ಮುಂಬೈ: ಡಾ.ಬಾಬಾಸಾಹೇಬ್ ಅಂಬೇಡ್ಕರ್, ಛತ್ರಪತಿ ಶಾಹು ಮಹಾರಾಜ್, ಜ್ಯೋತಿಬಾ ಫುಲೆ ಅವರ ಜನ್ಮ ಜಯಂತಿ ಕಾರ್ಯಕ್ರಮವನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳ ಗುಂಪೊಂದು ಮೊಟ್ಟೆ ಹಾಗೂ ಕಿತ್ತಳೆ ಸಿಪ್ಪೆ ಎಸೆದು ವಿಕೃತಿ ಮೆರೆದಿರುವ ಘಟನೆ ಮಹಾರಾಷ್ಟ್ರದ ನವಿಮುಂಬೈನ ಪನ್ವೇಲ್ ಪ್ರದೇಶದ ಕೊಂಗಾವ್‌ನಲ್ಲಿ ನಡೆದಿದೆ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅರೋಪಿಗಳಿಗೆ ಬಲೆ ಬೀಸಿದ್ದಾರೆ. ಇತ್ತ ಘಟನೆ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ: ಎಸ್ಆರ್ಎಚ್ ವಿರುದ್ಧ 25ರನ್ಗಳ ಸೋಲು; ಆರ್ಸಿಬಿ ನಾಯಕ ಫಾಫ್ ನೀಡಿದ ಕಾರಣ ಹೀಗಿದೆ
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಪನ್ವೇಲ್ ಪ್ರದೇಶದ ಕೊಂಗಾವ್‌ನಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್, ಛತ್ರಪತಿ ಶಾಹು ಮಹಾರಾಜ್, ಜ್ಯೋತಿಬಾ ಫುಲೆ ಅವರ ಜನ್ಮ ಜಯಂತಿಯನ್ನು ಆಚರಿಸಲಾಗುತ್ತಿತ್ತು. ಈ ವೇಳೆ ಕೆಲವು ದುಷ್ಕರ್ಮಿಗಳು ಮೊಟ್ಟೆ, ಕಿತ್ತಳೆ ಸಿಪ್ಪೆಗಳನ್ನು ಎಸೆದು ಪರಾರಿಯಾಗಿದ್ದಾರೆ.
ಯಾವ ಕಾರಣಕ್ಕಾಗಿ ಈ ರೀತಿ ಮಾಡಲಾಯಿತು ಎಂದು ತಿಳಿದು ಬಂದಿಲ್ಲ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 295 (ಎ), ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.