ಕಲಬುರಗಿಯಲ್ಲಿ ಹೆಚ್ಚಾದ ಪುಂಡರ ಹಾವಳಿ; ಮಚ್ಚು ಹಿಡಿದು ಪುಂಡಾಟ ಮೆರೆದ ಯುವಕರು

Kalburgi
Published on

ಕಲಬುರಗಿ: ಮೂರು ಜನ ಯುವಕರು ಕೈಯ್ಯಲ್ಲಿ ಮಚ್ಚು ಹಿಡಿದುಕೊಂಡು ಪುಂಡಾಟ ಮೆರೆದಿರುವ ಘಟನೆ ಕಲಬುರಗಿಯ ಶಹಾಬಜಾರ್​ನಲ್ಲಿ ನಡೆದಿದೆ. ಈ ಘಟನೆ ಮೇ 13ರಂದು ಹೊರಬಿದ್ದ ವಿಧಾನಸಭಾ ಚುನಾವಣೆ ಫಲಿತಾಂಶದ ದಿನ ರಾತ್ರಿ ನಡೆದಿದೆ ಎನ್ನಲಾಗಿದೆ. ಮಚ್ಚು ಹಿಡಿದು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವ ಘಟನೆಯೆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಕಲಬುರಗಿ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್​ನ ಕನೀಜ್ ಫಾತಿಮಾ ಶಾಸಕಿಯಾಗಿ ಆಯ್ಕೆಯಾದ ಹಿನ್ನಲೆ ಮೂವರು ಯುವಕರು ಮಚ್ಚು ಹಿಡಿದುಕೊಂಡು ಸಾರ್ವಜನಿಕರಿಗೆ ಭೀತಿ ಹುಟ್ಟಿಸುವಂತೆ ಸಂಭ್ರಮಿಸಿದ್ದಾರೆ. ಶಹಾಬಜಾರ್​ನ ಕುಲಾಯಿ ಗಲ್ಲಿ ಬಡಾವಣೆಯ ಉಸ್ಮಾನ್ ಎಂಬಾತನ ಬೆಂಬಲಿಗರು ರಸ್ತೆ ಹೋಗಿ ಬಂದು ಮಾಡುತ್ತಿದ್ದ ಜನರನ್ನು ಹೆದರಿಸುತ್ತಾ ಕೃತ್ಯ ಎಸಗಿದ್ದಾರೆ.

ಕಣ್ಮುಚ್ಚಿ ಕುಳಿತಿದೆಯಾ ಪೊಲೀಸ್ ಇಲಾಖೆ?

ಕಲಬುರಗಿ ಜಿಲ್ಲೆಯಲ್ಲಿ ಪುಂಡ ಪೋಕರಿಗಳ ಆರ್ಭಟ ಹೆಚ್ಚಾಗುತ್ತಿದ್ದು, ರಾತ್ರಿ ಹೊತ್ತು ಮಚ್ಚು-ಲಾಂಗುಗಳಿಂದ ಯುವಕರು ರಸ್ತೆ ಬದಿಯಲ್ಲಿ ಪುಂಡಾಟ ಮೆರೆಯುತ್ತಿದ್ದಾರೆ. ಇದೆಲ್ಲವನ್ನೂ ಅರಿತುಕೊಂಡಿದ್ದರೂ ಪೊಲೀಸ್ ಇಲಾಖೆ ಮಾತ್ರ ಕಣ್ಣುಮುಚ್ಚಿ ಕುಳಿತಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಮೇ 13ರಂದು ಮಚ್ಚು ಹಿಡಿದುಕೊಂಡು ಸಾರ್ವಜನಿಕರಿಗೆ ತೊಂದರೆ ಕೊಟ್ಟಿರುವ ಘಟನೆ ನಡೆದಿದೆ. ಇದಾಗಿ ಮೂರು ದಿನ ಕಳೆದರೂ ಪೊಲೀಸರು ತಪ್ಪಿತಸ್ಥರನ್ನು ಬಂಧಿಸಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೇ 10ರಂದು ರಾತ್ರಿ ಸ್ಕೂಟಿ ಮೇಲೆ ಲಾಂಗ್​ನಿಂದ ರಸ್ತೆಗೆ ಬೆಂಕಿ ಬರುವಂತೆ ಉಜ್ಜಿಕೊಂಡು ಗ್ಯಾಂಗ್​ ಒಂದು ಓಡಾಡಿರುವ ಘಟನೆಯೂ ನಡೆದಿದೆ. ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತಪ್ಪಿತಸ್ಥರ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net