

ಬೆಂಗಳೂರು: ತನ್ನನ್ನು ಪ್ರೀತಿಸುತ್ತಿದ್ದವನಿಗೇ ಹೆದರಿಸಲು ಗೆಳೆಯನಿಗೆ ಹೇಳಿಕಳಿಸಿದ್ದ ಪ್ರೇಯಸಿ ಒಂದೆಡೆಯಾದರೆ, ಅತ್ತ ಬೇರೇನೋ ಕಾರಣ ಹೇಳಿ ದೂರು ಕೊಟ್ಟು ಪ್ರಿಯಕರ ಫಜೀತಿ ಮಾಡಿಕೊಂಡಿದ್ದಾನೆ. ಇಂಥದ್ದೊಂದು ವಿಚಿತ್ರ ಪ್ರೇಮಪ್ರಕರಣ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಈ ಪ್ರೇಮ ಪ್ರಕರಣದ ಪ್ರಿಯಕರ ಬೆಂಗಳೂರಿನ ಸಹಕಾರನಗರದ ಕಾಂತಿ ಸ್ವೀಟ್ಸ್ನಲ್ಲಿ ಕೆಲಸ ಮಾಡಿಕೊಂಡಿದ್ದ ಸಂತೋಷ್ (23) ಎಂಬಾತ. ಇವನು 2 ವರ್ಷದಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಇತ್ತೀಚೆಗಷ್ಟೇ ಪ್ರೇಯಸಿ ಈತನೊಂದಿಗೆ ಅಂತರ ಕಾಪಾಡಿಕೊಂಡಿದ್ದಾಳೆ. ಅದಾಗ್ಯೂ ಆಕೆಯನ್ನು ಬಿಟ್ಟಿರಲಾಗದ ಸಂತೋಷ್, ಅವಳಿಗೆ ಪದೇಪದೆ ಕರೆ ಮಾಡಿ ಗೋಳು ಹುಯ್ದುಕೊಳ್ಳುತ್ತಿದ್ದ.
ಇದರಿಂದ ರೋಸಿ ಹೋಗಿದ್ದ ಪ್ರೇಯಸಿ, ಸಂತೋಷ್ಗೆ ಹೆದರಿಸಿ ಬುದ್ಧಿ ಕಲಿಸು ಎಂದು ತನ್ನ ಗೆಳೆಯನೊಬ್ಬನಿಗೆ ಹೇಳಿದ್ದಳು. ಆತ ಇನ್ನೊಬ್ಬ ಗೆಳೆಯನಿಗೆ ಹೇಳಿ ಸಂತೋಷ್ಗೆ ಹೆದರಿಸುವಂತೆ ಸೂಚಿಸಿದ್ದ. ನ. 16ರ ರಾತ್ರಿ ಈತ ಸಂತೋಷ್ ವಾಸವಿದ್ದ ಸಹಕಾರ ನಗರದ ಮನೆಗೆ ನಾಲ್ಕೈದು ಜನರೊಂದಿಗೆ ನುಗ್ಗಿದ್ದ. ಸಂತೋಷ್ ಜತೆ ಕೆಲಸ ಮಾಡುತ್ತಿದ್ದ ಆರು ಮಂದಿ ಹುಡುಗರು ಅದೇ ರೂಮ್ನಲ್ಲಿ ವಾಸವಿದ್ದು, ಅಂದು ಸಂತೋಷ್ಗೆ ಹೆದರಿಸಲೆಂದು ಹೋಗಿದ್ದವರು ಸಂತೋಷ್ ಯಾರೆಂದು ಗೊತ್ತಾಗದೆ ಅಲ್ಲಿದ್ದ ಆತನ ಗೆಳೆಯ ಧರ್ಮೇಂದ್ರ ದಾಸ್ಗೆ ಥಳಿಸಿ, ಎರಡು ಮೊಬೈಲ್ ಫೋನ್ ಕಿತ್ತುಕೊಂಡು ಪರಾರಿಯಾಗಿದ್ದರು.
ಈ ಕುರಿತು ಕೊಡಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದ ಸಂತೋಷ್, ದರೋಡೆ ಆಗಿದೆ ಎಂದು ಹೇಳಿದ್ದ. ಆ ಮೇರೆಗೆ ತನಿಖೆಗಿಳಿದ ಪೊಲೀಸರಿಗೆ ಪ್ರಕರಣದ ಅಸಲಿಯತ್ತು ಗೊತ್ತಾಗಿದೆ. ಮಾತ್ರವಲ್ಲ, ದೂರು ಕೊಟ್ಟು ಸಂತೋಷ್ ತಾನಾಗೇ ಫಜೀತಿ ತಂದುಕೊಂಡಂತಾಗಿದೆ. ಈತ ತನ್ನ ಪ್ರೇಯಸಿಗೆ ಬ್ಲ್ಯಾಕ್ಮೇಲ್ ಮಾಡಿರುವುದೂ ಪೊಲೀಸರಿಗೆ ತನಿಖೆಯಲ್ಲಿ ತಿಳಿದು ಬಂದಿದೆ.
ಯುವತಿ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದ ಸಂತೋಷ್, ಖಾಸಗಿ ಕ್ಷಣಗಳ ವಿಡಿಯೋ ಮಾಡಿಕೊಂಡಿದ್ದ. ಆ ಫೋಟೋ ಹಾಗೂ ವಿಡಿಯೋ ಇಟ್ಟುಕೊಂಡು, ಹಣ ಹಾಗೂ ಲೈಂಗಿಕ ಸಹಕಾರಕ್ಕೆ ಒತ್ತಾಯಿಸಿ ಆತ ಬ್ಲ್ಯಾಕ್ಮೇಲ್ ಮಾಡುತ್ತಿದ್ದ. ಹಣ ಕೊಡದಿದ್ದರೆ, ಸಹಕರಿಸದಿದ್ದರೆ ಫೋಟೋ-ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದಾಗಿ ಹೆದರಿಸುತ್ತಿದ್ದ. ಇದನ್ನು ಆಕೆ ತನ್ನ ಇತರ ಸ್ನೇಹಿತರ ಬಳಿ ತಿಳಿಸಿದ್ದು, ಅವರು ಸಂತೋಷ್ ರೂಮ್ಗೆ ನುಗ್ಗಿದ್ದರು.
ಈ ಪ್ರಕರಣ ಸಂಬಂಧ ಮೂವರನ್ನು ಬಂಧಿಸಿರುವ ಪೊಲೀಸರು, ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಮತ್ತೊಂದೆಡೆ ದೂರು ಕೊಟ್ಟ ಕೆಟ್ಟ ಲವರ್ ವಿರುದ್ಧ ಯುವತಿಯೂ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಂತೋಷ್ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.