ಸಂಭಾವ್ಯ ಕೇಂದ್ರ ಸಚಿವರ ಪಟ್ಟಿಯಲ್ಲಿ ಸಂಸದ ನಾರಾಯಣಸ್ವಾಮಿ; ದೆಹಲಿಗೆ ಹೊರಟಾಗ ಏನಂದ್ರು?

ಕೇಂದ್ರದ ಸಂಭಾವ್ಯ ಸಚಿವರ ಪಟ್ಟಿಯಲ್ಲಿ ನಾರಾಯಣಸ್ವಾಮಿ - youtube
Published on

ಬೆಂಗಳೂರು: ಕೇಂದ್ರ ಸಚಿವ ಸಂಪುಟ ವಿಸ್ತರಣೆ ವಿಚಾರ ಚರ್ಚೆ ಆಗುತ್ತಿರುವ ಬೆನ್ನಲ್ಲೇ ಚಿತ್ರದುರ್ಗ ಸಂಸದ ಎ. ನಾರಾಯಣಸ್ವಾಮಿ ಕುಟುಂಬಸಮೇತರಾಗಿ ದೆಹಲಿಗೆ ಹೊರಟಿದ್ದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ. ಅವರು ಸಚಿವರಾಗಲಿದ್ದಾರೆಯೇ ಎಂಬ ಪ್ರಶ್ನೆಗಳೂ ಮೂಡಿದ್ದು, ಅವುಗಳಿಗೆ ಸ್ವತಃ ನಾರಾಯಣಸ್ವಾಮಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.

ದೆಹಲಿಗೆ ತೆರಳುವ ಮುನ್ನ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದರು. ನಾನು ಎರಡು ಸ್ಟ್ಯಾಂಡಿಂಗ್​ ಕಮಿಟಿಯಲ್ಲಿ ಇದ್ದೇನೆ, ನಾಳೆ ಇದರ ಸಭೆ ಇದೆ, ಆ ಸಭೆ ನಂತರ ಹಿಮಾಲಯ ಬೆಟ್ಟದಲ್ಲಿ ಹಿಮ ಬೀಳುತ್ತಿರುವ ಬಗ್ಗೆ ಅಧ್ಯಯನ ಮಾಡಲು ಟೂರ್ ಹಾಕಿದ್ದಾರೆ ಎಂದ ಅವರು, ಎಲ್ಲಿಗೂ ಕರೆದುಕೊಂಡು ಹೋಗುವುದಿಲ್ಲ ಎಂದು ಕುಟುಂಬಸ್ಥರು ಹೇಳುತ್ತಿದ್ದುದರಿಂದ ಅವರನ್ನೂ ಕರೆದುಕೊಂಡು ಹೋಗುತ್ತಿದ್ದೇನೆ ಎಂದರು.

ಇನ್ನು ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಅವರು, ನಾಳೆ ಸಚಿವ ಸಂಪುಟ ವಿಸ್ತರಣೆ ಇದೆ, ಯಾರ್ಯಾರು ರಾಜ್ಯದಿಂದ ಸಚಿವರಾಗುತ್ತಾರೆ ಅಂತ ಗೊತ್ತಿಲ್ಲ. ಸಚಿವ ಸ್ಥಾನ‌ ನೀಡುವ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ ಹೊರತು ನನಗೆ ಮಾಹಿತಿ ಬಂದಿಲ್ಲ. ನಾನು ಕಿರಿಯ ಸಂಸದ. ಶಾಸಕನಾಗಿದ್ದೇನೆ, ಮಂತ್ರಿಯೂ ಆಗಿದ್ದೇನೆ, ಪಕ್ಷದಲ್ಲಿ ದುಡಿದಿದ್ದೇನೆ, ನಾನು ಯಾವತ್ತೂ ಹುದ್ದೆಗಳಿಗೆ ಆಸೆ ಪಟ್ಟವನಲ್ಲ, ಪಡೋದು ಇಲ್ಲ ಎಂದ ಅವರು, ಏನೇ ಜಬಾಬ್ದಾರಿ ಕೊಟ್ಟರೂ ನಿರ್ವಹಿಸುತ್ತೇನೆ, ಪಕ್ಷದ ಸೂಚನೆಗಳನ್ನ ಪಾಲಿಸುತ್ತೇನೆ ಎಂದರು.

ನಾನು ಸಚಿವ ಸ್ಥಾನದ ನಿರೀಕ್ಷೆಯಲ್ಲಿಲ್ಲ. ಆದರೆ ಸಚಿವ ಸ್ಥಾನ ಕೊಟ್ಟರೆ ಅದನ್ನು ನಿಭಾಯಿಸುವ ಶಕ್ತಿ ನನ್ನಲ್ಲಿದೆ ಎನ್ನುತ್ತ ಮೇಲಿಂದ ಮೇಲೆ ಬರುತ್ತಿದ್ದ ಫೋನ್​ ಕರೆಗಳಿಗೆ ಸ್ಪಂದಿಸುತ್ತ ನಾರಾಯಣಸ್ವಾಮಿ ವಿಮಾನನಿಲ್ದಾಣದೊಳಕ್ಕೆ ಪ್ರವೇಶಿಸಿದರು. ಪತ್ನಿ ಹಾಗೂ ಮೂವರು ಮಕ್ಕಳು ಮಾತ್ರವಲ್ಲದೆ ಸಹೋದರಿಯೊಬ್ಬರೊಂದಿಗೆ ಇಂಡಿಗೋ ವಿಮಾನದಲ್ಲಿ ದೆಹಲಿಗೆ ಹೊರಟ ನಾರಾಯಣಸ್ವಾಮಿ, ಅಲ್ಲಿ ದೆಹಲಿಯ ಟಿಬಿ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ತಂಗಲಿದ್ದಾರೆ. ನಂತರ ಕೇಂದ್ರ ಸಚಿವ ಸದಾನಂದ ಗೌಡ ಅವರನ್ನು ಭೇಟಿಯಾಗಲಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net