

ಬೆಂಗಳೂರು: ನಿನ್ನೆ (ಮೇ.18) ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸಿಎಸ್ಕೆ ವಿರುದ್ಧದ ನಾಕೌಟ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಅಸಾಧ್ಯವಾದುದನ್ನು ಸಾಧಿಸಿ ತೋರಿಸಿತು. ಮೊದಲ 8 ಪಂದ್ಯಗಳಲ್ಲಿ 7 ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದ್ದ ಆರ್ಸಿಬಿ ಸತತ ಐದು ಗೆಲುವಿನ ಮೂಲಕ ಲೀಗ್ನಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡಿತು. ಈ ಬಾರಿಯೂ ಕಪ್ ನಮ್ಮದಲ್ಲ ಎಂದು ಬೇಸರಕ್ಕೊಳಗಾಗಿದ್ದ ಆರ್ಸಿಬಿ ಫ್ಯಾನ್ಸ್ಗಳಿಗೆ ಇದೀಗ ಸಿಎಸ್ಕೆ ವಿರುದ್ಧದ ರೋಚಕ ಗೆಲುವು ಟ್ರೋಫಿ ಕನಸನ್ನು ಇನ್ನೂ ಜೀವಂತವಾಗಿರಿಸಿದೆ.
ಒಂದೆಡೆ ಪ್ಲೇಆಫ್ಗೆ ಭರ್ಜರಿ ಗೆಲುವಿನ ಮೂಲಕ ರಾಯಲ್ ಎಂಟ್ರಿ ಕೊಡಲು ಆರ್ಸಿಬಿ ಸಜ್ಜಾಗುತ್ತಿದ್ದರೆ, ಮತ್ತೊಂದೆಡೆ ಹೀನಾಯ ಸೋಲನ್ನು ಅನುಭವಿಸಿದ ಸಿಎಸ್ಕೆ ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋತಿದ್ದಕ್ಕೆ ತಮ್ಮ ತಂಡದಲ್ಲಿ ಆದ ಬದಲಾವಣೆಗಳು ಮತ್ತು ಆಟಗಾರರ ವೈಫಲ್ಯವೇ ಪ್ರಮುಖ ಕಾರಣ ಎಂಬುದನ್ನು ಎತ್ತಿಹಿಡಿದಿದ್ದಾರೆ.
ಪಂದ್ಯ ಮುಗಿದ ಬಳಿಕ ಮಾತನಾಡಿದ ರುತುರಾಜ್, "ಇಂದಿನ ಪಿಚ್ ಉತ್ತಮ ವಿಕೆಟ್ಗೆ ಸೀಮಿತವಾಗಿತ್ತು. ಮುಖ್ಯವಾಗಿ ಸ್ಪಿನ್ನರ್‌ಗಳಿಗೆ, ಅದು ಸ್ವಲ್ಪಮಟ್ಟಿಗೆ ತಿರುಗುತ್ತಿತ್ತು ಮತ್ತು ಹಿಡಿತದಲ್ಲಿತ್ತು. ಚೇಸ್ ಬಗ್ಗೆ ಸಾಕಷ್ಟು ಸಂತೋಷವಿದೆ. ಈ ಸೀಸಸ್ನ ಒಟ್ಟುಗೂಡಿಸುವುದಾದರೆ, 14ರಲ್ಲಿ ಏಳು ಪಂದ್ಯಗಳೊಂದಿಗೆ ಸಾಕಷ್ಟು ಸಂತೋಷ ಕಂಡಿದ್ದೇವೆ. ತಂಡದಲ್ಲಿ ಡಿವಾನ್ ಕಾನ್ವೆ ಅಲಭ್ಯವಾಗಿದ್ದು ನಮಗೆ ದೊಡ್ಡ ಪರಿಣಾಮ ಬೀರಿತು ಎಂದರು.
"ಮೊದಲ ಪಂದ್ಯದಿಂದಲೇ ನಾವು ಸಾಕಷ್ಟು ವ್ಯತ್ಯಾಸಗಳನ್ನು ಕಂಡೆವು. ಮತೀಶಾ ಪತಿರಾನಾ ಗಾಯಗೊಂಡಿದ್ದು, ಮುಸ್ತುಫಿಜರ್, ಕಾನ್ವೆ ಇಲ್ಲದೆ ಹೋಗಿದ್ದು, ತಂಡವನ್ನು ಸಮತೋಲನಗೊಳಿಸುವುದು ಬಹಳ ಕಷ್ಟ ಎನ್ನುವಂತೆ ಮಾಡಿತು. ನನಗೆ ವೈಯಕ್ತಿಕ ಮೈಲಿಗಲ್ಲುಗಳು ಹೆಚ್ಚು ಮುಖ್ಯವಲ್ಲ, ನಾವು ಗೆಲ್ಲಲು ಸಾಧ್ಯವಾಗಲಿಲ್ಲ ಎಂಬ ಬೇಸರ ಖಂಡಿತ ಇದೆ. ಆದ್ದರಿಂದ ವೈಯಕ್ತಿಕವಾಗಿ ನಾನು ಕೂಡ ಸ್ವಲ್ಪ ನಿರಾಶೆಗೊಂಡಿದ್ದೇನೆ" ಎಂದು ರುತುರಾಜ್ ಗಾಯಕ್ವಾಡ್ ಹೇಳಿದ್ದಾರೆ,(ಏಜೆನ್ಸೀಸ್).