ಅವಳ ಸಾವಿನ ಬೆನ್ನಿಗೇ ಅವನ ಆತ್ಮಹತ್ಯೆ: ಸೋಷಿಯಲ್ ಮೀಡಿಯಾ ಜೋಡಿ ನಡುವೆ ಪ್ರೀತಿಯ ಶಂಕೆ!

Manoj
Published on

ಬೆಂಗಳೂರು: ಕಾಲೇಜು ವಿದ್ಯಾರ್ಥಿನಿಯೊಬ್ಬಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸಹಪಾಠಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು ಇದೀಗ ಆತನ ಸಾವಿನ ಹಿಂದೆ ಪ್ರೀತಿಯ ಅನುಮಾನವೂ ಮೂಡುವಂತಾಗಿದೆ. ಸಾವಿಗೀಡಾದ ಇಬ್ಬರೂ ನಗರದಲ್ಲಿನ ಪ್ರತಿಷ್ಠಿತ ಕಾಲೇಜೊಂದರ ಒಂದೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದವರು.

ಬೆಂಗಳೂರಿನ ಚಿಕ್ಕಸಂದ್ರದ ಯುವತಿ ರಕ್ಷಿತಾ (17) ಹಾಗೂ ಯಲಹಂಕ ತಾಲೂಕು ಹನಿಯೂರು ಗ್ರಾಮದ ಮನೋಜ್​ ಮೃತಪಟ್ಟವರು. ನಗರದ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾಗಿರುವ ಇವರು ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಒಟ್ಟಿಗೇ ರೀಲ್​ ಇತ್ಯಾದಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.

ರಕ್ಷಿತಾ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು, ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರಕ್ಷಿತಾ ಸಾವಿನ ವಿಷಯ ತಿಳಿದ ಬಳಿಕ ಮನೋಜ್ ನಿನ್ನೆ ಸಂಜೆ ಹನಿಯೂರಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಬ್ಬರೂ ಪ್ರೀತಿಸುತ್ತಿದ್ದಿರಬಹುದು ಎಂಬ ಅನುಮಾನ ಮೂಡಿದ್ದು, ಅದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಮನೋಜ್​ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ಸಾವಿನ ಸಂಬಂಧ ರಾಜಾನುಕುಂಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಎರಡೂ ಪ್ರಕರಣಗಳ ಹಿನ್ನೆಲೆಯಲ್ಲಿ ಎರಡೂ ಠಾಣೆಗಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net