

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ನಿದ್ದೆ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಸುದ್ದಿಯಾಗಿ ಇಡೀ ರಾಜಕೀಯ ವಲಯದಲ್ಲಿ ಕೋಲಾಹಲವನ್ನೇ ಸೃಷ್ಟಿಸಿತ್ತು.
ಕಳೆದ ವಾರ ಬೆಂಗಳೂರಿನ ಎಮ್.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದ ಸಂತೋಷ್ ಅವರು 12 ನಿದ್ರೆ ಮಾತ್ರೆ ನುಂಗಿ ಆಸ್ಪತ್ರೆ ಸೇರಿದ್ದಾರೆ. ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಎಲ್ಲೆಡೆ ಸುದ್ದಿಯಾಗಿತ್ತು. ಸಂತೋಷ್ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳುವಂಥ ಯಾವುದೇ ಸಮಸ್ಯೆ ಇರಲಿಲ್ಲ ಎಂದು ಪಕ್ಷ ಸಮಜಾಯಿಷಿ ನೀಡುತ್ತ ಬಂದಿದ್ದರೂ, ವಿರೋಧ ಪಕ್ಷಗಳ ಬಾಯಿಗೆ ಇದು ಭಾರಿ ಆಹಾರವನ್ನೇ ನೀಡಿತ್ತು.
ಪ್ರತಿದಿನವೂ ಒಬ್ಬೊಬ್ಬರು ಒಂದೊಂದು ರೀತಿ ಟೀಕೆ ಮಾಡುವಲ್ಲಿ ನಿರತರಾಗಿದ್ದರು. ಆದರೆ ಇದೀಗ ಸಂತೋಷ್ ಅವರು ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದು, ಸದ್ಯ ಎಲ್ಲರ ಬಾಯಿಗೆ ಬೀಗ ಹಾಕಿದ್ದಾರೆ.
ತಾವು ಆಸ್ಪತ್ರೆಗೆ ದಾಖಲಾದ ಮೇಲೆ ಎದ್ದಿರುವ ವಿವಾದದ ಕುರಿತು ಅಚ್ಚರಿ ವ್ಯಕ್ತಪಡಿಸಿರುವ ಸಂತೋಷ್ ಅವರು, ಅರೆ ನಾನ್ಯಾಕೆ ಆತ್ಮಹತ್ಯೆ ಮಾಡಿಕೊಳ್ಳಲಿ, ನನಗೆ ಅಂಥ ಒತ್ತಡಗಳು ಯಾವುವು ಇಲ್ಲವೇ ಇಲ್ಲ. ಒಂದು ವೇಳೆ ಏನಾದರೂ ಜೀವನದಲ್ಲಿ ಸಮಸ್ಯೆ ಎದುರಾದರೂ ಆತ್ಮಹತ್ಯೆ ಮಾಡಿಕೊಳ್ಳುವವನಂತೂ ಅಲ್ಲವೇ ಅಲ್ಲ. ಇದೊಂದು ಅಚಾತುರ್ಯದ, ಆಕಸ್ಮಿಕ ಘಟನೆ ಅಷ್ಟೇ ಎಂದಿದ್ದಾರೆ.
ನನಗೆ ಸ್ವಲ್ಪ ಅಜೀರ್ಣವಾಗಿದ್ದ ಹಿನ್ನೆಲೆ ಮಾತ್ರೆ ನುಂಗಿದ್ದೆ. ಮೂರು ದಿನದ ಹಿಂದೆ ಮದುವೆ ಕಾರ್ಯಕ್ರಮದಲ್ಲಿ ಊಟದ ಮಾಡಿದ ಪರಿಣಾಮ ಅಜೀರ್ಣವಾಗಿತ್ತು. ಅಜೀರ್ಣ ಮಾತ್ರೆ ಬದಲು ನಿದ್ದೆ ಮಾತ್ರೆ ಸೇವಿಸಿಬಿಟ್ಟಿದ್ದೆ. ನನಗೆ ನಿದ್ದೆ ಬರದಿದ್ದಾಗ ನಿದ್ದೆ ಮಾತ್ರೆ ಸೇವಿಸುವ ಅಭ್ಯಾಸವಿದೆ. ಅರ್ಧ ಮಾತ್ರೆ ಸೇವಿಸುತ್ತಿದ್ದೆ, ಮೊನ್ನೆ ಇಡೀ ಮಾತ್ರೆ ಸೇವಿಸಿದ್ದೆ.
ಸಿಕ್ಕಾಪಟ್ಟೆ ಮಾತ್ರೆ ಸೇವಿಸಿದ್ದೆ ಎನ್ನುವ ಸುದ್ದಿ ಕೂಡ ನಿಜವಲ್ಲ ಎಂದಿರುವ ಸಂತೋಷ್, ಸುಖಾಸುಮ್ಮನೆ ಇದರ ಬಗ್ಗೆ ವಿವಾದ ಸೃಷ್ಟಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉಪಚುನಾವಣೆಯ ಸೋಲಿನಿಂದ ಡಿಕೆಶಿಗೆ ಮತಿಗೆಟ್ಟಿರಬೇಕು. ಅವರು ಈ ಮೊದಲೂ ಅಸಂಬದ್ಧ ರೀತಿಯ ಹೇಳಿಕೆಗಳನ್ನ ಕೊಟ್ಟಿದ್ದರು ಎಂದಿದ್ದಾರೆ.
ರಾಜಕೀಯ ಒತ್ತಡ ಯಾವ ಕಾಲಕ್ಕೂ ಇರುತ್ತೆ, ಅದಕ್ಕಾಗಿ ಮಾತ್ರೆ ತೆಗೆದುಕೊಳ್ಳುವುದು, ಆತ್ಮಹತ್ಯೆ ಮಾಡಿಕೊಳ್ಳುವವ ನಾನಲ್ಲ ಎಂದೂ ಸ್ಪಷ್ಟನೆ ನೀಡಿದ್ದಾರೆ.