More

    ಬಂಗಾರದ ಅಂಗಡಿಯಲ್ಲಿ ಕದ್ದ ಖತರ್‌ನಾಖ್‌ ಕಳ್ಳರು ಅಂದರ್‌

    ಹೊನ್ನಾವರ: ತಾಲೂಕಿನ ಮಂಕಿ ಗುಳದಕೇರಿಯ ಭವಾನಿ ಕಾಂಪ್ಲೆಕ್ಸ್ ನಲ್ಲಿರುವ ಶ್ರೀ ಕಾಮಾಕ್ಷಿ ಜ್ಯೂವೆಲರ್ ಚಿನ್ನದ ಅಂಗಡಿ ಶಟರ್ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ  ಕದ್ದೊಯ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಎಪ್ರಿಲ್ 29 ರಂದು ತಡರಾತ್ರಿ ಮಂಕಿ ಮಾವಿನಕಟ್ಟಾದ ಅಣ್ಣಪ್ಪ ಪ್ರಭಾಕರ ಶೇಟ್ ಎಂಬುವವರಿಗೆ ಸೇರಿದ ಚಿನ್ನದ ಅಂಗಡಿ ಕಳ್ಳತನವಾಗಿತ್ತು. ಬಲವಾದ  ವಸ್ತುವಿನಿಂದ ಶಟರನ್ನು ಎತ್ತಿ ಅಂಗಡಿ ಒಳನುಗ್ಗಿದ ಕಳ್ಳರು ಕಳ್ಳತನ ನಡೆಸಿದ್ದರು. 296 ಗ್ರಾಂ ತೂಕದ ಅಂದಾಜು 14.55 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 22.50 ಕೆ.ಜಿ ತೂಕದ 11.10 ಲಕ್ಷ ರೂ. ಮೌಲ್ಯದ ಬೆಳ್ಳಿಯ ಆಭರಣ, ವಸ್ತುಗಳನ್ನು ಕದ್ದೊಯ್ದಿದ್ದರು. ಈ ಕುರಿತು ಅಣ್ಣಪ್ಪ ಪ್ರಭಾಕರ ಶೇಟ್ ಮಂಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿ, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದರು. ಖಚಿತ  ಮಾಹಿತಿ ಆಧರಿಸಿ ಏಳು ಜನ ಆರೋಪಿತರನ್ನು ವಶಕ್ಕೆ ಪಡೆದು ವಿಚಾರಿಸಿದ್ದರು. ಈ ಆರೋಪಿತರು ಮಂಕಿ ಪೊಲೀಸ್ ಠಾಣೆಯ 2 ಪ್ರಕರಣ. ಬೈಂದೂರು ಪೊಲೀಸ್ ಠಾಣೆಯ 1 ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ತನಿಖೆ ವೇಳೆ ಪತ್ತೆಯಾಗಿದೆ. ಈ ಆರೋಪಿತರಿಗೆ ದಸ್ತಗಿರಿ ಮಾಡಿ  ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ಆರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿತರಿಂದ 230 ಗ್ರಾಂ ತೂಕದ ಗಟ್ಟಿ ಬಂಗಾರ ಹಾಗೂ ಬಂಗಾರದ ಆಭರಣಗಳು,5 ಕೆ.ಜಿ ಬೆಳ್ಳಿಯ ಆಭರಣಗಳು,ಕೃತ್ಯಕ್ಕೆ ಬಳಸಿದ ಒಂದು ಸ್ಕೂಟರ್, ಆಯುಧಗಳನ್ನು,  ವಸ್ತುಗಳನ್ನು ಜಪ್ತು ಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ ರೂಪಾಯಿ 13,30,050 ಎಂದು ಅಂದಾಜಿಸಲಾಗಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಟಿ. ಜಯಕುಮಾರ, ಭಟ್ಕಳ ಪೊಲೀಸ್ ಉಪಾಧೀಕ್ಷಕ ಮಹೇಶ ಕೆ.ಮಾರ್ಗದರ್ಶನದಲ್ಲಿ,  ಸಿಪಿಐ ಆನಂದ ಒನಕುದ್ರೆ ಭಟ್ಕಳ ಗ್ರಾಮಾಂತರ ವೃತ್ತ ರವರ ನೇತೃತ್ವದಲ್ಲಿ ಎರಡು ಪ್ರತ್ಯೇಕ ತಂಡಗಳನ್ನು ರಚಿಸಿದ್ದರು. ಮಂಕಿ ಪೊಲೀಸ್ ಠಾಣೆಯ ಉಪ-ನಿರೀಕ್ಷಕರುಗಳಾದ  ವಿನೋದಕುಮಾರ ಎಸ್. ಕೆ ಹಾಗೂ  ಶ್ರೀಕಾಂತ ರಾಠೋಡ ಮತ್ತು ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಯವರಾದ ಕಿರಣಕುಮಾರ ರೆಡ್ಡಿ,ರುದ್ರಯ್ಯ ಕಾಡದೇವರ, ಸುಬ್ರಹ್ಮಣ್ಯ ನಾಯ್ಕ, ರಾಜು ಗೌಡ,  ಅಣ್ಣಪ್ಪ ಕೋರಿ, ಸಚೇತ ಆಚಾರಿ,  ಜಾನು ಪಟಗಾರೆ, ವಿವೇಕ ನಾಯ್ಕ, ಚರಣರಾಜ ನಾಯ್ಕ, ಗಣೇಶ ಲಮಾಣಿ ಹಾಗೂ ಭಟ್ಕಳ ನಗರ ಠಾಣೆಯ ಸಿಬ್ಬಂದಿಗಳಾದ ಲೋಕೇಶ ಕತ್ತಿ, ದಿನೇಶ ನಾಯಕ, ಈರಣ್ಣ ಪೂಜಾರಿ, ನಿಂಗನಗೌಡ ಪಾಟೀಲ್ ಜೀಪ್ ಚಾಲಕ ಗಣಪತಿ ನಾಯ್ಕ ರವರು ಆರೋಪಿತರನ್ನು ದಸ್ತಗಿರಿ ಮಾಡಿ 3 ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

    https://www.vijayavani.net/student-killed-by-lightning

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts