

ಮಂಡ್ಯ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ 2023ರಲ್ಲಿಯೂ ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿದ್ದಾರೆ. ಇದು ನಾನು ನುಡಿಯುತ್ತಿರುವ ಭವಿಷ್ಯ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಎಂ.ದೊಡ್ಡಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು, ಈ ವಿಷಯವನ್ನು ಹೇಳಿದ್ದಾರೆ. 2023ಕ್ಕೆ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡುವುದೇ ನನ್ನ ಗುರಿಯಾಗಿದೆ. ಇದಕ್ಕಾಗಿ ರಾಜ್ಯಾಧ್ಯಂತ ಪಕ್ಷ ಸಂಘಟನೆಯಲ್ಲಿ ತೊಡಗುತ್ತೇನೆ. ಸರ್ವ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ನಂತರ ತಮ್ಮ ತಂದೆಯವರ ಕುರಿತು ಒಂದಿಷ್ಟು ಮಾಹಿತಿಗಳನ್ನು ನೀಡಿದ ನಿಖಿಲ್, ಕುಮಾರಸ್ವಾಮಿಯವರು ಭಾವನಾತ್ಮಕ ಮನುಷ್ಯರಾಗಿದ್ದಾರೆ. ಆದರೆ ಕೆಲವರು ಅವರ ಬಗ್ಗೆ ಕ್ಷುಲ್ಲಕವಾಗಿ ಮಾತನಾಡುತ್ತಾರೆ. ಮಂಡ್ಯ, ರಾಮನಗರ ಜಿಲ್ಲೆಗಳಿಗೆ ಮಾತ್ರವೇ ಸಿಎಂ ಆಗಿದ್ದಾರೆ ಎಂಬುದಾಗಿ ಹಿಂದೆ ಅವರನ್ನು ಅಣಕ ಮಾಡಿದವರೇ ಹೆಚ್ಚು. ಆದರೆ ಇಂಥ ನಿರಾಧಾರ ಆರೋಪಗಳಿಗೆ ಅವರು ಎಂದಿಗೂ ತಲೆ ಕೆಡಿಸಿಕೊಂಡಿಲ್ಲ. ಎಲ್ಲಾ ಜಿಲ್ಲೆಗಳಿಗೂ ಅನುದಾವನ್ನು ಪಕ್ಷ ಭೇದ ಮರೆತು ನೀಡಿದ್ದಾರೆ ಎಂದು ನಿಖಿಲ್ ಹೇಳಿದರು.
ಜೆಡಿಎಸ್ ಪಕ್ಷವು ಮಂಡ್ಯ, ಮೈಸೂರು, ರಾಮನಗರಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಉತ್ತರ ಕರ್ನಾಟಕ ಭಾಗದಲ್ಲೂ ಪಕ್ಷ ಪ್ರಬಲವಾಗಿದೆ. ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡುವ ಸಲುವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಪ್ರವಾಸ ಕೈಗೊಳ್ಳಲಾಗುತ್ತದೆ ಎಂದರು.