾ.ಅಂಜಲಿ ನಿಂಬಾಳಕರ್ ಕಿಡಿ ಕಾರಿದ್ದರು.
ಉತ್ತರ ಕನ್ನಡ ಎಂಪಿ ಅಭ್ಯರ್ಥಿ ಕಾಂಗ್ರೆಸ್‌ನ ಅಂಜಲಿ ನಿಂಬಾಳಕರ್ ಅಭಿವೃದ್ಧಿಯ ವಿರೋಧಿ ಎನ್ನುವುದು ಸಾಬೀತಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ ಹೇಳಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಮುಂಬೈನ ಅಟಲ್ ಸೇತುವೆ ಬಗ್ಗೆ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ ಖ್ಯಾತ ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಅಂಜಲಿ ನಿಂಬಾಳಕರ್ ಹರಿಹಾಯ್ದಿದ್ದಾರೆ. ಬೂಟು ನೆಕ್ಕುತ್ತಿದ್ದಾರೆ ಎಂದು ದೂರಿದ್ದಾರೆ. ಬುಲೆಟ್ ಟ್ರೇನ್ ಕತೆ ಏನಾಯಿತು ಎಂದು ಪ್ರಶ್ನಿಸಿದ್ದಾರೆ. ಆದರೆ, ರಶ್ಮಿಕಾ ಹೇಳಿದ ಮಾತುಗಳಲ್ಲಿ ಯಾವ ತಪ್ಪದೆ. ಅವರು ಭಾರತದ ಅಭಿವೃದ್ಧಿಯನ್ನು ಕೊಂಡಾಡಿದ್ದಾರೆ. ಅಟಲ್ ಸೇತುವಿನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಅಭಿವೃದ್ಧಿಗೆ ಮತ ನೀಡುವಂತೆ ಕೋರಿದ್ದಾರೆ. ಸ್ವಾತಂತ್ರ‍್ಯಾನಂತರ ದೇಶವನ್ನು ಅಧೋಗತಿಗೆ ತಳ್ಳಿದ ಕಾಂಗ್ರೆಸ್ ಬಗ್ಗೆ ಅಂಜಲಿಗೆ ಮಮಕಾರ ಇದ್ದರೆ ತಪ್ಪಲ್ಲ. ಆದರೆ, ಅಭಿವೃದ್ಧಿಯನ್ನು ವಿರೋಸುವ ಮನಸ್ಥಿತಿ ದೇಶಕ್ಕೆ ತುಂಬಾ ಅಪಾಯಕಾರಿಯಾದುದು. ಇಂಥಹ ಹೊಣೆಗೇಡಿಗಳೇ ದೇಶದ ಪ್ರಗತಿಗೆ ಅಡ್ಡಿಯಾಗಿದ್ದಾರೆ ಎಂದು ರೂಪಾಲಿ ನಾಯ್ಕ ಕಿಡಿ ಕಾರಿದ್ದಾರೆ.
ಅಂಜಲಿ ನಿಂಬಾಳ್ಕರ್ ನಾಲಿಗೆಯನ್ನು ಹರಿಬಿಡೋದು ಇದೆ ಮೊದಲಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧವೂ ಚುನಾವಣೆ ಸಂದರ್ಭದಲ್ಲಿ ಅಪಹಾಸ್ಯ ಮಾಡಿದ್ದಾರೆ. ಅವರನ್ನು ಅಣಕಿಸಿದ್ದಾರೆ. ಇದರಿಂದ ಅಂಜಲಿ ಅವರ ವ್ಯಕ್ತಿತ್ವದ ಅನಾವರಣವಾಯಿತೇ ಹೊರತೂ ಮೋದಿ ಅವರ ಯೋಗ್ಯತೆ ಏನೂ ಕಡಿಮೆಯಾಗದು. ಅಂಜಲಿ ನಿಂಬಾಳ್ಕರ್ ಅವರೇ ಖಾನಾಪುರಕ್ಕೆ ಬಂದರೆ ನೀವು ಶಾಸಕರಾಗಿದ್ದ ಸಂದರ್ಭದಲ್ಲಿ ಮಾಡಿದ ಅಭಿವೃದ್ಧಿ ಏನಿದೆ. ?ಎಂದು ರೂಪಾಲಿ ನಾಯ್ಕ ಪ್ರಶ್ನಿಸಿದ್ದಾರೆ.